ಮಂಗಳೂರು: ಸಮಾಜಮುಖೀ ಸೇವೆಯಲ್ಲಿ ತೊಡಗಿಸಿಕೊಂಡಾಗ ಸಾರ್ಥಕ್ಯ ಸಿಗುತ್ತದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ ಕಮಿಟಿಯು 50 ವರ್ಷಗಳಿಂದ ಸಮುದಾಯದ, ಸಮಾಜದ ಅಭಿವೃದ್ಧಿಗೆ ಸದಾ ಶ್ರಮಿಸುತ್ತಾ ಧನ್ಯತೆಗೆ ಪಾತ್ರವಾಗಿದೆ ಎಂದು ಸಚಿವ ಯು.ಟಿ. ಖಾದರ್ ಹೇಳಿದರು.
ಪುರಭವನದಲ್ಲಿ ಶನಿವಾರ ಜರಗಿದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ ಕಮಿಟಿಯ ಸ್ವರ್ಣ ಮಹೋತ್ಸವ ಕಾರ್ಯಕ್ರಮದ ಸಮಾರೋಪವನ್ನು ಉದ್ದೇಶಿಸಿ ಮಾತನಾಡಿದ ಅವರು, ಶಿಕ್ಷಣದಿಂದ ಉನ್ನತಿಯನ್ನು ಸಾಧಿಸಲು ಸಾಧ್ಯ. ಇದರ ಜತೆಗೆ ಕೌಶಲ ಅಭಿವೃದ್ಧಿ, ಉದ್ಯೋಗಾವಕಾಶಗಳ ಸೃಷ್ಟಿಗೆ ಆದ್ಯತೆ ಸಮುದಾಯದ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದರು. ಕಮಿಟಿಯನ್ನು ಸಮುದಾಯದ ಸೇವೆಯಲ್ಲಿ 50 ವರ್ಷಗಳಿಂದ ಮುನ್ನಡೆಸುತ್ತಾ ಬಂದಿರುವ ಎಲ್ಲ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಅಭಿನಂದಿಸುತ್ತೇನೆ ಎಂದರು. ಸ್ವರ್ಣ ಮಹೋತ್ಸವದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.
ಸಮಾರಂಭವನ್ನು ಉದ್ಘಾಟಿಸಿದ ಐವನ್ ಡಿ’ಸೋಜಾ ಮಾತನಾಡಿ, ಸಮಾಜವನ್ನು ಒಗ್ಗೂಡಿಸಿ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಕಾರ್ಯದಲ್ಲಿ ಕಮಿಟಿ ಮಹತ್ತರ ಕೊಡುಗೆ ನೀಡುತ್ತಿದೆ ಎಂದರು. ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ, ಕೆ.ಎಸ್. ಮುಹಮ್ಮದ್ ಮಸೂದ್ ಪ್ರಸ್ತಾವನೆಗೈದರು. ಸ್ವರ್ಣ ಮಹೋತ್ಸವದ ಅಂಗವಾಗಿ 50 ಹೊಲಿಗೆ ಯಂತ್ರ ವಿತರಿಸಲಾಯಿತು.
