Advertisement

ಉ.ಕ. ಜನರ ಬದುಕು ಮೂರಾಬಟ್ಟೆ

09:31 AM Jun 07, 2022 | Team Udayavani |

ಬೆಳಗಾವಿ: ಮೂರು ವರ್ಷಗಳ ಹಿಂದೆ ಬಂದ ಭೀಕರ ಪ್ರವಾಹ ಹಾಗೂ ಅತಿಯಾದ ಮಳೆಯಿಂದ ಆದ ಹಾನಿಯನ್ನು ಉತ್ತರ ಕರ್ನಾಟಕದ ಜನ ಇನ್ನೂ ಮರೆತಿಲ್ಲ. ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳಿಂದ ಮನೆ ಮತ್ತು ಹೊಲಗಳಿಗೆ ಆಗಿರುವ ನಷ್ಟವನ್ನು ಇನ್ನೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಮಳೆಗಾಲ ಬಂತೆಂದರೆ ಸಾಕು ಉತ್ತರ ಕರ್ನಾಟಕದ ಅದರಲ್ಲೂ ನದಿ ಪಾತ್ರದ ಜನ ಆತಂಕಕ್ಕೊಳಗಾಗುತ್ತಾರೆ.

Advertisement

ಆರೇಳು ವರ್ಷಗಳ ಹಿಂದೆ ಕಿತ್ತೂರು ಕರ್ನಾಟಕದ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಚಿತ್ರವೇ ಬೇರೆಯಾಗಿತ್ತು. ಒಂದೆರಡು ಪ್ರದೇಶ ಹೊರತುಪಡಿಸಿದರೆ ಉಳಿದ ಕಡೆ ಭೀಕರ ಬರಗಾಲ ನಿರಂತರವಾಗಿ ಕಾಡಿತ್ತು. ಜನರು ಬರಗಾಲದ ಜತೆಗೆ ಈಗ ಪ್ರವಾಹದ ಸಂಕಷ್ಟಕ್ಕೂ ತುತ್ತಾಗಿದ್ದಾರೆ.

2019ರಲ್ಲಿ ಉಂಟಾಗಿದ್ದ ಪ್ರವಾಹ ಹಾಗೂ ಅತಿಯಾದ ಮಳೆಯಿಂದ ಬೆಳಗಾವಿ ವಿಭಾಗದ ಏಳು ಜಿಲ್ಲೆಗಳಲ್ಲಿ 1,90,281 ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆ ಹಾನಿಯಾಗಿತ್ತು. ಈ ಪ್ರಕೃತಿ ವಿಕೋಪದಿಂದ ಏಳು ಜಿಲ್ಲೆಗಳಲ್ಲಿ ಒಟ್ಟು 1,74,865 ರೈತರು ಬಾಧಿತರಾಗಿದ್ದರು. ಆದರೆ ನೈಸರ್ಗಿಕ ಪ್ರಕೃತಿ ವಿಕೋಪ ಪರಿಹಾರ ನಿಯಮಾವಳಿಗಳಂತೆ ಕೇವಲ 1,05,641 ಹೆಕ್ಟೇರ್‌ ಪ್ರದೇಶವನ್ನು ಪರಿಹಾರದಡಿ ಅಳವಡಿಸಲಾಗಿತ್ತು. ಕಳೆದ ಸೆಪ್ಟೆಂಬರ್‌ವರೆಗೆ 1.74 ಲಕ್ಷ ರೈತರಲ್ಲಿ 1.05 ಲಕ್ಷ ರೈತರಿಗೆ 9794 ಲಕ್ಷ ರೂ ಪರಿಹಾರ ನೀಡಲಾಗಿದೆ.

ಬೆಳಗಾವಿ ಜಿಲ್ಲೆಯ 94256 ರೈತರಲ್ಲಿ 72127 ರೈತರ ಖಾತೆಗೆ ಹಣ ಜಮಾ ಆಗಿದ್ದರೆ ಬಾಗಲಕೋಟೆ ಜಿಲ್ಲೆಯಲ್ಲಿ 24461 ರೈತರ ಪೈಕಿ 18897 ರೈತರು, ಧಾರವಾಡದಲ್ಲಿ 26468 ರೈತರಲ್ಲಿ 3728, ಗದಗ ಜಿಲ್ಲೆಯಲ್ಲಿ 7500 ರೈತರಲ್ಲಿ 2622, ಹಾವೇರಿಯಲ್ಲಿ 15204 ರೈತರ ಪೈಕಿ 6140 ರೈತರು, ಉತ್ತರ ಕನ್ನಡ ಜಿಲ್ಲೆಯಲ್ಲಿ 5044 ರೈತರಲ್ಲಿ 1849 ಹಾಗೂ ವಿಜಯಪುರ ಜಿಲ್ಲೆಯಲ್ಲಿ 1572 ರೈತರ ಪೈಕಿ 356 ರೈತರ ಖಾತೆಗೆ ಹಣ ನೀಡಲಾಗಿದೆ.

