ಮೈಸೂರು: ಉತ್ತರ ಪ್ರದೇಶ ಸರ್ಕಾರದ ಮಾದರಿಯಲ್ಲಿ ಕರ್ನಾಟಕ ಸರ್ಕಾರ ಕೂಡ ರಾಜ್ಯದ ರೈತರ ಸಾಲಮನ್ನಾ ಮಾಡಲಿ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದರು. ನಗರದಲ್ಲಿ ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಉತ್ತರ ಪ್ರದೇಶ ಸರ್ಕಾರ 36 ಸಾವಿರ ಕೋಟಿ ರೂ. ರೈತರ ಸಾಲಮನ್ನಾ ಮಾಡಿ ಮೆಚ್ಚುಗೆಗೆ ಪಾತ್ರವಾಗಿದೆ.
ಕರ್ನಾಟಕದಲ್ಲಿ 3 ವರ್ಷಗಳಿಂದ ಸತತವಾಗಿ ಬರಗಾಲವಿದ್ದರೂ ರೈತರ ಸಾಲಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಿರುವ ಮುಖ್ಯಮಂತ್ರಿ, ಮಾಂಸದ ಅಂಗಡಿ ಆರಂಭಿಸುವವರಿಗೆ 1.25 ಲಕ್ಷ ರೂ. ಪ್ರೋತ್ಸಾಹ ನೀಡಲು ಮುಂದಾಗಿರುವುದು ಹಾಸ್ಯಾಸ್ಪದವಾಗಿದೆ. ಸಿದ್ದರಾಮಯ್ಯ ಸಂಪುಟದ ಯಾವುದೇ ಮಂತ್ರಿಗಳು ಹಳ್ಳಿಗಳಿಗೆ ಬಂದಾಗ ಸಾಲಮನ್ನಾಕ್ಕೆ ಒತ್ತಾಯಿಸಿ ಘೇರಾವ್ ಮಾಡಬೇಕು ಎಂದು ರೈತರಲ್ಲಿ ಮನವಿ ಮಾಡಿದರು.
ಸಕ್ಕರೆ ಆಮದು ಬೇಡ: ವಿದೇಶದಿಂದ ಸಕ್ಕರೆ ಆಮದು ಮಾಡಿಕೊಳ್ಳುವುದು ಸರಿಯಲ್ಲ. ದೇಶದ ಕಬ್ಬು ಬೆಳೆಗಾರರಿಗೆ ಕಳೆದ 2 ವರ್ಷಗಳಿಂದ ಕಬ್ಬಿನ ಎಫ್ಆರ್‌ಪಿ ದರ ಏರಿಸದೆ ರೈತರಿಗೆ ದ್ರೋಹ ಬಗೆದು, ಕಬ್ಬಿನ ಬೆಳೆ ಕಡಿಮೆಯಾದ ಕಾರಣ ವಿದೇಶದಿಂದ 5 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಹೀಗಾಗಿ ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಸಕ್ಕರೆ ಆಮದಿಗೆ ಅನುಮತಿ ನೀಡದೆ ಕಬ್ಬು ಬೆಳೆಗಾರರ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು. ಗುಜರಾತ್ ರಾಜ್ಯದ ಗಾನದೇವಿ ಸಹಕಾರಿ ಸಕ್ಕರೆ ಕಾರ್ಖಾನೆ 2016-17ನೇ ಸಾಲಿನಲ್ಲಿ ಪ್ರತಿ ಟನ್ ಕಬ್ಬಿಗೆ 4441 ರೂ. ನೀಡಿ ಇಡೀ ದೇಶದ ಸಕ್ಕರೆ ಕಾರ್ಖಾನೆಗಳಿಗೆ ಮಾದರಿಯಾಗಿದೆ.
ಈ ಭಾಗದ ಸಕ್ಕರೆ ಕಾರ್ಖಾನೆಗಳು ಕಬ್ಬು ಕಟಾವು, ಸಾಗಣೆ ವೆಚ್ಚ ಕಳೆದು ಪ್ರತಿ ಟನ್‌ಗೆ 1800 ರೂ. ನೀಡುತ್ತಿದ್ದು, ರೈತರಿಗೆ ದ್ರೋಹ ಬಗೆಯುತ್ತಿವೆ, ರೈತರು ಕಬ್ಬು ಬೆಳೆಯುವ ಮೊದಲು ಪ್ರತಿ ಟನ್‌ಗೆ ಕನಿಷ್ಠ 3000 ರೂ. ನಿಗದಿಪಡಿಸಿ ಒಪ್ಪಂದ ಮಾಡಿಕೊಂಡು ಕಬ್ಬು ಬೆಳೆಯಲು ಮುಂದಾಗಬೇಕಿದೆ ಎಂದರು. ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಮುಖಂಡರಾದ ಬರಡನಪುರ ನಾಗರಾಜ್, ಬಳ್ಳಾರಿ ಮಂಜುನಾಥ್, ಹಾಡ್ಯ ರವಿ ಹಾಜರಿದ್ದರು.