Advertisement
ಸಾಮಾನ್ಯವಾಗಿ ಅಡುಗೆ ಕೆಲಸ (ಮನೆಗಳಲ್ಲಿ) ಎಂಬ ಹೊಣೆಗಾರಿಕೆಯು ಮಹಿಳೆಯರ ಬಗಲಿಗೆ ಬಿದ್ದಿರುವುದರಿಂದ, ಆ ಆಧಾರದಲ್ಲಿ ಅವರನ್ನು ಮೂರು ವಿಧಗಳಾಗಿ ವಿಂಗಡಿಸಬಹುದೇನೋ? ಅಡುಗೆ ಕೆಲಸ ಮಾಡದವರು, ಕಷ್ಟಪಟ್ಟು ನಿರ್ವಹಿಸುವವರು, ಇಷ್ಟಪಟ್ಟು ಬೇಯಿಸುವವರು- ಹೀಗೆ. ಕೆಲವು ಮಹಿಳೆಯರಿಗೆ ಅಡುಗೆ ಕೆಲಸ ಒಗ್ಗದ ವಿಚಾರ, ಜೀವವೂ ಬಗ್ಗದು. ಕೆಲವು ಹೆಂಗಳೆ ಯರಿಗೆ ಅಡುಗೆಯೊಂದು ಪಾಕಶಾಸ್ತ್ರ . ಅದೊಂದು ಕಲೆ, ತಮಗೆ ಕರಗತವೆಂದು ಹಿಗ್ಗುತ್ತಲೇ ಸರಸರನೆ ಅಡುಗೆ ಕೆಲಸ ಮುಗಿಸಿ, ನಿರಾಳವಾಗುವ ಮನೋಭಾವದವರು. ಆ ಬಳಿಕ ಹೊರಗಿನ ಓಡಾಟ, ವ್ಯವಹಾರಗಳಿಗೂ ಸಮಯ ಮೀಸಲಿಡುತ್ತಾರೆ. ಪಾದರಸ ಪಟುತ್ವದ ಸರಳ, ಸಂತೃಪ್ತರಿವರು. ಅಡುಗೆಮನೆ ಅವರಿಗೆ ಸೆರೆಮನೆಯಲ್ಲ, ಅರಮನೆಯಂತೆ! ಅಲ್ಲಿನ ಒಡತಿಯರು ಅವರೇ. ಚಾಕಚಕ್ಯತೆಯ ಪ್ರದರ್ಶನ ರಂಗವದು. ಈ ಭಾವನೆ, ವರ್ತನೆ ವ್ಯಕ್ತಿಗತ. ಆದರೆ ಒಮ್ಮೆಯಾದರೂ ಗೃಹಕೃತ್ಯಗಳ ಬಗ್ಗೆ ಗೊಣಗದ ಮಾನಿನಿಯರೇ ಇರಲಿಕ್ಕಿಲ್ಲ.
Related Articles
Advertisement
ಪಾತ್ರೆಗಳೊಂದಿಗೆ ಮಾನವನ ಪಾತ್ರವು ಎಷ್ಟು ಹಳೆಯದೋ ಹೇಳಬಲ್ಲವರಾರು? ತ್ರೇತಾಯುಗದ ರಾಮಾಯಣ ಹಾಗೂ ದ್ವಾಪರದ ಮಹಾಭಾರತ ಮಹಾಕಾವ್ಯಗಳಲ್ಲಿ ಎರಡು ಪಾತ್ರೆ ಪ್ರಸಂಗಗಳ ಪ್ರಮುಖ ಉಲ್ಲೇಖವಿದೆ. ದಶರಥ ರಾಜನು ಪುತ್ರಕಾಮೇಷ್ಟಿ ಯಾಗವನ್ನು ಕೈಗೊಂಡಾಗ ಯಜ್ಞಾಂತ್ಯದಲ್ಲಿ ಅಗ್ನಿಜ್ವಾಲೆಯಂತೆ ಕಂಗೊಳಿಸುವ ಮಹಾಪುರುಷನೊಬ್ಬನು ಯಜ್ಞಕುಂಡದಿಂದ ಮೇಲೆದ್ದು ಬಂದ. ಹಿಡಿದುಕೊಂಡಿದ್ದ ಪಾಯಸಭರಿತ ಸ್ವರ್ಣ ಪಾತ್ರೆಯೊಂದನ್ನು ದಶರಥನ ಕೈಗೊಪ್ಪಿಸಿ, ಪತ್ನಿಯರಿಗೆ ಹಂಚುವಂತೆ ತಿಳಿಸಿ ನಿರ್ಗಮಿಸಿದ. ತ್ರೇತಾಯುಗದ ಈ ಪಾಯಸಪಾತ್ರೆಯು ಸಂತಾನಕಾರಕವಾಗಿ ಮುಂದಿನ ಸಂತತಿ, ಸುಖಸಂಸಾರಕ್ಕೆ ಕಾರಣವಾಯಿತು.
