ದೇವನಹಳ್ಳಿ: ಸರ್ಕಾರದಿಂದ ನೀಡುತ್ತಿರುವ ಲ್ಯಾಪ್‌ಟಾಪ್ ಸದ್ಬಳಕೆ ಮಾಡಿಕೊಂಡು ಉನ್ನತ ಶಿಕ್ಷಣ ಪಡೆಯಬೇಕು ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಣಾ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಿಸಿ ಅವರು ಮಾತನಾಡಿದರು.
ಉನ್ನತ ಶಿಕ್ಷಣ ಪಡೆಯಲು ನೆರವಾಗುವಂತೆ ಪದವಿ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತ ಲ್ಯಾಪ್ ಟಾಪ್ ನೀಡುತ್ತಿದೆ. ಪಠ್ಯೇತರ ಚಟುವಟಿಕೆ, ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆಯುವುದರ ಜೊತೆಗೆ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ವಿದ್ಯಾರ್ಥಿಗಳು ಸಿದ್ಧರಾಗಬೇಕು . ಐಎಎಸ್, ಕೆಎಎಸ್, ಐಪಿಎಸ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದರ ಮೂಲಕ, ಓದಿದ ಶಾಲೆಗೆ, ತಂದೆ-ತಾಯಿ, ಊರಿಗೆ ಕೀರ್ತಿ ತರಬೇಕು. ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಕರಿಂದ ಅಗತ್ಯ ಸಲಹೆ- ಸೂಚನೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
44 ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡಲಾಗುತ್ತಿದೆ. ಶಿಕ್ಷಣ ಕೇವಲ ಪುಸ್ತಕಗಳಿಗೆ ಮಾತ್ರ ಸೀಮಿತವಾಗಿಲ್ಲ. ತಂತ್ರಜ್ಞಾನಗಳ ಬಳಕೆಯಿಂದ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಮಾಹಿತಿ ದೊರಕುತ್ತಿದೆ ಎಂದರು. ಜಿಪಂ ಸದಸ್ಯೆ ಅನಂತ ಕುಮಾರಿ ಮಾತನಾಡಿ, ಪ್ರತಿ ವಿದ್ಯಾರ್ಥಿಗೂ ಸರ್ಕಾರ ಸಮಾನ ಆದ್ಯತೆ ನೀಡಿದೆ. ಲ್ಯಾಪ್‌ಟಾಪ್ ಮೂಲಕ ನಿಮ್ಮ ಕೌಶಲ, ಜ್ಞಾನ ವೃದ್ಧಿಸಿಕೊಳ್ಳಬಹುದು ಎಂದರು.
ಕಾಲೇಜು ಪ್ರಾಂಶುಪಾಲ ಶಿವಶಂಕರಪ್ಪ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಪುರಸಭಾ ಸದಸ್ಯರಾದ ಜಿ.ಎ ರವೀಂದ್ರ, ಎಸ್.ನಾಗೇಶ್, ಎಪಿಎಂಸಿ ಅಧ್ಯಕ್ಷ ಕೆ.ವಿ ಮಂಜುನಾಥ್, ಪಿಕಾಡ್ ì ಬ್ಯಾಂಕ್ ಅಧ್ಯಕ್ಷ ಮುನಿರಾಜು, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಮುನೇಗೌಡ, ತಾಪಂ ಸದಸ್ಯ ಎಸ್. ಮಹೇಶ್, ಪುರಸಭಾ ಮಾಜಿ ಸದಸ್ಯರಾದ ವಿ.ಗೋಪಾಲ್, ಎಂ.ಕುಮಾರ್, ಪಿ.ರವಿಕುಮಾರ್, ಟೌನ್ ಜೆಡಿಎಸ್ ಅಧ್ಯಕ್ಷ ಮುನಿನಂಜಪ್ಪ, ಪ್ರಧಾನ ಕಾರ್ಯದರ್ಶಿ ಸಾಯಿಕುಮಾರ್ ಬಾಬು, ಕುಂದಾಣ ಹೋಬಳಿ ಜೆಡಿಎಸ್ ಅಧ್ಯಕ್ಷ ಚಂದ್ರೇಗೌಡ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ನಾಗೇಶ್ ಬಾಬು, ವಿಜಯ್ ಕುಮಾರ್, ಸುನೀಲ್, ಮುತ್ತುಕುಮಾರ್, ಬಿ.ಪಿಳ್ಳರಾಜು, ದೈಹಿಕ ಶಿಕ್ಷಣ ನಿರ್ದೇಶನಾಯದ ಕೆ.ಕೆ ರವಿಚಂದ್ರ, ಉಪನ್ಯಾಸಕರಾದ ಸಜ್ಜದ್ ಪಾಷಾ, ಕೆಂಪೇಗೌಡ, ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಟಿ.ರವಿ ಮತ್ತಿತರರಿದ್ದರು.