Advertisement

ಪ್ರಕೃತಿ ವಿಕೋಪ ಮುನ್ಸೂಚನೆ ತಿಳಿಯಲು ತಂತ್ರಾಶ ಸಿದ್ದತೆಗೆ ಚಿಂತನೆ :ಉ.ಕನ್ನಡ ಜಿಲ್ಲಾಧಿಕಾರಿ

07:32 PM Aug 26, 2021 | Team Udayavani |

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಹ ಮತ್ತು ಗುಡ್ಡ ಕುಸಿತದ ಪ್ರಕೃತಿ ವಿಕೋಪ ತಡೆಯಲು ತಂತ್ರಾಶ ರೂಪಿಸುವ ಚಿಂತನೆ ನಡೆದಿದೆ ಎಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ಹೇಳಿದರು.

Advertisement

ಕಾರವಾರದಲ್ಲಿ ಗುರುವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ಪ್ರಕೃತಿ ವಿಕೋಪಗಳ ನಿರ್ವಹಣೆಗೆ ಕೇಂದ್ರೀಕೃತ ವ್ಯವಸ್ಥೆಯೊಂದನ್ನು ಜಾರಿಗೊಳಿಸಲಾಗುವುದು. ನೆರೆ ಪೀಡಿತ ಪ್ರದೇಶಗಳನ್ನು ಗುರುತಿಸಿ, ಯಾವ ಕಾರಣಗಳಿಂದ ಪ್ರವಾಹ ಆಗಲಿದೆ, ಎಷ್ಟು ಸಮಯದಲ್ಲಿ ಹಾಗೂ ಯಾವ ಮಟ್ಟದಲ್ಲಿ ಆಗಲಿದೆ ಎಂದು ಸಾಕಷ್ಟು ಮೊದಲೇ ವೈಜ್ಞಾನಿಕ ಕ್ರಮದಿಂದ ತಿಳಿಯಲು ಸಾಧ್ಯವಿದೆ. ಜೊತೆಗೇ ಆ ‍ಪ್ರದೇಶಗಳ ಜನರನ್ನು ಸುರಕ್ಷಿತವಾಗಿ ತೆರವು ಮಾಡಬಹುದು. ಮುಂದಿನ ಮಳೆಗಾಲಕ್ಕೂ ಮೊದಲು ಈ ವ್ಯವಸ್ಥೆ ಜಾರಿಗೆ ತರಲು ಪ್ರಯತ್ನಿಸಲಾಗುವುದು’ ಎಂದರು.

‘ಅಣಶಿ ಘಟ್ಟದಲ್ಲಿ ಹೆದ್ದಾರಿಯಿಂದ ಕಲ್ಲು ಮಣ್ಣನ್ನು ಸ್ಥಳೀಯರು ತೆರವು ಮಾಡಿದ್ದಾರೆ. ಅವರ ಶ್ರಮದಾನ ಶ್ಲಾಘನೀಯ. ಆ ಭಾಗದಲ್ಲಿ ಮಣ್ಣಿನ ಧಾರಣಾ ಸಾಮರ್ಥ್ಯದ ಬಗ್ಗೆ ಅಧ್ಯಯನ ಆಗಬೇಕಿದೆ. ಹುಬ್ಬಳ್ಳಿಯ ಬಿ.ವಿ.ಬಿ ಎಂಜಿನಿಯರಿಂಗ್ ಕಾಲೇಜು ಮತ್ತು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರ ತಂಡಗಳು ಪರಿಶೀಲನೆ ಮಾಡಿವೆ. ಆ.29ರ ವೇಳೆಗೆ ಅವರ ವರದಿಗಳು ಸಲ್ಲಿಕೆಯಾಗುವ ನಿರೀಕ್ಷೆಯಿದೆ’ ಎಂದು ಜಿಲ್ಲಾಧಿಕಾರಿ ನುಡಿದರು.

