ಸೈಕಲ್ ಸವಾರಿಯಲ್ಲೂ ರಾಹುಲ್ ಫೇಲ್
ಹಾಥ್ ಜತೆ ಬಿಎಸ್ಪಿಯ “ಹಾಥಿ’ ಕೂಡ ಪರಾಭವ
ಕಮಲಕ್ಕೀಗ 325 ದಳ
ನವದೆಹಲಿ/ಲಕ್ನೋ: ಇಡೀ ದೇಶಕ್ಕೆ ದೇಶವನ್ನೇ ಬೆರಗಾಗಿಸುವಂತೆ ಉತ್ತರಪ್ರದೇಶದಲ್ಲಿ ಬಿಜೆಪಿ ಅಭೂತಪೂರ್ವ ಹಾಗೂ ಐತಿಹಾಸಿಕ ಜಯ ಗಳಿಸಿದೆ.
Advertisement
403 ವಿಧಾನಸಭಾ ಕ್ಷೇತ್ರಗಳ ಪೈಕಿ ಬರೋಬ್ಬರಿ 325 ಕ್ಷೇತ್ರಗಳು ಅಚ್ಚರಿಯ ರೀತಿಯಲ್ಲಿ ಕಮಲ ಪಡೆಯ ಪಾಲಾಗಿದೆ. ರಾಜಕೀಯವಾಗಿ ಅತ್ಯಂತ ನಿರ್ಣಾಯಕ ರಾಜ್ಯವಾಗಿರುವ ಉತ್ತರಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸುನಾಮಿಯು ಎಸ್ಪಿ, ಕಾಂಗ್ರೆಸ್, ಬಿಎಸ್ಪಿಯನ್ನು ಹೇಳಹೆಸರಿಲ್ಲದಂತೆ ಕೊಚ್ಚಿಹೋಗುವಂತೆ ಮಾಡಿದೆ.
Related Articles
Advertisement
“ನಾಮ್ ಬೋಲ್ತಾ ಹೈ’: 2012ರಲ್ಲಿ ಅಧಿಕಾರಕ್ಕೇರಿದ್ದ ಅಖೀಲೇಶ್ ಯಾದವ್ ಅವರು ಈ ಬಾರಿ “ಕಾಮ್ ಬೋಲ್ತಾ ಹೈ'(ಕೆಲಸವೇ ಎಲ್ಲವನ್ನೂ ಹೇಳುತ್ತದೆ) ಎಂಬ ಘೋಷಣೆಯೊಂದಿಗೆ ಚುನಾವಣಾ ರಣರಂಗವನ್ನು ಪ್ರವೇಶಿಸಿದ್ದರು. ತಾವು ಮಾಡಿರುವ ಅಭಿವೃದ್ಧಿ ಕಾರ್ಯಗಳಿಗಾಗಿ ಜನ ತಮಗೆ ಮತ ಹಾಕುತ್ತಾರೆ ಎಂಬ ವಿಶ್ವಾಸ ಅವರದ್ದಾಗಿತ್ತು.
ಆದರೆ, ಪ್ರಧಾನಿ ಮೋದಿ ಅವರ “ನಾಮ್’ ಮುಂದೆ ಅಖೀಲೇಶ್‌ರ “ಕಾಮ್’ ಮೂಕವಾಯಿತು. ಉತ್ತರಪ್ರದೇಶದಾದ್ಯಂತ “ಮೋದಿ, ಮೋದಿ, ಮೋದಿ’ ಬಿಟ್ಟರೆ ಬೇರೆ ಮಾತೇ ಇರಲಿಲ್ಲ. ಮೋದಿಯವರ ಜನಪ್ರಿಯತೆಯು ಅಷ್ಟರ ಮಟ್ಟಿಗೆ ಅಲ್ಲಿನ ಜನರನ್ನು ಆಕರ್ಷಿಸಿತ್ತು. ಬಿಜೆಪಿಯನ್ನು ಸೋಲಿಸಲು ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಕೂಡ ಎಸ್ಪಿಯ ಜತೆ ಕೈಜೋಡಿಸಿದರೂ, ಮೋದಿ ಅಲೆಯ ಮುಂದೆ ಅದ್ಯಾವುದೂ ನಿಲ್ಲಲಿಲ್ಲ. “ಯುಪಿ ಕೊ ಏ ಸಾಥ್ ಪಸಂದ್ ಹೇ’ (ಯುಪಿಗೆ ಈ ಮೈತ್ರಿ ಇಷ್ಟವಾಗಿದೆ) ಎಂದು ಎಸ್ಪಿ-ಕಾಂಗ್ರೆಸ್ ಎಷ್ಟೇ ಕೂಗಿಕೊಂಡರೂ, ಅದು ನಮಗೆ “ಪಸಂದ್’ ಆಗಲಿಲ್ಲ ಎಂಬುದನ್ನು ಮತದಾರರು ತಮ್ಮ ತೀರ್ಪಿನ ಮೂಲಕ ತೋರಿಸಿಕೊಟ್ಟರು. ಜತೆಗೆ, “ನಮ್ಮದೇ ಹುಡುಗರು'(ಯುಪಿ ಕೇ ಲಡೆRà) ಆಗಿದ್ದರೂ, ವಂಶಾಡಳಿತ, ಅಧಿಕಾರದ ದಾಹಕ್ಕಿಂತ ಅಭಿವೃದ್ಧಿಗೇ ನಮ್ಮ ಮತ ಎಂಬುದನ್ನು ಸಾಬೀತುಪಡಿಸಿದರು. ಇನ್ನೊಂದೆಡೆ, ಒಂದು ಕಾಲದಲ್ಲಿ ಸ್ಪಷ್ಟ ಬಹುಮತ ಗಳಿಸಿ ಅಧಿಕಾರ ನಡೆಸಿದ್ದ ಬಿಎಸ್ಪಿಯನ್ನು ಈ ಬಾರಿ ಜನ 3ನೇ ಸ್ಥಾನಕ್ಕಿಳಿಸಿದ್ದಾರೆ. ಬಿಎಸ್ಪಿ ತನ್ನ ತವರು ಕ್ಷೇತ್ರದಲ್ಲೇ ಧೂಳೀಪಟವಾಗಿದೆ. ಉ.ಪ್ರ.ದಲ್ಲಿ ಈ ಮಟ್ಟದ ಭರ್ಜರಿ ಗೆಲವನ್ನು ಸ್ವತಃ ಮೋದಿ ಹಾಗೂ ಅಮಿತ್ ಶಾ ಅವರೇ ಕನಸು ಮನಸಿನಲ್ಲೂ ನಿರೀಕ್ಷಿಸಿರಲಿಕ್ಕಿಲ್ಲ.