ಮಾಜಿ ಸಚಿವರಾದ ಬಿ. ರಮಾನಾಥ ರೈ, ಕೆ. ಅಭಯಚಂದ್ರ ಜೈನ್, ಮಾಜಿ ಶಾಸಕ ಜೆ.ಆರ್. ಲೋಬೋ, ಮಂಗಳೂರು ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು, ಮನಪಾ ಉಪಮೇಯರ್ ಮಹಮ್ಮದ್ ಕುಂಜತ್ತಬೈಲ್, ಆಯುಕ್ತ ಮಹಮ್ಮದ್ ನಜೀರ್, ಕಾರ್ಪೊರೇಟರ್ ಅಬ್ದುಲ್ ಲತೀಫ್, ರಾಜ್ಯಸಭಾ ಮಾಜಿ ಸದಸ್ಯ ಬಿ. ಇಬ್ರಾಹಿಂ, ಪಿಎಫ್ಐ ರಾಜ್ಯ ಸಮಿತಿ ಅಧ್ಯಕ್ಷ ಮುಹಮ್ಮದ್ ಶಾಕಿಬ್, ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಎಚ್. ಖಾದರ್, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ. ಬಾವಾ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರವೂಫ್ ಪುತ್ತಿಗೆ, ದ.ಕ., ಉಡುಪಿ ಜಮೀಯತುಲ್ ಫಲಾಹ್ ಅಧ್ಯಕ್ಷ ಶಾಹುಲ್ ಹಮೀದ್, ರಾಜ್ಯ ಎಸ್‌ಡಿಪಿಐ ಅಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ, ನ್ಯಾಯವಾದಿ ಮುಝಫರ್ ಅಹಮ್ಮದ್, ಮುಸ್ಲಿಂ ಸಮಾಜ ಬಂಟ್ವಾಳ ಕಾರ್ಯದರ್ಶಿ ಹನೀಫ್ ಖಾನ್ ಕೊಡಾಜೆ, ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ, ಹಿದಾಯ ಫೌಂಡೇಶನ್ ಅಧ್ಯಕ್ಷ ಮುಹಮ್ಮದ್ ಹನೀಫ್ ಅತಿಥಿಯಾಗಿದ್ದರು.
ಇಬ್ರಾಹೀಂ ಕೋಡಿಜಾಲ ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕ, ಮಾಜಿ ಮೇಯರ್ ಕೆ. ಅಶ್ರಫ್, ಪದಾಧಿಕಾರಿಗಳಾದ ಅಹ್ಮದ್ ಬಾಷಾ ತಂšಳ್, ಡಿ.ಎಂ. ಅಸ್ಲಂ, ಮುಹಮ್ಮದ್ ಹನೀಫ್, ಸಿ.ಎಂ. ಮುಸ್ತಫಾ, ಅಹ್ಮದ್ ಬಾವಾ ಪಡೀಲ್, ಅಹ್ಮದ್ ಬಾವಾ ಬಜಾಲ್, ಸಿ.ಎಂ. ಹನೀಫ್, ಬಿ.ಎಸ್. ಇಮಿಯಾಝ, ಮುಹಮ್ಮದ್ ಬಪ್ಪಳಿಗೆ, ಎಂ.ಎ. ಅಶ್ರಫ್ ಉಪಸ್ಥಿತರಿದ್ದರು. ಹುಸೈನ್ ಕಾಟಿಪಳ್ಳ ನಿರೂಪಿಸಿದರು.
ಸ್ವರ್ಣ ಮಹೋತ್ಸವದ ಸಂಭ್ರಮ
ಕಮಿಟಿಯ ಸ್ವರ್ಣ ಮಹೋತ್ಸವ ಅತ್ಯಂತ ಸಂಭ್ರಮದ ಕ್ಷಣ. ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರ ನಿರಂತರ ಪರಿಶ್ರಮ, ಪ್ರೋತ್ಸಾಹದಿಂದ 50 ವರ್ಷಗಳ ಈ ಯಶಸ್ವಿ ಪಯಣ ಸಾಧ್ಯವಾಗಿದೆ. ಸಮುದಾಯದ ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಮತ್ತು ಆರ್ಥಿಕ ಅಭಿವೃದ್ಧಿಗೆ ಶ್ರಮಿಸುವುದು ಮತ್ತು ಶಾಂತಿ, ಸಾಮರಸ್ಯದ ಸಮಾಜ ನಿರ್ಮಾಣ ಕಮಿಟಿಯ ಧ್ಯೇಯವಾಗಿದೆ ಎಂದು ಅಧ್ಯಕ್ಷ ಕೆ.ಎಸ್. ಮುಹಮ್ಮದ್ ಮಸೂದ್ ವಿವರಿಸಿದರು.