ಮಂಗಳೂರು: ಕಾಶ್ಮೀರದ ಪುಲ್ವಾಮದಲ್ಲಿ ಭಾರತೀಯ ಸೇನೆಯ ಮೇಲೆ ಭಯೋತ್ಪಾದಕರು ಮಾಡಿರುವ ದಾಳಿಗೆ ಭಾರತ ತಿರುಗೇಟು ನೀಡಲೇಬೇಕು. ಈ ವಿಚಾರದಲ್ಲಿ ಕೇಂದ್ರ ಸರಕಾರದ ಜತೆಗೆ ನಾವಿದ್ದೇವೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಈ ದಾಳಿ ಅತ್ಯಂತ ಹೇಯ ಮತ್ತು ಅಮಾನವೀಯ ಕೃತ್ಯ. ಇದು ಸೇನೆಯ ಮೇಲಿನ ದಾಳಿಯಷ್ಟೇ ಅಲ್ಲ; ಭಾರತದ ಸ್ವಾಭಿಮಾನ ಮತ್ತು ಗೌರವದ ಮೇಲೆ ನಡೆದ ದಾಳಿ. ಕೃತ್ಯವನ್ನು ಖಂಡಿಸಿ ಎಲ್ಲ ಜಾತಿ-ಧರ್ಮದವರು ಒಗ್ಗಟ್ಟಾಗಬೇಕು ಎಂದರು.
ಅಧಿವೇಶನಕ್ಕೆ ಅಡ್ಡಿ ಪಡಿಸುವುದ ರೊಂದಿಗೆ ಬಜೆಟ್ ಮಂಡನೆಗೆ ತಡೆಯೊಡ್ಡಬೇಕು, ಆ ಮೂಲಕ ರಾಜ್ಯದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಆಡಳಿತದಲ್ಲಿ ವಿಫಲವಾಗಿದೆ ಎಂದು ಬಿಂಬಿಸಬೇಕು ಎಂಬುದು ಬಿಜೆಪಿಯ ಉದ್ದೇಶವಾಗಿತ್ತು. ಈ ತಂತ್ರಗಾರಿಕೆಯ ಹಿಂದೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಕುಮ್ಮಕ್ಕಿದೆ ಎಂದು ಅವರು ಆರೋಪಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಎರಡು ಕೆರೆಗಳ ಅಭಿವೃದ್ಧಿಗಾಗಿ 3.5 ಕೋಟಿ ರೂ. ಮಂಜೂರಾಗಿದೆ. ಮೂಲ್ಕಿಯ ಜಳಕದ ಕೆರೆ ಪುನರುತ್ಥಾನಕ್ಕೆ 2 ಕೋಟಿ ರೂ. ಮತ್ತು ಕೊಣಾಜೆ ಬಳಿ ದಡಸ್ ಕೆರೆಯ ಅಭಿವೃದ್ಧಿ 1.5 ಕೋಟಿ ರೂ. ಬಿಡುಗಡೆ ಮಂಜೂರಾಗಿದೆ ಎಂದು ಇದೇವೇಳೆ ಯು.ಟಿ. ಖಾದರ್ ತಿಳಿಸಿದರು.
ಅಬುಧಾಬಿಯ ಬಿಡಬ್ಲ್ಯುಎಫ್ ವತಿಯಿಂದ ಶನಿವಾರ ನಗರದ ಮಿಲಾಗ್ರಿಸ್ ಹಾಲ್‌ನಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಏರ್ಪಡಿಸುವ ಮೂಲಕ ಅಬುಧಾಬಿಯ ಬಿಡಬ್ಲ್ಯುಎಫ್ ನಾಡಿನ ಇತರ ಸಂಘಟನೆಗಳಿಗೆ ಸ್ಫೂರ್ತಿಯಾಗಿದೆ. ಸಾಮೂಹಿಕ ವಿವಾಹದೊಂದಿಗೆ ಸಮುದಾಯದ ಕಟ್ಟಕಡೆಯ ಕುಟುಂಬಗಳಿಗೆ ಆರ್ಥಿಕ ಚೈತನ್ಯ ನೀಡಿದಂತಾಗಿದೆ ಎಂದು ಸಚಿವ ಖಾದರ್ ಹೇಳಿದರು.
ಅನೇಕ ಮಂದಿ ಶಾದಿಭಾಗ್ಯ ಯೋಜನೆಯ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸಿದ್ದರೂ ಇನ್ನೂ ಅವರಿಗೆ ಹಣ ಬಿಡುಗಡೆಯಾಗದಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿ ಅರ್ಹ ಫಲಾನುಭವಿಗಳಿಗೆ ಶಾದಿಭಾಗ್ಯ ಯೋಜನೆಯ ಹಣ ಸಿಗುವಂತೆ ಮಾಡಲಾಗುವುದು ಎಂದು ವಿವರಿಸಿದರು.
ಶಾದಿಭಾಗ್ಯ ಹಣ ಬಿಡುಗಡೆಗೆ ಕ್ರಮ
ರಾಜ್ಯಾದ್ಯಂತ ಶಾದಿಭಾಗ್ಯ ಯೋಜನೆಗೆ ಹಣ ಬಿಡುಗಡೆಗೆ ಬಾಕಿ ಇದೆ. ಸಿಎಂ ಗಮನ ಸೆಳೆದು ಶೀಘ್ರ ಆ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.