ಲಕ್ನೋ: ಆಕಸ್ಮಿಕವಾಗಿ ಮಹಿಳೆಗೆ ಗುಂಡು ಹಾರಿಸಿದ ಆರೋಪದ ನಂತರ ತಲೆಮರೆಸಿಕೊಂಡಿದ್ದ ಸಬ್ ಇನ್ಸ್‌ಪೆಕ್ಟರ್ (ಎಸ್‌ಐ) ಮನೋಜ್ ಶರ್ಮಾ ಅವರನ್ನು ಶನಿವಾರ(ಡಿ.16 ರಂದು) ಬಂಧಿಸಲಾಗಿದೆ.
ಘಟನೆ ವಿವರ: ಡಿ.8 ರಂದು ಉತ್ತರ ಪ್ರದೇಶದ ಅಲಿಗಢದ ಇಶ್ರತ್ ನಿಗರ್(52) ಅವರು ತಮ್ಮ ಪಾಸ್ ಪೋರ್ಟ್ ಪರಿಶೀಲನೆಗಾಗಿ ಪೊಲೀಸ್ ಠಾಣೆಗೆ ಬಂದಿದ್ದರು. ಈ ವೇಳೆ ಮಹಿಳೆಯ ಬಳಿ ವಿವರ ಕೇಳುವ ವೇಳೆ ಸಬ್ ಇನ್ಸ್‌ಪೆಕ್ಟರ್ ಮನೋಜ್ ಕುಮಾರ್ ಶರ್ಮಾ ಅವರು ತಮ್ಮ ಕೈಯಲ್ಲಿ ಸರ್ವಿಸ್ ಪಿಸ್ತೂಲ್ ಹಿಡಿದುಕೊಂಡಿದ್ದರು. ಅಲ್ಲದೆ ಅದನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಪೊಲೀಸ್ ಅಧಿಕಾರಿ ಕೈಯಲ್ಲಿದ್ದ ಬಂಧೂಕಿನಿಂದ ಗುಂಡು ಹಾರಿ ಎದುರಿಗೆ ಇದ್ದ ಮಹಿಳೆಯ ತಲೆಗೆ ಹೊಕ್ಕಿದೆ. ಪರಿಣಾಮ ಕುಸಿದು ಬಿದ್ದ ಮಹಿಳೆಯನ್ನು ಕೂಡಲೇ ಅವರನ್ನು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಜೆಎನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಮಹಿಳೆ ಡಿ.14 ರಂದು ಮೃತಪಟ್ಟಿದ್ದರು.
ಘಟನೆ ಬಳಿಕ ಪರಾರಿಯಾಗಿದ್ದ ಪೊಲೀಸ್: ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅಧಿಕಾರಿಯ ಪತ್ತೆಗಾಗಿ ಪೊಲೀಸರು ತನಿಖೆ ಆರಂಭಿಸಿದ್ದರು. ತಲೆಮರೆಸಿಕೊಂಡಿದ್ದ ಸಬ್ ಇನ್ಸ್ ಪೆಕ್ಟರ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿತ್ತು. ಆತನ ತಲೆಗೆ 20,000 ರೂಪಾಯಿ ಬಹುಮಾನವನ್ನೂ ಘೋಷಿಸಲಾಗಿತ್ತು.
ಶನಿವಾರ ಬನ್ನಾದೇವಿ ಪೊಲೀಸ್ ವ್ಯಾಪ್ತಿಯಲ್ಲಿ ಎಸ್‌ಐ ಮನೋಜ್ ಶರ್ಮಾ ಅವರನ್ನು ಬಂಧಿಸಲಾಗಿದೆ. ಘಟನೆಯ ನಂತರ ಆತ ತಲೆಮರೆಸಿಕೊಂಡಿದ್ದ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಕಲಾನಿಧಿ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ನಿರ್ಲಕ್ಷ್ಯಕ್ಕಾಗಿ ಎಸ್‌ಐಗೆ ಪಿಸ್ತೂಲ್ ಹಸ್ತಾಂತರಿಸಿದ ಪೊಲೀಸರನ್ನು ಈಗಾಗಲೇ ಬಂಧಿಸಿದ್ದಾರೆ ಎಂದು ಎಸ್‌ಎಸ್‌ಪಿ ಹೇಳಿದರು.