ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ಭರ್ಜರಿ ಗೆಲುವಿನ ಬಳಿಕ ಬಿಜೆಪಿ ವರ್ಷಾಂತ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತವರು ಗುಜರಾತ್‌ನಲ್ಲಿ ನಡೆಯುವ ವಿಧಾನ ಸಭಾ ಚುನಾವಣೆಗೆ ತಯಾರಿ ಶುರುವಿಟ್ಟುಕೊಂಡಿದೆ. ಈಗಾಗಲೇ
‘ಯುಪಿ ಮೇ 325, ಗುಜರಾತ್ ಮೇ 150’ ಘೋಷವಾಕ್ಯವನ್ನು ಬಿಡುಗಡೆ ಮಾಡಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪಕ್ಷದ ತಾರಾ ಪ್ರಚಾರಕರಲ್ಲಿ ಒಬ್ಬರಾಗಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಯೋಗಿ ಅವರು ಪ್ರಚಾರ ನಡೆಸುವುದರಿಂದ ಬಿಜೆಪಿಗೆ ಅಪಾರ ಲಾಭವಾಗಲಿದೆ.ಮುಖ್ಯಮಂತ್ರಿಯಾಗಿ ಅವರು ಕೈಗೊಳ್ಳುತ್ತಿರುವ ಕಾರ್ಯಗಳನ್ನು ದೇಶದಲ್ಲಿ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲೂ ಚರ್ಚಿಸಲಾಗುತ್ತಿದೆ.ದೊಡ್ಡ ರಾಜ್ಯ ವಾದ ಉತ್ತರಪ್ರದೇಶದಲ್ಲಿ ಮಾಡಿದ ಕೆಲಸಗಳು ಇತರ ರಾಜ್ಯಗಳ ಮೇಲೂ ಪರಿಣಾಮು ಬೀರುತ್ತವೆ ಎಂದು ಬಿಜೆಪಿ ಗುಜರಾತ್ ಘಟಕದ ವಕ್ತಾರ ಭರತ್ ಪಾಂಡ್ಯಾ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ಮಾರ್ಚ್ 24 ರಂದು ಗುಜರಾತ್‌ನ ಸಂಸದರ ಸಭೆ ಕರೆದು ಜನರ ವಿಶ್ವಾಸಗಳಿಸುವ ಸಲುವಾಗಿ ಸಾರ್ವಜನಿಕ ಸೇವಕರಾಗಿ ದಿನ ನಿತ್ಯವೂ ಹೆಚ್ಚುವರಿ ಕೆಲಸ ಮಾಡಬೇಕೆಂದು ಕೇಳಿಕೊಂಡಿದ್ದಾರೆ.
ಕಳೆದ 19 ಷರ್ವಗಳಿಂದ ಗುಜರಾತ್ ಬಿಜೆಪಿ ಆಳ್ವಿಕೆಯಲ್ಲಿದ್ದು, ಹಾಲಿ 182 ಸದಸ್ಯ ಬಲದ ವಿಧಾನ ಸಭೆಯಲ್ಲಿ 123 ಬಿಜೆಪಿ ಶಾಸಕರಿದ್ದಾರೆ.
ಯೋಗಿ ಅವರನ್ನು ರಾಷ್ಟ್ರ ಮಟ್ಟದ ನಾಯಕರನ್ನಾಗಿ ಬಿಂಬಿಸಲು ಮುಂದಾಗಿರುವ ಬಿಜೆಪಿಗೆ ಗುಜರಾತ್ ಚುನಾವಣೆ ಒಂದು ವೇದಿಕೆಯಾಗಿದೆ ಎನ್ನಬಹುದು.