ಇದನ್ನೂ ಓದಿ :ವಾಯುಭಾರ ಕುಸಿತ : ಆ.29, 30ರಂದು ರಾಜ್ಯದ ಆರು ಜಿಲ್ಲೆಗಳಿಗೆ ಹೈ ಅಲರ್ಟ್‌
ಸ್ಪಂದನ :

‘ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ. ಪ್ರವಾಸಿ ತಾಣಗಳು, ಸಾರ್ವಜನಿಕರು ಹೆಚ್ಚು ಬಂದು ಹೋಗುವ ಸ್ಥಳಗಳಲ್ಲಿ ಒಂದು ವಾರ, 10 ದಿನಗಳಿಗೊಮ್ಮೆ ಸ್ಥಳೀಯರ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಸದ್ಯ ಸೋಂಕು ದೃಢಪಡುವ ಪ್ರಮಾಣವು ಶೇಕಡಾ 1ಕ್ಕಿಂತ ಕಡಿಮೆಯಿದೆ’ ಎಂದರು.

Advertisement

‘ಲಸಿಕಾ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಇದೆ. ಜಿಲ್ಲೆಯಲ್ಲಿ 10.24 ಲಕ್ಷ ಜನರಿಗೆ ಲಸಿಕಾ ಗುರಿ ಹೊಂದಲಾಗಿದೆ. ಈಗಾಗಲೇ ಸುಮಾರು 6 ಲಕ್ಷ ಮಂದಿ ಕನಿಷ್ಠ ಒಂದು ಡೋಸ್ ಪಡೆದುಕೊಂಡಿದ್ದಾರೆ. ಕಾರವಾರ ತಾಲ್ಲೂಕಿನಲ್ಲಿ ಶೇ 91ರಷ್ಟು ಪ್ರಗತಿಯಾಗಿದೆ’ ಎಂದು ಅಂಕಿ ಅಂಶ ತಿಳಿಸಿದರು.

ಜಿಲ್ಲೆಗೆ ಪ್ರತ್ಯೇಕ ವೆಬ್ ಪೋರ್ಟಲ್ :

ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ವೆಬ್ ಪೋರ್ಟಲ್ ಸಿದ್ಧಪಡಿಸಲು ತೀರ್ಮಾನಿಸಲಾಗಿದೆ. ಅದಕ್ಕೆ ಸಂಬಂಧಿಸಿ ಜಿಲ್ಲೆಯ ಸಂಸ್ಕೃತಿ, ವನ್ಯಜೀವಿ, ಕಡಲತೀರಗಳು, ಜನಜೀವನ, ಈ ರೀತಿ ಏಳೆಂಟು ವಿಭಾಗಗಳ ಸಮಗ್ರ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ತಜ್ಞರ ಮೂಲಕ ವಿಷಯಗಳನ್ನು ಸಿದ್ಧಪಡಿಸಿಕೊಂಡು ವೆಬ್‌ಸೈಟ್ ಲೋಕಾರ್ಪಣೆ ಮಾಡಲಾಗುವುದು ಎಂದರು.

‘ಕಾಳಿ ನದಿಯಲ್ಲಿ ಸಮುದ್ರ ವಿಮಾನ (ಸೀ ಪ್ಲೇನ್) ಸಂಚಾರದ ಬಗ್ಗೆ ಸರ್ಕಾರದಿಂದಲೇ ಪ್ರಸ್ತಾಪವಿದೆ. ಅಲ್ಲದೇ ನದಿಗಳ ಅಳಿವೆಗಳಲ್ಲಿ ಜಲ ಸಾರಿಗೆ ಮೂಲಕ ಸಂಚರಿಸುವ ಬಗ್ಗೆಯೂ ಯೋಚನೆಯಿದೆ’ ಎಂದು ಹೇಳಿದರು.
ಹೊನ್ನಾವರ ಬಳಿಯ ಕಾಸರಕೋಡು ಬ್ಲೂ ಫ್ಲ್ಯಾಗ್ ರಾಷ್ಟ್ರೀಯ ತೀರ್ಪುಗಾರರ ಸಮಿತಿಯಲ್ಲಿ ಪ್ರಮಾಣ ಪತ್ರವು ಪುನಃ ಸಿಕ್ಕಿದೆ. ಅಂತರರಾಷ್ಟ್ರೀಯ ಸಮಿತಿಯಲ್ಲೂ ಸಿಗುವ ವಿಶ್ವಾಸವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next