Advertisement

ಐತಿಹಾಸಿಕ ಭೂಮಿಪೂಜೆ ಸಿದ್ಧತೆ ವೀಕ್ಷಿಸಿದ ಯೋಗಿ

03:11 AM Jul 26, 2020 | Hari Prasad |

ಅಯೋಧ್ಯೆ: ಮೋಕ್ಷದಾಯಕ ಸಪ್ತನಗರಗಳಲ್ಲಿ ಒಂದಾದ, ಯುದ್ಧದ ಕಲ್ಪನೆಯನ್ನೂ ಮಾಡದ ಶಾಂತಿ ಪ್ರಿಯರ ನಗರವೆಂದೇ ಪುರಾಣ ಖ್ಯಾತಿಯ ಅಯೋಧ್ಯೆ ಗತ ಚೆಲುವಿನ ವೈಭವಕ್ಕೆ ಸಜ್ಜಾಗಿದೆ.

Advertisement

ಸಿಎಂ ಯೋಗಿ ಆದಿತ್ಯನಾಥ್‌ ಶನಿವಾರ ಅಯೋಧ್ಯೆಗೆ ಭೇಟಿನೀಡಿ ಆ.5ರ ಶ್ರೀರಾಮ ಮಂದಿರ ಭೂಮಿಪೂಜೆ ಸಮಾರಂಭದ ಸಿದ್ಧತೆಗಳನ್ನು ಪರಿಶೀಲಿಸಿದರು.

ಸಮಾರಂಭದ ಮೇಲ್ವಿಚಾರಣೆ ಹೊತ್ತಿರುವ ಶ್ರೀರಾಮ ಟೆಂಪಲ್‌ ಟ್ರಸ್ಟ್‌ ಸದಸ್ಯರೊಂದಿಗೆ, ಸ್ಥಳೀಯ ಧಾರ್ಮಿಕ ಮುಖಂಡರೊಂದಿಗೆ ಸಿಎಂ ಸಭೆ ನಡೆಸಿದರು.

ಇದಕ್ಕೂ ಮೊದಲು ಅವರು ರಾಮಜನ್ಮ ಭೂಮಿ ಸ್ಥಳದ ಶ್ರೀರಾಮನಿಗೆ, ಹನುಮಾನ್‌ ಘರಿಯ ಹನುಮಂತನಿಗೆ ಪ್ರಾರ್ಥನೆ ಸಲ್ಲಿಸಿದರು.

ಯೋಗಿ ಶಪಥ: ಈ ವೇಳೆ ಯೋಗಿ ಆದಿತ್ಯನಾಥ್‌ ‘ಭೂಮಿಪೂಜೆ ಸಮಾರಂಭಕ್ಕಾಗಿ ಪ್ರಧಾನಿ ಆಯೋಧ್ಯೆಗೆ ಭೇಟಿ ನೀಡಲಿದ್ದಾರೆ. ನಾವು ಅಯೋಧ್ಯೆಯನ್ನು ಭಾರತ ಮತ್ತು ವಿಶ್ವದಲ್ಲೇ ಹೆಮ್ಮೆಪಡುವಂಥ ತಾಣವಾಗಿ ರೂಪಿಸುತ್ತೇವೆ’ ಎಂದು ಶಪಥ ಮಾಡಿದರು. ‘ಅಯೋಧ್ಯೆಯಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಿದ್ದೇವೆ. ಸ್ವಯಂಶಿಸ್ತಿನ ಮೂಲಕ ಜಗತ್ತಿಗೆ ತಾನು ಏನೆಂದು ತೋರಿಸಲು ಅಯೋಧ್ಯೆ ಪಾಲಿಗೆ ಇದು ಸುವರ್ಣಾವಕಾಶ’ ಎಂದು ‘ಎಎನ್‌ಐ’ಗೆ ತಿಳಿಸಿದರು.

Advertisement

ಮನೆಗಳಲ್ಲಿ ದೀಪೋತ್ಸವ: ಭೂಮಿಪೂಜೆ ಹಿನ್ನೆಲೆಯಲ್ಲಿ ಆ.4- 5ರಂದು ಉತ್ತರ ಪ್ರದೇಶದ ಹಿಂದೂಗಳ ಮನೆಗಳಲ್ಲಿ, ಮಂದಿರಗಳಲ್ಲಿ ದೀಪೋತ್ಸವ ನಡೆಸುವ ಸಂಬಂಧ ಈಗಾಗಲೇ ಸಂಸದ, ಶಾಸಕರ, ಧಾರ್ಮಿಕ ಮುಖಂಡರ ಸಭೆಯಲ್ಲಿ ತೀರ್ಮಾನಿಸಿದ್ದೇವೆ ಎಂದು ಹೇಳಿದರು. ಕೋವಿಡ್ 19 ಆತಂಕದ ಹಿನ್ನೆಲೆಯಲ್ಲಿ ಆ. 5ರ ಐತಿಹಾಸಿಕ ಸಮಾರಂಭಕ್ಕೆ 200 ಗಣ್ಯರನ್ನು ಮಾತ್ರವೇ ಆಹ್ವಾನಿಸಲಾಗಿದೆ.

