Advertisement
ಆ.5ರ ಭೂಮಿಪೂಜೆ ಸಮಾರಂಭದ ವೇಳೆ 326 ಕೋಟಿ ರೂ. ವೆಚ್ಚದಲ್ಲಿ ರಾಮ ಮಂದಿರಕ್ಕೆ ಸಂಬಂಧಿಸಿದ ವಿವಿಧ ನಿರ್ಮಾಣ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಲಿದೆ.
Related Articles
Advertisement
ವಿವರ ಫಲಕ ಸ್ಥಾಪನೆ ಇಲ್ಲ: ಕಾಲಘಟ್ಟ, ದೇಗುಲ ವಿವರ ಸೂಚಿಸುವ ತಾಮ್ರಫಲಕವನ್ನು ರಾಮಮಂದಿರ ಬುನಾದಿ ಕೆಳಗೆ ಸ್ಥಾಪಿಸಲಾಗುತ್ತದೆ ಎಂಬ ವರದಿ ಸತ್ಯಕ್ಕೆ ದೂರವಾದ ಸಂಗತಿ. 200 ಅಡಿ ಆಳದಲ್ಲಿ ಯಾವ ಫಲಕವನ್ನೂ ಸ್ಥಾಪಿಸಲಾಗುವುದಿಲ್ಲ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಸ್ಪಷ್ಟಪಡಿಸಿದ್ದಾರೆ.
ಸುದ್ದಿ ಚಾನೆಲ್‌ಗಳಿಗೆ ಸೂಚನೆ: ಐತಿಹಾಸಿಕ ಭೂಮಿ ಪೂಜೆ ಸಮಾರಂಭ ದೂರದರ್ಶನದಲ್ಲಿ ನೇರ ಪ್ರಸಾರಗೊಳ್ಳಲಿದೆ. ಸಮಾರಂಭದ ನೇರ ಪ್ರಸಾರ ಮಾಡಲು ಖಾಸಗಿ ಸುದ್ದಿ ವಾಹಿನಿಗಳು ಜಿಲ್ಲಾಡಳಿತದಿಂದ ಕಡ್ಡಾಯ ಅನುಮತಿ ಪಡೆಯಬೇಕು ಎಂದು ಫೈಝಾಬಾದ್ ಡಿಸಿ ಕಚೇರಿ ಸೂಚಿಸಿದೆ.
ಒವೈಸಿ ಅಪಸ್ವರ: ಭೂಮಿಪೂಜೆಗೆ ಚಾಲನೆ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ನಿಲುವಿಗೆ ಎಐಎಂಐಎಂ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಒವೈಸಿ ಅಪಸ್ವರ ತೆಗೆದಿದ್ದಾರೆ. ಈ ಮೂಲಕ ಪ್ರಧಾನಿ ತಮ್ಮ ಸಾಂವಿಧಾನಿಕ ಪ್ರತಿಜ್ಞೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಮೋದಿ ಪ್ರತಿಷ್ಠಾಪನೆ ಮಾಡಲಿರುವ ಬೆಳ್ಳಿ ಇಟ್ಟಿಗೆ
ಭೂಮಿಪೂಜೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಷ್ಠಾಪಿಸಲಿರುವ ಮೊದಲ ಬೆಳ್ಳಿ ಇಟ್ಟಿಗೆಯ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಿಜೆಪಿ ವಕ್ತಾರ ಸುರೇಶ್ ನಾಖುವಾ 22 ಕಿಲೋ ತೂಕದ ಬೆಳ್ಳಿ ಇಟ್ಟಿಗೆ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಇಟ್ಟಿಗೆ ಮೇಲೆ ಮೋದಿ ಅವರ ಹೆಸರನ್ನು ಬರೆಯಲಾಗಿದೆ. ಉದ್ಧವ್‌ಗೆ ಯಾವುದೇ ಆಹ್ವಾನವಿಲ್ಲ: ವಿಹಿಂಪ
