ಪಡುಬಿದ್ರಿ: ಕಾರ್ತಿಕ ಮಾಸದ 12ನೇ ದಿನವೇ ಉತ್ತಾನದ್ವಾದಶಿ. ಯತಿಗಳಿಗೆ ಚಾತುರ್ಮಾಸ ವ್ರತ ಸಂಕಲ್ಪದ ಕೊನೆಯ ದಿನವೂ ಹೌದು. ಶ್ರೀ ಕೃಷ್ಣನ ನೆಲೆವೀಡು ಉಡುಪಿಯಲ್ಲಿ ಲಕ್ಷ ದೀಪೋತ್ಸವದ ಆರಂಭವೂ ಅಂದೇ ಆಗಲಿದೆ. ಇದು ಈ ಬಾರಿ ನ. 9ರ ದಿನ ವಿಶೇಷವಾಗಿ ಹಿಂದೂ ಧರ್ಮಶ್ರದ್ಧೆಯೊಂದಿಗೆ ಮನೆ ಮನೆಗಳಲ್ಲಿನ ತುಳಸೀ ವೃಂದಾವನದ ಸನ್ನಿಧಾನದಲ್ಲಿ ತುಳಸೀ ಹಬ್ಬದ ರೂಪದಲ್ಲಿ ಆಚರಿಸಲ್ಪಡುತ್ತದೆ.
“ಉತ್ಥಾನ’ ಎಂದರೆ ಏಳು ಅಥವಾ ಎಬ್ಬಿಸುವುದೆಂದರ್ಥ. ನರಕಾಸುರನ ವಧಾ ನಂತರ ಎಣ್ಣೆ ಹಚ್ಚಿ ಸ್ನಾನ ಮಾಡಿ ಮಲಗುವ ಭಗವಂತನನ್ನು ಉತ್ಥಾನ ದ್ವಾದಶೀ ದಿನ ದೇವತೆಗಳು ಬಂದು ಎಬ್ಬಿಸುತ್ತಾರೆ. ಆದ್ದರಿಂದ ತುಲಸೀ ಸನ್ನಿಧಾನದಲ್ಲಿ ಈ ದಿನದಿಂದು ವಿಶೇಷವಾಗಿ ಭಗವಂತನನ್ನು ಪೂಜಿಸಿ ಆರಾಧಿಸುತ್ತಾರೆ.
ತುಲಸಿಗ್ ಬಜಿಲ್ ಪಾಡುನಿ, ತುಲಸೀ ಪರ್ಬ ಎನ್ನುವ ರೀತಿಯಲ್ಲಿ ತುಳುವರು ಇದನ್ನು ಆಚರಿಸಿದರೆ, ತುಳಸೀ ಪೂಜೆ, ಸಂಕೀರ್ತನೆ, ಉತ್ಥಾನ ದ್ವಾದಶಿಗಳು ವೈದಿಕರ ಕ್ರಮವಾಗಿ ಇಂದು ರೂಢಿಯಲ್ಲಿವೆ.
ವೈಜ್ಞಾನಿಕವಾಗಿಯೂ ಅತೀ ಹೆಚ್ಚು ಆಮ್ಲಜನಕವನ್ನು ಹೊರಸೂಸುವ ತುಳಸೀ ಗಿಡವು ಔಷಧೀಯ ಗುಣವುಳ್ಳದ್ದಾಗಿದೆ. ಇದು ಮನೆಯ ಮುಂದಿದ್ದರೆ ಉತ್ತಮವೆಂಬ ಕಲ್ಪನೆಯೊಂದಿಗೆ ಪ್ರತೀ ಮನೆಯ ಮುಂದೆ ಪಶ್ಚಿಮಾಭಿಮುಖವಾಗಿ ತುಲಸೀ ಕಟ್ಟೆಯನ್ನು ನಿರ್ಮಿಸುತ್ತಾರೆ. ಉತ್ಥಾನ ದ್ವಾದಶೀ ದಿನ ಮನೆಯಂಗಳದ ತುಳಸೀ ಕಟ್ಟೆಗೆ ದೀಪವನ್ನು ಹಚ್ಚಿಟ್ಟು ಧಾತ್ರೀ(ನೆಲ್ಲಿ) ದೇವಿಯೊಂದಿಗೆ ತುಳಸಿಯ ಸನ್ನಿಧಾನದಲ್ಲಿ ಭಗವಂತನನ್ನು ಪೂಜಿಸುತ್ತಾರೆ.
ಬ್ರಾಹ್ಮಣೇತರರಿಗೆ ಭಕ್ತಿ ಶ್ರದ್ಧೆಗಳೇ ಮುಖ್ಯವಾಗಿ ತುಳಸಿ ಪರ್ಬದ ಆಚರಣೆಯಾದÃ,ೆ ಬ್ರಾಹ್ಮಣರು ಪೂಜಾ ನಂತರ ಅಂದು ಪ್ರಾತಃ ವಾದಿರಾಜಕೃತ ತುಳಸೀ ಸಂಕೀರ್ತನೆಯ ಹಾಡುಗಳನ್ನು ಹಾಡಿ ಪ್ರದಕ್ಷಿಣೆ ನಮಸ್ಕಾರಗಳನ್ನು ಸಲ್ಲಿಸುತ್ತಾರೆ. ಸಂಜೆಯ ಗೋಧೂಳೀ ಲಗ್ನದಲ್ಲಿ ತುಳಸಿಯ ಸನ್ನಿಧಾನದಲ್ಲಿ ಭಗವಂತನಿಗೆ ಹಾಲೆರೆದು “ಕ್ಷೀರಾಬ್ದಿ’ಯನ್ನು ನೆರವೇರಿಸಿ ಭಗವಂತನನ್ನು ನಿದ್ದೆಯಿಂದ ಎಬ್ಬಿಸುವ ಕ್ರಮವನ್ನು ಗೈಯ್ಯಲಾಗುತ್ತದೆ.
ಇದರೊಂದಿಗೆ ಹಿಂದೂಗಳ ಹಬ್ಬಗಳ ಪರ್ವವು ಕೊನೆಗೊಳ್ಳುತ್ತದೆ. ಆಯನೋತ್ಸವ ಗಳೊಂದಿಗೆ ಜಾತ್ರೆಯ ಪರ್ವ ಈ ನಂತರದಲ್ಲಿ ಆರಂಭಗೊಳುÉತ್ತದೆ.