Advertisement

ಸಾಧನೆ ಅವಕಾಶ ಬಳಸಿಕೊಳ್ಳಿ: ಸುರೇಶ ಚನಶೆಟ್ಟಿ

12:25 PM Dec 31, 2021 | Team Udayavani |

ಬೀದರ: ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆಗೆ ಇರುವ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.

Advertisement

ತಾಲೂಕಿನ ಕಮಠಾಣ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕುವೆಂಪು ಜನ್ಮದಿನದ ಪ್ರಯುಕ್ತ ಜಿಲ್ಲಾ ಕಸಾಪ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆ, ಕುವೆಂಪು ಭಾವಗೀತೆ ಗಾಯನ ಮತ್ತು ಮಕ್ಕಳ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಸಾಧನೆ ಮಾಡಲು ಬಹಳಷ್ಟು ಅವಕಾಶಗಳಿದ್ದರೂ ಸಾಧಕರಾಗುವವರು ಕೆಲವರು ಮಾತ್ರ. ಛಲ ಹಾಗೂ ಸತತ ಪ್ರಯತ್ನಗಳೇ ಸಾಧನೆಯ ಮೆಟ್ಟಿಲುಗಳಾಗಿವೆ. ಮಾತೃಭಾಷೆ ಕನ್ನಡದ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ ಬೆಳೆಸಿಕೊಳ್ಳಬೇಕು. ದೈನಂದಿನ ಜೀವನದಲ್ಲಿ ಕನ್ನಡ ಭಾಷೆಯನ್ನೇ ಹೆಚ್ಚು ಹೆಚ್ಚಾಗಿ ಬಳಸಬೇಕು ಎಂದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಕಾರ್ಯಕ್ರಮ ಉದ್ಘಾಟಿಸಿ, ಮಕ್ಕಳ ಕವಿಗೋಷ್ಠಿ ಮತ್ತಿತರ ಕಾರ್ಯಕ್ರಮಗಳು ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸುತ್ತವೆ. ಕುವೆಂಪು ಅವರು ಕನ್ನಡಕ್ಕೆ ನೀಡಿದ ಕೊಡುಗೆಯನ್ನು ಶಬ್ದಗಳಲ್ಲಿ ವರ್ಣಿಸಲಾಗದು. ಅವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ತಿಳಿಸಿದರು.

ಮುಖ್ಯಶಿಕ್ಷಕ ವೆಂಕಟರಾವ್‌ ಸಿಂಧೆ ಮಾತನಾಡಿ, ಮಹಾ ಪುರುಷರ ಜಯಂತಿಗಳು ತೋರಿಕೆಗೆ ಆಗಬಾರದು. ಅವರ ತತ್ವಗಳನ್ನು ಜೀವನದಲ್ಲಿ ಆಚರಣೆಗೆ ತರಬೇಕು. ಕನ್ನಡದ ಎಂಟು ಜನ ಸಾಹಿತಿಗಳಿಗೆ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ದೊರೆತಿರುವುದು ಕನ್ನಡಿಗರಿಗೆ ಹೆಮ್ಮೆ, ಅಭಿಮಾನದ ಸಂಗತಿಯಾಗಿದೆ ಎಂದರು.

ಸಾಹಿತಿ ರಮೇಶ ಬಿರಾದಾರ ಮಾತನಾಡಿದರು. ವಿದ್ಯಾರ್ಥಿಗಳಿಂದ ಕುವೆಂಪು ಕುರಿತು ಭಾಷಣ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪರಿಚಯ, ಭಾವಗೀತೆ ಗಾಯನ, ಕವನ ವಾಚನ ನಡೆಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ 125ಕ್ಕೆ 125 ಅಂಕ ಪಡೆದ ಸುಹಾನಿ ಸಾಲೋಮನ್‌ ಹಾಗೂ 123 ಅಂಕ ಗಳಿಸಿದ ಪೂಜಾ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಹ ಶಿಕ್ಷಕಿಯರಾದ ರಶೀದಾ ಬೇಗಂ, ಜಗದೇವಿ ಸಾವಳೆ, ಅಶೋಕ ಸಿಂಧೆ, ಪಾಲಕರಾದ ಸಾಲೋಮನ್‌, ಜೈರಾಜ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next