ಅಯೋಧ್ಯೆ ಭೂಮಿಪೂಜೆಗೆ ಶಿವಸೇನೆ ಮುಖ್ಯಸ್ಥ, ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ಅವರನ್ನು ಆಹ್ವಾನಿಸಿಲ್ಲ ಎಂದು ವಿಹಿಂಪ ಸ್ಪಷ್ಟಪಡಿಸಿದೆ. ‘ಭೂಮಿಪೂಜೆಗೆ ಯಾವುದೇ ರಾಜ್ಯದ ಮುಖ್ಯಮಂತ್ರಿಗಳನ್ನೂ ಆಹ್ವಾನಿಸುತ್ತಿಲ್ಲ. ಪ್ರೊಟೊಕಾಲ್ ಅನ್ವಯ ಉ.ಪ್ರ. ಸಿಎಂ ಯೋಗಿ ಆದಿತ್ಯನಾಥ್ ಮಾತ್ರವೇ ಪಾಲ್ಗೊಳ್ಳಲಿದ್ದಾರೆ. ಉದ್ಧವ್ ಅಧಿಕಾರದ ಆಸೆಗಾಗಿ ಹಿಂದುತ್ವ ಬಿಟ್ಟುಕೊಟ್ಟವರು. ಮಿಗಿಲಾಗಿ ರಾಮಮಂದಿರ ಚಳವಳಿ ಶಿವಸೇನೆಗೆ ಸಂಬಂಧಿಸಿದ್ದೂ ಅಲ್ಲ’ ಎಂದು ವಿಹಿಂಪ ಕಾರ್ಯಕಾರಿ ಅಧ್ಯಕ್ಷ ಆಲೋಕ್ ಕುಮಾರ್ ತಿಳಿಸಿದ್ದಾರೆ. ಕೋರ್ಟ್‌ನಿಂದ ಕೊನೆಯ ಆರೋಪಿ ವಿಚಾರಣೆ
ಅಯೋಧ್ಯೆಯ ವಿವಾದಿತ ಕಟ್ಟಡ ಧ್ವಂಸ ಪ್ರಕರಣದ ಕೊನೆಯ ಆರೋಪಿಯ ವಿಚಾರಣೆಯನ್ನು ಸಿಬಿಐ ವಿಶೇಷ ನ್ಯಾಯಾಲಯ ಮಂಗಳವಾರ ಪೂರ್ಣಗೊಳಿಸಿದೆ. ವೀಡಿಯೋ ಕಾನ್ಫರೆನ್ಸಿಂಗ್ ಕಲಾಪದಲ್ಲಿ ಸಿಬಿಐ ವಿಶೇಷ ನ್ಯಾ| ಎಸ್.ಕೆ. ಯಾದವ್ ಅವರ ಮುಂದೆ ಹಾಜರಾಗಿದ್ದ ಮಹಾರಾಷ್ಟ್ರದ ಥಾಣೆಯ ಶಿವಸೇನೆ ಮಾಜಿ ಸಂಸದ ಸತೀಶ್ ಪ್ರಧಾನ್, ‘ರಾಜಕೀಯ ಪಿತೂರಿಯಿಂದಾಗಿ ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ನಾನು ನಿರಪರಾಧಿ’ ಎಂದು ಸಮರ್ಥಿಸಿಕೊಂಡಿದ್ದಾರೆ. ಪ್ರಕರಣದ 32 ಆರೋಪಿಗಳ ಪೈಕಿ ಪ್ರಧಾನ್ ಕೊನೆಯವರಾಗಿದ್ದಾರೆ. ಕಳೆದ ವಾರವಷ್ಟೇ ಸಿಬಿಐ ಕೋರ್ಟ್ ಬಿಜೆಪಿ ಧುರೀಣರಾದ ಎಲ್.ಕೆ. ಆಡ್ವಾಣಿ, ಮುರಳಿ ಮನೋಹರ ಜೋಶಿ ಅವರ ಹೇಳಿಕೆ ದಾಖಲಿಸಿತ್ತು. ಆರೋಪಿಗಳ ವಿಚಾರಣೆಯನ್ನು ಆಗಸ್ಟ್ 31ರೊಳಗೆ ಪೂರ್ಣಗೊಳಿಸುವಂತೆ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಭೂಮಿಪೂಜೆ ಮೇಲೆ ಉಗ್ರರ ಕೆಂಗಣ್ಣು: ಆ.5ರ ಐತಿಹಾಸಿಕ ರಾಮಮಂದಿರ ಭೂಮಿಪೂಜೆ ಸಂದರ್ಭದಲ್ಲಿ ಪಾಕ್ ಉಗ್ರಗಾಮಿ ಸಂಘಟನೆಗಳು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಸಂಸ್ಥೆಗಳು ಸರಕಾರಕ್ಕೆ ಎಚ್ಚರಿಸಿವೆ. ಲಷ್ಕರ್ ಮತ್ತು ಜೈಶ್-ಎ ಮೊಹ್ಮದ್ ಉಗ್ರರು ಸಂಭವನೀಯ ದಾಳಿ ನಡೆಸಬಹುದು. ಪಾಕ್ ಗುಪ್ತಚರ ಸಂಸ್ಥೆ ಐಎಸ್‌ಐ ಜೈಶ್ ಮತ್ತು ಲಷ್ಕರ್ ಉಗ್ರರಿಗೆ ಈ ಬಾರಿ ಅಫ್ಘಾನಿಸ್ಥಾನದಲ್ಲಿ ತರಬೇತಿ ನೀಡಿದೆ. 3 ಅಥವಾ 5 ಗುಂಪುಗಳು ಅಯೋಧ್ಯೆ ಭೂಮಿಪೂಜೆ, ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ದಾಳಿ ನಡೆಸಲು ಸಂಚು ರೂಪಿಸಿವೆ ಎಂಬ ಮಾಹಿತಿಗಳು ಲಭ್ಯವಾಗಿವೆ ಎಂದು ಟೈಮ್ಸ್ ನೌ ವರದಿ ತಿಳಿಸಿದೆ. 2005ರ ಜುಲೈಯಲ್ಲೂ ಅಯೋಧ್ಯೆ ಮೇಲೆ ಪಾಕ್ ಉಗ್ರರು ದಾಳಿ ನಡೆಸಿದ್ದರು.