ಗೊಂದಲ: ಏಳೂ ಜಿಲ್ಲೆಗಳಲ್ಲಿ ಪ್ರವಾಹ ಮತ್ತು ಮಳೆಯಿಂದ ಸಾಕಷ್ಟು ಮನೆಗಳಿಗೆ ಹಾನಿಯಾಗಿದ್ದರೂ ಪರಿಹಾರ ವಿತರಣೆ ವಿಷಯದಲ್ಲಿ ಸಾಕಷ್ಟು ದೂರುಗಳು ಈಗಲೂ ಕೇಳಿಬರುತ್ತಲೇ ಇವೆ. ಸರ್ಕಾರದ ಪ್ರಕಾರ ಬೆಳಗಾವಿಯ 7 ಜಿಲ್ಲೆಗಳಲ್ಲಿ ಪ್ರವಾಹ ಮಳೆಯಿಂದ 16496 ಮನೆಗಳಿಗೆ ಹಾನಿಯಾಗಿದೆ. ಬೆಳಗಾವಿ ಜಿಲ್ಲೆಯೊಂದರಲ್ಲೇ 11542 ಮನೆಗಳು ಹಾಳಾಗಿವೆ. ಇದರಲ್ಲಿ 6564 ಮನೆಗಳು ಮಾತ್ರ ರಾಜೀವ್‌ ಗಾಂಧಿ ವಸತಿ ನಿಗಮದಲ್ಲಿ ನೋಂದಣಿಯಾಗಿವೆ. ಉ.ಕ. ಜಿಲ್ಲೆಯಲ್ಲಿ 1898 ಮನೆಗಳು ಹಾನಿಯಾಗಿದ್ದರೂ 1265 ಮನೆಗಳು ತಂತ್ರಾಂಶದಲ್ಲಿ ದಾಖಲಾಗಿವೆ. ಧಾರ ವಾಡದಲ್ಲಿ 1340 ಮನೆಗಳ ಪೈಕಿ 845, ಬಾಗಲಕೋಟೆಯಲ್ಲಿ 444ರ ಪೈಕಿ 240, ಗದಗದಲ್ಲಿ 235ರ ಪೈಕಿ ಪೈಕಿ 107, ಹಾವೇರಿಯಲ್ಲಿ 973ರ ಪೈಕಿ, 772 ಮನೆಗಳು ನೋಂದಣಿಯಾಗಿವೆ. ವಿಜಯಪುರ ಜಿಲ್ಲೆಯಲ್ಲಿ 64 ಮನೆಗಳು ಹಾನಿಗೊಳಗಾಗಿದ್ದರೂ ವಸತಿ ನಿಗಮದ ತಂತ್ರಾಂಶದಲ್ಲಿ ಒಂದೂ ಮನೆ ದಾಖಲಾಗಿಲ್ಲ.

Advertisement

ಪ್ರವಾಹ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸಲಾಗಿದೆ. ಬೆಳೆ ಹಾನಿ ಪರಿಹಾರ ನೀಡಲಾಗಿದೆ. ಮುಖ್ಯವಾಗಿ ಮನೆಗಳ ಹಾನಿ ವಿಷಯದಲ್ಲಿ ಕೆಲವು ಗೊಂದಲಗಳಿವೆ. ಅನೇಕ ಕಡೆ ಇನ್ನೂ ಹಾನಿಗೊಳಗಾದ ಮನೆಗಳು ರಾಜೀವ್‌ ಗಾಂಧಿ ವಸತಿ ನಿಗಮದಲ್ಲಿ ದಾಖಲಾಗಿಲ್ಲ ಎಂಬ ದೂರುಗಳಿವೆ. ಹೀಗಾಗಿ ಮರು ಪರಿಶೀಲನೆಗೆ ಕ್ರಮ ವಹಿಸಲಾಗಿದೆ.  ●ಗೋವಿಂದ ಕಾರಜೋಳ, ಜಲಸಂಪನ್ಮೂಲ ಸಚಿವ

ಮನೆ ಹಾನಿ ಪರಿಹಾರ ವಿಷಯದಲ್ಲಿ ನಿಜವಾದ ಸಂತ್ರಸ್ತರಿಗೆ ಅನ್ಯಾಯವಾಗಿದೆ. ಸರ್ಕಾರ ಬಹಳ ಗೊಂದಲ ಮತ್ತು ತಾರತಮ್ಯ ಮಾಡಿದೆ. ಬಹುತೇಕ ಕಡೆ ನಿಜವಾಗಿ ಹಾನಿಯಾದ ಮನೆಗಳ ಸಮೀಕ್ಷೆಯಾಗಿಲ್ಲ. ಸ್ವತಃ ಪ್ರಾದೇಶಿಕ ಆಯುಕ್ತರು ಮರು ಸಮೀಕ್ಷೆ ಮಾಡುವಂತೆ ವರದಿ ನೀಡಿದ್ದರೂ ಇದುವರೆಗೆ ಮರು ಸಮೀಕ್ಷೆ ಕಾರ್ಯ ನಡೆದಿಲ್ಲ. ●ಭೀಮಪ್ಪ ಗಡಾದ, ಸಮಾಜ ಸೇವಕ 

●ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next