ಲಕ್ನೋ: ಫೈಜಾಬಾದ್ ರೈಲ್ವೆ ಜಂಕ್ಷನ್ ಹೆಸರನ್ನು ಅಯೋಧ್ಯಾ ಕಂಟ್ಮೋನೆಂಟ್ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬದಲಾಯಿಸಿ ಆದೇಶ ಹೊರಡಿಸಿರುವುದಾಗಿ ಸಿಎಂ ಕಚೇರಿ ಶನಿವಾರ (ಅಕ್ಟೋಬರ್ 23) ತಿಳಿಸಿದೆ.
ಇದನ್ನೂ ಓದಿ:52ನೇ ಗೋವಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಜೋರಾದ ತಯಾರಿ
ಉತ್ತರಪ್ರದೇಶದ ಫೈಜಾಬಾದ್ ರೈಲ್ವೆ ಜಂಕ್ಷನ್ ಹೆಸರನ್ನು ಬದಲಾಯಿಸಿರುವ ಸುದ್ದಿಯನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಕಚೇರಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. 2018ರಲ್ಲಿ ಫೈಜಾಬಾದ್ ಮತ್ತು ಅಲಹಾಬಾದ್ ಹೆಸರನ್ನು ಮರುನಾಮಕರಣ ಮಾಡಲು ಉತ್ತರಪ್ರದೇಶ ಸಚಿವ ಸಂಪುಟ ಅನುಮತಿ ನೀಡಿತ್ತು. ಫೈಜಾಬಾದ್ ಅನ್ನು ಅಯೋಧ್ಯಾ ಹಾಗೂ ಅಲಹಾಬಾದ್ ಅನ್ನು ಪ್ರಯಾಗ್ ರಾಜ್ ಎಂದು ಬದಲಾಯಿಸಲು ಸಂಪುಟ ಒಪ್ಪಿಗೆ ನೀಡಿತ್ತು ಎಂದು ವರದಿ ಹೇಳಿದೆ.
ಪ್ರಯಾಗ್ ರಾಜ್ ಡಿವಿಷನ್ ನಲ್ಲಿ ಪ್ರಯಾಗ್ ರಾಜ್, ಕೌಶಂಬಿ, ಫತೇಪುರ್ ಮತ್ತು ಪ್ರತಾಪ್ ಗಢ್ ಜಿಲ್ಲೆಗಳು ಸೇರಿದ್ದು, ಅಯೋಧ್ಯಾ ಡಿವಿಷನ್ ನಲ್ಲಿ ಅಯೋಧ್ಯಾ, ಅಂಬೇಡ್ಕರ್ ನಗರ್, ಸುಲ್ತಾನ್ ಪುರ್, ಅಮೇಠಿ ಮತ್ತು ಬಾರಾಬಂಕಿ ಜಿಲ್ಲೆಗಳು ಸೇರಿರುವುದಾಗಿ ವರದಿ ವಿವರಿಸಿದೆ.
ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಇತ್ತೀಚೆಗೆ ಝಾನ್ಸಿ ರೈಲ್ವೆ ನಿಲ್ದಾಣದ ಹೆಸರನ್ನು ರಾಣಿ ಲಕ್ಷ್ಮಿ ಬಾಯಿ ಎಂದು ಮರುನಾಮಕರಣ ಮಾಡಿತ್ತು. ಉತ್ತರಪ್ರದೇಶದ ಪ್ರಮುಖ ಜಿಲ್ಲೆ ಮತ್ತು ರೈಲ್ವೆ ನಿಲ್ದಾಣಗಳ ಹೆಸರನ್ನು ಬದಲಾಯಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಭಾರೀ ಟೀಕೆ ವ್ಯಕ್ತವಾಗಿರುವುದಾಗಿ ವರದಿ ತಿಳಿಸಿದೆ.