ದ್ವಾಪರಯುಗದಲ್ಲಿ ಪಾತ್ರೆಯೊಂದು ಹೀಗೇ ವರವೆಂಬಂತೆ ಲಭಿಸಿ ಪಾಂಡವರ ಉದರಾಗ್ನಿ ತಣಿಸಿದ ಕಥೆಯೂ ಅಷ್ಟೇ ರೋಚಕ. ಅರಣ್ಯವಾಸದಲ್ಲಿ ನೊಂದಿದ್ದ ಧರ್ಮರಾಯನನ್ನು ಸಂತೈಸಿದ ಧೌಮ್ಯಾಚಾರ್ಯರು ಸೂರ್ಯಮಂತ್ರವೊಂದನ್ನು ಉಪದೇಶಿಸಿದರು. ಧರ್ಮರಾಯನು ಭಕ್ತಿಪೂರ್ವಕವಾಗಿ ಆ ಮಂತ್ರವನ್ನು ಜಪಿಸುತ್ತಾ ಪ್ರಾರ್ಥಿಸಲು ಸೂರ್ಯನಾರಾಯಣನು ಸ್ವತಃ ಕೆಳಗಿಳಿದು ಬಂದು ಅವನ ಕೈಗೆ ಒಂದು ಅಕ್ಷಯವಾದ ಸ್ಥಾಲೀ ಪಾತ್ರೆಯನ್ನು ನೀಡಿದನು. “”ಇದನ್ನು ದ್ರೌಪದಿಗೆ ಕೊಡು, ಅವಳು ಅದನ್ನು ಪೂಜಿಸಿ, ಉಪಯೋಗಿಸಲಿ, ನಿತ್ಯವೂ ಬೇಕಾದಷ್ಟು ಪಕ್ವಾನ್ನ ನೀಡುವುದು. ದ್ರೌಪದಿಯ ಊಟದ ಬಳಿಕ, ಪಾತ್ರೆಯ ಆ ದಿನದ ಕೆಲಸವು ಸಮಾಪ್ತಿ” ಎಂದು ತಿಳಿಸುತ್ತ ನಿರ್ಗಮಿಸಿದನು. ಆ ಅಕ್ಷಯ ಹೇಮಪಾತ್ರೆಯಿಂದಾಗಿ ಪಾಂಡವರಿಗೆಲ್ಲ ವನವಾಸವು ವಿಹಾರಯಾತ್ರೆಯಾಯಿತು, ಬೇಯಿಸುವ ನಿತ್ಯ ತ್ರಾಸವಿಲ್ಲದೆ ದ್ರೌಪದಿಗೂ.
“”ಹಿರಣ್ಮಯೇನ ಪಾತ್ರೇಣ ಸತ್ಯ-ಸ್ಯಾಪಿ ಹಿತಂ ಮುಖಂ, ತತ್ ತ್ವಂ ಪೂಷನ್ ಅಪೌರ್ಣ ಸತ್ಯ-ಧರ್ಮಾಯ ದೃಷ್ಟಯೇ’- ಭೌತಿಕ ಜಗತ್ತಿನ ಆಮಿಷಗಳಿಂದ ಸತ್ಯವು ಮರೆಯಾಗಿದೆ, ಹೇಗೆಂದರೆ ಚಿನ್ನದ ಪಾತ್ರೆಯ ಮುಚ್ಚಳವು ಸತ್ಯದ ಗಡಿಯನ್ನು ಮುಚ್ಚಿದಂತೆ. ಈ ಮುಚ್ಚಳ ಅಜ್ಞಾನ, ಅಂಧಕಾರ, ಲೋಭದವು. ಭಗವಂತನೇ, ಅದನ್ನು ನೀನು ಕಿತ್ತು ಹಾಕಿ, ಸತ್ಯಧರ್ಮಗಳ ದರ್ಶನ ಮಾಡಿಸು”- ಎಂಬ ಆರ್ಷ ಪ್ರಾರ್ಥನೆಯು ಎಷ್ಟೊಂದು ಸಾತ್ವಿಕ ಹಾಗೂ ವಾಸ್ತವ! ವ್ಯಾವಹಾರಿಕ ಜಗತ್ತಿಗೂ ಅಡುಗೆಮನೆ ಲೋಕಕ್ಕೂ ಅನ್ವಯಿಸುವ ಜ್ವಲಂತ ಹೇಳಿಕೆಯಿದು. ಅಡುಗೆ ಮನೆಯೊಳಗಿನ ಮುಚ್ಚಿರಿಸಿದ ಪಾತ್ರೆಗಳು ಅಮೃತಸಮಾನ ಪಕ್ವಾನ್ನ ಇತ್ಯಾದಿಗಳೊಂದಿಗೆ, ಕೆಲವೊಂದು ಸತ್ಯಗಳನ್ನು ಕಟುವಾಸ್ತವಗಳನ್ನೂ ತಮ್ಮೊಳಗೆ ಹುದುಗಿಸಿಕೊಂಡಿರುವ ಸಾಧ್ಯತೆಗಳು ಇದ್ದೇ ಇವೆ ಎನ್ನಲಡ್ಡಿಯಿಲ್ಲ. ಅವುಗಳ ಸಕಾಲಿಕ ಅನಾವರಣ, ನಿವಾರಣೆಗಳು ಆಯಾ ಮನೆಗಳ ಮಹಿಳಾಮಣಿಗಳದ್ದೇ ಸಾಮರ್ಥ್ಯ. ಈ ಅರ್ಥದಲ್ಲೂ ಅವರು ಗೃಹಲಕ್ಷ್ಮಿಯರೇ.
ಸುಶೀಲಾ ಪಿ. ರಾವ್