Advertisement

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

03:23 AM Nov 17, 2024 | Team Udayavani |

ಝಾನ್ಸಿ: ಇಲ್ಲಿನ ಮಹಾರಾಣಿ ಲಕ್ಷ್ಮೀಬಾಯಿ ಆಸ್ಪತ್ರೆಯ ಮಕ್ಕಳ ತೀವ್ರ ನಿಗಾ ಘಟಕದಲ್ಲಿ ಸಂಭವಿಸಿದ ಅಗ್ನಿ ದುರಂತಕ್ಕೆ ಪ್ರಪಂಚವನ್ನೇ ಕಾಣದ 10 ಹಸುಳೆಗಳು, ಗುರುತೇ ಸಿಗದ ಮಟ್ಟಿಗೆ ಕರಕಲಾಗಿವೆ. ಜನಿಸಿ 10 ದಿನವೂ ಆಗದ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Advertisement

ನವಜಾತ ಶಿಶುಗಳನ್ನು ಕಳೆದುಕೊಂಡ ತಾಯಂದಿರು ಒಬ್ಬರನ್ನೊಬ್ಬರು ತಬ್ಬಿಕೊಂಡು ಸಮಾಧಾನ ಮಾಡುತ್ತಿರುವ ದೃಶ್ಯ ಶನಿವಾರ ಸಾಮಾನ್ಯವಾಗಿತ್ತು. ಅಗ್ನಿ ಅವಘಡ ಸಂಭವಿಸಿದ ಸಮಯದಲ್ಲಿ ನಿಗಾ ಘಟಕದೊಳಗೆ ನುಗ್ಗಿದ ಪೋಷಕರು ಹಲವು ಮಕ್ಕಳನ್ನು ರಕ್ಷಣೆ ಮಾಡಿದ್ದರು. ಇದೀಗ ಅವರು ತಮ್ಮ ಮಕ್ಕಳನ್ನು ಗುರುತಿಸಲಾದೇ ರೋಧಿಸುತ್ತಿರುವುದು ಮನಕಲಕುವಂತಿತ್ತು. ಹಸುಳೆಗಳ ಗುರುತು ಸಿಗದ ಹಿನ್ನೆಲೆಯಲ್ಲಿ ಡಿಎನ್‌ಎ ಪರೀಕ್ಷೆ ನಡೆಸಿ ನಮ್ಮ ಮಕ್ಕಳ ದೇಹವನ್ನು ನಮಗೆ ಹಸ್ತಾಂತರಿಸಿ ಎಂದು ಪೋಷಕರು ಮನವಿ ಮಾಡಿದ್ದಾರೆ.

7 ಲಕ್ಷ ರೂ. ಪರಿಹಾರ ಘೋಷಣೆ:
ಮಕ್ಕಳನ್ನು ಕಳೆದುಕೊಂಡ ಕುಟುಂಬಗಳಿಗೆ ಉತ್ತರ ಪ್ರದೇಶ ಸರ್ಕಾರ 5 ಲಕ್ಷ ರೂ. ಘೋಷಣೆ ಮಾಡಿದ್ದು, ಪ್ರಧಾನಿ ಮೋದಿ ಅವರು 2 ಲಕ್ಷ ರೂ. ಘೋಷಣೆ ಮಾಡಿದ್ದಾರೆ. ಶಾರ್ಟ್‌ ಸರ್ಕೀಟ್‌ನಿಂದ ಈ ದುರಂತ ಸಂಭವಿಸಿದೆ ಎನ್ನಲಾಗಿದ್ದು, ಈ ಬಗ್ಗೆ ಹಲವು ಕೋನಗಳಲ್ಲಿ ಉತ್ತರ ಪ್ರದೇಶ ಸರ್ಕಾರ ತನಿಖೆ ಆರಂಭಿಸಿದೆ.

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ:
ಝಾನ್ಸಿಯಲ್ಲಿ ನಡೆದ ಆಸ್ಪತ್ರೆ ದುರಂತಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತೀವ್ರ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ. ರಾಜ್ಯದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಹೇಳಿದೆ.

ನರ್ಸ್‌ ಹಚ್ಚಿದ ಬೆಂಕಿಕಡ್ಡಿಯಿಂದ ದುರಂತ: ಪ್ರತ್ಯಕ್ಷದರ್ಶಿ ಆರೋಪ
ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ನರ್ಸ್‌ವೊಬ್ಬರು ಬೆಂಕಿಕಡ್ಡಿ ಗೀರಿದ್ದು, ಈ ದುರಂತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಆರೋಪಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ. ತೀವ್ರ ನಿಗಾಘಟಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಇರುವುದರಿಂದ ಅದು ಹೊತ್ತಿಕೊಂಡು ಈ ದುರಂತ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ. ಆದರೆ ಈ ಬಗ್ಗೆ ಸರ್ಕಾರ ಯಾವುದೇ ಮಾಹಿತಿ ನೀಡದೇ, ತನಿಖೆಯ ಬಳಿಕ ಸತ್ಯ ಹೊರ ಬೀಳಲಿದೆ ಎಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next