ಕುಮಟಾ: ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಹಾಗೂ ಉದ್ಯೋಗ ಸೃಷ್ಟಿಗಾಗಿ ಆಗ್ರಹಿಸಿ ಕುಮಟಾದಿಂದ ಭಟ್ಕಳ ವರೆಗೆ ಪಾದಯಾತ್ರೆ ಆರಂಭವಾಗಿದ್ದು ಪಟ್ಟಣದ ಮಾಸ್ತಿಕಟ್ಟೆ ದೇವಾಲಯದ ಬಳಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅನಂತಮೂರ್ತಿ ಹೆಗಡೆ ಉತ್ತರ ಕನ್ನಡಕ್ಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯತೆ ಇದ್ದು, ಈ ಹಿಂದಿನ ಸರಕಾರ ಜಾಗವನ್ನು ಗುರುತಿಸಿತ್ತು.ಸಿದ್ದರಾಮಯ್ಯ ಸರ್ಕಾರ ಈ ಕುರಿತು ತಕ್ಷಣದಲ್ಲಿ ಹಣ ಮಂಜೂರು ಮಾಡಬೇಕು.ಒಂದು ವೇಳೆ ಹಣ ಬಿಡುಗಡೆ ಮಾಡದೇ ಇದ್ದರೆ ಉಸ್ತುವಾರಿ ಸಚಿವ ಮಂಕಾಳು ವೈದ್ಯರ ಕಚೇರಿ ಮುಂದೆ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ತಿಳಿಸಿದರು.
ನಮ್ಮ ಜಿಲ್ಲೆಯಲ್ಲಿ ಘಟ್ಟದ ಮೇಲೊಂದು ಘಟ್ಟದ ಟ್ರಾಮಾ ಸೆಂಟರ್ ಅಗತ್ಯತೆ ಇದ್ದು, ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು.ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಜೊತೆಗೆ, ಮಹಿಳೆಯರಿಗೆ ಉದ್ಯೋಗ ನೀಡುವಂತೆ ಕೈಗಾರಿಕಾ ವಲಯ ಸ್ಥಾಪನೆಗೆ ಸರಕಾರ ಮುಂದಾಗಬೇಕು ಎಂದು ಒತ್ತಾಯಿಸಿದ ಅವರು, ಎಲ್ಲಡಿಯಲ್ಲಿಯೂ ಗಾರ್ಮೆಂಟ್ಸ್ ಫ್ಯಾಕ್ಟರಿಗಳನ್ನು ಸ್ಥಾಪಿಸಬೇಕು. ಸರಕಾರವೇ 15 ರಿಂದ 20 ಎಕರೆಯನ್ನು ಗುರುತಿಸಿ. ಉದ್ದಿಮೆದಾರರಿಗೆ ಅವುಗಳನ್ನು ನೀಡುವುದರ ಮೂಲಕ ಉದ್ಯೋಗ ಸೃಷ್ಟಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.ಈ ಮೂಲಭೂತ ಅಗತ್ಯತೆಗಳಿಗಾಗಿ ಮೂರು ದಿನಗಳ ಕಾಲ ಪಾದಯಾತ್ರೆ ಹಮ್ಮಿಕೊಂಡಿದ್ದು ಭಟ್ಕಳ ತಲುಪಿ ಅಲ್ಲಿ ಸಚಿವ ಮಂಕಾಳು ವೈದ್ಯರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ ಈ ಹಿಂದೆಯೂ ನಾನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಧ್ವನಿ ಎತ್ತಿದೇನೆ. ಮಧ್ಯವರ್ತಿ ಸ್ಥಳವಾದ ಕುಮಟಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯವಿದ್ದು, ನಾನೂ ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ, ಮುಂದೆಯೂ ಮಾಡಲು ಸಿದ್ದನಿದ್ದೇನೆ ಎಂದರು. ಜಿ.ಪಂ ಮಾಜಿ ಸದಸ್ಯರಾದ ಶಿವಾನಂದ ಹೆಗಡೆ, ವಕೀಲ ಆರ್.ಜಿ ನಾಯ್ಕ ಸೇರಿದಂತೆ ಅನೇಕರು ಇದ್ದರು.