Advertisement

Uttara Kannada ರೈತಾಪಿ ವರ್ಗದ ಮಿನಿ ಸಂಕ್ರಾಂತಿ ಹಬ್ಬಕ್ಕೆ ಸಿದ್ಧತೆ

04:06 PM Jul 04, 2024 | Team Udayavani |

ಗದಗ: ಉತ್ತರ ಕರ್ನಾಟಕ ರೈತಾಪಿ ವರ್ಗದ ಮಿನಿ ಸಂಕ್ರಾಂತಿ ಎಂದೇ ಕರೆಯಲ್ಪಡುವ ಮಣ್ಣೆತ್ತಿನ ಅಮವಾಸ್ಯೆ ಆಚರಣೆಗೆ ಸಕಲ ಸದ್ದತೆಗಳು ನಡೆದಿವೆ. ಮಣ್ಣೆತ್ತಿನ ಅಮವಾಸ್ಯೆಯಂದು ಮಣ್ಣಿನಿಂದ ತಯಾರಿಸಿದ ಎತ್ತುಗಳನ್ನು ಹಾಗೂ ಗ್ವಾದ್ಲಿಯನ್ನು ತಂದು ಪೂಜಿಸುವ ಪದ್ಧತಿಯು ಸಾಂಪ್ರದಾಯಿಕವಾಗಿ ಮುಂದುವರಿದುಕೊಂಡು ಬಂದಿದೆ.

Advertisement

ಈ ಹಿನ್ನೆಲೆ ಜಿಲ್ಲಾದ್ಯಂತ ಮಾರುಕಟ್ಟೆಗಳಲ್ಲಿ ಹಾಗೂ ಕುಂಬಾರರ ಮನೆಗಳಲ್ಲಿ ವಿವಿಧ ಆಕೃತಿ ಹಾಗೂ ಬಣ್ಣಗಳಿಂದ ಕೂಡಿದ ಮಣ್ಣೆತ್ತುಗಳ ಮಾರಾಟ ಪ್ರಕ್ರಿಯೆ ಆರಂಭವಾಗಿದ್ದು, ಖರೀದಿಯು ಜೋರಾಗಿದೆ. ರೈತರು, ಸಾರ್ವಜನಿಕರು ಮಾರುಕಟ್ಟೆಗೆ ಧಾವಿಸಿ ಮಣ್ಣೆತ್ತಿನ ಖರೀದಿಯಲ್ಲಿ ನಿರತರಾಗಿದ್ದಾರೆ.

ಕಾರಹುಣ್ಣಿಮೆ ಬಳಿಕ ಆಗಮಿಸುವ ಮಣ್ಣೆತ್ತಿನ ಅಮವಾಸ್ಯೆ ನಂತರ ಬಿತ್ತನೆ ಕಾಲವಾಗಿದ್ದರಿಂದ ರೈತರು ಸೇರಿದಂತೆ ಸಾರ್ವಜನಿಕರು, ರೈತರು ಸಂಭ್ರಮದಿಂದ ಮಣ್ಣೆತ್ತನ್ನು ಖರೀದಿಸುವುದರ ಜತೆಗೆ ಕೃಷಿ ಪರಿಕರ ಹಾಗೂ ಎತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸುವ ರೂಢಿಯಿದೆ.

ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಒಂದಿಷ್ಟು ನೆಮ್ಮದಿ ವಾತಾವರಣ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಮಣ್ಣೆತ್ತಿನ ಅಮವಾಸ್ಯೆ ಆಚರಣೆಯ ಮೆರುಗು ಹೆಚ್ಚಿದೆ.