ನೇಣಿಗೇರಿಸಿದರೂ ಹೆಮ್ಮೆ ನನ್ನದು: ಉಮಾಭಾರತಿ
‘1992ರ ಅಯೋಧ್ಯೆಯ ವಿವಾದಿತ ಕಟ್ಟಡ ಧ್ವಂಸ ಪ್ರಕರಣದ ತೀರ್ಪು ಏನೇ ಬಂದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನಗೆ ಗಲ್ಲುಶಿಕ್ಷೆ ವಿಧಿಸಿದರೂ, ಅದನ್ನು ಗೌರವವೆಂದು ಭಾವಿಸಿ ನೇಣುಗಂಬಕ್ಕೇರುತ್ತೇನೆ. ನಾನು ಹುಟ್ಟಿದ ಜಾಗವೂ ಅದರ ಬಗ್ಗೆ ಹೆಮ್ಮೆಪಡಲಿದೆ.”

-ಹೀಗೆಂದು ಹೇಳಿರುವುದು ಬಿಜೆಪಿ ನಾಯಕಿ ಉಮಾಭಾರತಿ. ವಿವಾದಿತ ಕಟ್ಟಡ ಧ್ವಂಸ ಪ್ರಕರಣದ ಆರೋಪಿಯಾಗಿರುವ ಅವರು ಇತ್ತೀಚೆಗಷ್ಟೇ ಲಕ್ನೋದ ವಿಶೇಷ ಸಿಬಿಐ ಕೋರ್ಟ್‌ಗೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಈ ಕುರಿತಾಗಿ ಶನಿವಾರ ಮಾತ ನಾಡಿದ ಅವರು, ನಾನು ಏನು ಸತ್ಯವೋ ಅದನ್ನು ಕೋರ್ಟ್‌ಗೆ ತಿಳಿಸಿದ್ದೇನೆ. ನನ್ನನ್ನು ನೇಣಿಗೇರಿಸಿದರೂ ಅದನ್ನು ಆಶೀರ್ವಾದವೆಂದು ಭಾವಿಸುತ್ತೇನೆ ಎಂದಿದ್ದಾರೆ.

‘ನನಗೆ 5 ಸಾವಿರ ಬದುಕನ್ನು ಮತ್ತು ರಾಮ ಮಂದಿರದ ಭೂಮಿ ಪೂಜೆ ನಡೆಯುವ 1 ದಿನವನ್ನು ಕೊಟ್ಟು ಆಯ್ಕೆ ಮಾಡಿಕೊಳ್ಳಲು ಹೇಳಿದರೆ, ನಾನು ಆಗಸ್ಟ್‌ 5ರ ಭೂಮಿಪೂಜೆಯ ದಿನವನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ. ನಾನು ಇರುತ್ತೇನೋ, ಇಲ್ಲವೋ ಗೊತ್ತಿಲ್ಲ. ಆದರೆ, ಮೋದಿಜೀ ಇರಬೇಕು ಮತ್ತು ಮಂದಿರಕ್ಕೆ ಅಡಿಗಲ್ಲು ಹಾಕಬೇಕು” ಎಂದೂ ಉಮಾಭಾರತಿ ಹೇಳಿದ್ದಾರೆ.

ಇದೇ ವೇಳೆ, ಅಯೋಧ್ಯೆಯಲ್ಲಿ ಅದ್ಧೂರಿ ಭೂಮಿಪೂಜೆ ಏರ್ಪಡಿಸಿರುವುದನ್ನು ಖಂಡಿಸಿರುವ ಎನ್‌ಸಿಪಿ ನಾಯಕ ಶರದ್‌ ಪವಾರ್‌ ವಿರುದ್ಧ ಕಿಡಿಕಾರಿದ ಉಮಾಭಾರತಿ, ಅಯೋಧ್ಯೆಯ ಭೂಮಿ ಪೂಜೆಗೆಂದು ಪ್ರಧಾನಿ ಮೋದಿ ಆಗಮಿಸಿದಾಗ ಪವಾರ್‌ ಅವರು ಶ್ರೀ ರಾಮ್‌ ಜೈ ರಾಮ್‌ ಎಂದು ಉದ್ಘೋಷ ಮೊಳಗಿಸಲಿ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next