ಬಿಜೆಪಿಗೆ ಪೂರ್ಣ ಬಹುಮತ:ಉತ್ತರಪ್ರದೇಶದಲ್ಲಿ ಈವರೆಗೆ ಯಾವುದೇ ರಾಜಕೀಯ ಪಕ್ಷವೂ ಪಡೆಯದಷ್ಟು ಬಹುಮತವನ್ನು ಬಿಜೆಪಿ ಪಡೆದಿದೆ. 403 ಕ್ಷೇತ್ರಗಳ ಪೈಕಿ 325ರಲ್ಲಿ ಸಾಧಿಸಿರುವ ಜಯವು ಸ್ವತಃ ಬಿಜೆಪಿಗೇ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಇದು ಪ್ರತಿಷ್ಠೆಯನ್ನು ಪಣಕ್ಕಿಟ್ಟು 24 ರ್ಯಾಲಿಗಳನ್ನು ನಡೆಸಿದ ಪ್ರಧಾನಿ ಮೋದಿ ಹಾಗೂ ಅತ್ಯುತ್ತಮ ಕಾರ್ಯತಂತ್ರ ರೂಪಿಸಿದ ಅಮಿತ್ ಶಾ ಅವರ ಗೆಲುವು. ಈ ಫಲಿತಾಂಶವು ಇಡೀ ದೇಶದ ರಾಜಕೀಯ ಚಿತ್ರಣವನ್ನೇ ಬದಲಿಸಿರುವುದು ವಿಶೇಷ. ಕಳೆದ ಚುನಾವಣೆಯಲ್ಲಿ 47 ಸೀಟುಗಳನ್ನು ಗಳಿಸಿದ್ದ ಬಿಜೆಪಿ ಈಗ ಶೇ.40ಕ್ಕೂ ಹೆಚ್ಚು ಮತಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಫಲಿತಾಂಶ ಬಿಜೆಪಿ ಕಡೆ ತಿರುಗುತ್ತಿದ್ದಂತೆಯೇ ಸಿಎಂ ಅಖೀಲೇಶ್ ಯಾದವ್ ಅವರು ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಭಾನುವಾರ ನಡೆಯುವ ಬಿಜೆಪಿಯ ಸಂಸದೀಯ ಮಂಡಳಿ ಸಭೆಯಲ್ಲಿ ನೂತನ ಸಿಎಂ ಅಭ್ಯರ್ಥಿಯನ್ನು ಘೋಷಿಸಲಾಗುತ್ತದೆ. ಆ ಮೂಲಕ ಉತ್ತರದಲ್ಲಿ ಇನ್ನು 5 ವರ್ಷಗಳ ಕಾಲ ಧ್ವಜ”ಕೇಸರಿ’ ರಾರಾಜಿಸಲಿದೆ. – ಆಗ್ರಾ-ಬರೇಲಿಯಲ್ಲಿ ಎಲ್ಲ 9 ಸೀಟುಗಳೂ ಬಿಜೆಪಿಗೆ
– ಅಲಿಗಡದಲ್ಲಿ ಎಲ್ಲ 7, ಮೀರತ್‌ನಲ್ಲಿ 7ರ ಪೈಕಿ 6ರಲ್ಲಿ ಗೆಲುವು
– ವಾರಾಣಸಿಯಲ್ಲಿ ಎಲ್ಲ 8 ಸೀಟುಗಳೂ ಕಮಲದ ತೆಕ್ಕೆಗೆ
– 52 ಸಾವಿರ ಮತಗಳ ಅಂತರದಿಂದ ಗೆದ್ದ ಶಿವಪಾಲ್ ಯಾದವ್
– ಮುಲಾಯಂ ಸೊಸೆ ಅಪರ್ಣಾಗೆ ಚೊಚ್ಚಲ ಸ್ಪರ್ಧೆಯಲ್ಲೇ ಸೋಲು