ಒಂದೆಡೆ ಎತ್ತುಗಳಿಗೆ ಬೇಕಾಗುವ ಮಿಣಿ, ಜತ್ತಿಗೆ, ಮೂಗುದಾರ, ಬಾರಕೋಲು, ಎತ್ತುಗಳನ್ನು ಕಟ್ಟಲು ಬೇಕಾಗುವ ಸರಪಳಿಗಳನ್ನು ರೈತರು ಖರೀದಿಸಿದರು. ಮತ್ತೊಂದೆಡೆ ಸಾರ್ವಜನಿಕರು ಮಣ್ಣೆತ್ತುಗಳನ್ನು ಖರೀದಿ ಮಾಡಿದರು.

Advertisement

ಮಣ್ಣೆತ್ತು ಕೂಡ ಬಲು ದುಬಾರಿ: ಮಣ್ಣೆತ್ತಿನ ಅಮವಾಸ್ಯೆ ನಿಮಿತ್ತ ನಗರದ ತೋಂಟದಾರ್ಯ ಮಠ, ಹಾತಲಗೇರಿ ನಾಕಾ, ಬೆಟಗೇರಿ ಟೆಂಗಿನಕಾಯಿ ಬಜಾರ್, ಟಾಂಗಾಕೂಟ, ಮುಳಗುಂದ ನಾಕಾ ಸೇರಿ ವಿವಿಧೆಡೆ ಮಣ್ಣೆತ್ತಿನ ಮಾರಾಟ ಜೋರಾಗಿತ್ತು.

ಕಳೆದ ಕೆಲ ವರ್ಷಗಳ ಹಿಂದೆ ಜೋಡಿ ಮಣ್ಣೆತ್ತೆ ಮತ್ತು ಗ್ವಾದ್ಲಿಗೆ 15ರಿಂದ 30 ರೂ. ದರ ನಿಗದಿಯಾಗಿರುತ್ತಿತ್ತು. ಆದರೆ, ಪ್ರಸಕ್ತ ವರ್ಷ ಜೋಡಿ ಮಣ್ಣೆತ್ತಿಗೆ ಕನಿಷ್ಠ 50 ರಿಂದ 80 ರೂ. ದರ ಇತ್ತು. ಅಲ್ಲದೇ, ಅಲಂಕಾರಿಕ ಮಣ್ಣೆತ್ತಿನ ಬೆಲೆ 400 ರೂ. ಗೆ ನಿಗದಿಪಡಿಸಲಾಗಿತ್ತು.

ಮಣ್ಣೆತ್ತಿಗೆ ಸಿಂಗಾರ: ಗ್ರಾಮೀಣ ಭಾಗದಲ್ಲಿ ರೈತರು ತಮ್ಮ ಹೊಲದಲ್ಲಿನ ತಿಳಿ ಎರೆಮಣ್ಣನ್ನು ಬಳಸಿ ಎತ್ತುಗಳು ಹಾಗೂ ಗ್ವಾದ್ಲಿಯನ್ನು ನಿರ್ಮಿಸುತ್ತಾರೆ. ಬಳಿಕ ಅವುಗಳನ್ನು ಜೋಳ, ಗೋಧಿ ಸೇರಿದಂತೆ ವಿವಿಧ ಧಾನ್ಯಗಳಿಂದ ಸಿಂಗಾರ ಮಾಡುತ್ತಾರೆ. ಆದರೆ, ಸಮಯದ ಅಭಾವದಿಂದ ಬಹುತೇಕರು ಸಿದ್ಧಪಡಿಸಿದ ಮಣ್ಣೆತ್ತುಗಳನ್ನೆ ಒಯ್ದು ಪೂಜೆ ಸಲ್ಲಿಸುತ್ತಾರೆ. ಮಣ್ಣೆತ್ತಿನ ಅಮಾವಾಸ್ಯೆ ಮುಗಿದ ಮರುದಿನ ಕೆರೆ, ಬಾವಿ ಹಾಗೂ ಹಳ್ಳ ಬಳಿ ಪೂಜೆ ಸಲ್ಲಿಸಿ ಮಣ್ಣೆತ್ತುಗಳನ್ನು ಬಿಟ್ಟು ಹೋಗುವುದು ವಾಡಿಕೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next