Advertisement

Udupi: ಅಡುಗೆಯಲ್ಲಿ ಭಾರತಕ್ಕೆ ಮೊದಲ ಶ್ರೇಷ್ಠತಾ ಪದಕ ತಂದ ಹರ್ಷವರ್ಧನ್‌

03:19 PM Oct 01, 2024 | Team Udayavani |

ಉಡುಪಿ: ನನ್ನ ಅಪ್ಪ ಆಭರಣ ವ್ಯಾಪಾರಿ, ಅಮ್ಮ ಗೃಹಿಣಿ. ಇಬ್ಬರೂ ಚೆನ್ನಾಗಿ ಅಡುಗೆ ಮಾಡುತ್ತಾರೆ. ಹಾಗಾಗಿ ನನಗೆ ಬಾಲ್ಯದಿಂದಲೂ ಅಡುಗೆ ಆಸಕ್ತಿ ಇತ್ತು. ಜತೆಗೆ ಟಿವಿ ಶೋಗಳನ್ನು ನೋಡ್ತಾ ಇದ್ದೆ. ಹೀಗಾಗಿ ಆಸಕ್ತಿ ಹೆಚ್ಚಾಯಿತು: ಇದು ಫ್ರಾನ್ಸ್‌ನ
ಯುರೆಕ್ಸ್‌ಪೋ ಲಿಯಾನ್‌ದಲ್ಲಿ ನಡೆದ 47ನೇ ವಿಶ್ವ ಕೌಶಲ ಸ್ಪರ್ಧೆಯಲ್ಲಿ ಅಡುಗೆ ತಯಾರಿಸುವ ವಿಭಾಗದಲ್ಲಿ ಶ್ರೇಷ್ಠತಾ ಪದಕ ಪಡೆದ ಮಾಹೆ ವಿ.ವಿಯ ವಾಗ್ಶಾ ಕಾಲೇಜಿನ ಬಿಎ ಪಾಕಶಾಲೆ (ಕಲಿನರಿ) ವಿದ್ಯಾರ್ಥಿ ಹರ್ಷವರ್ಧನ್‌ ವಿಜಯ್‌ ಖಂಡಾರೆ ಮಾತು.

Advertisement

70 ದೇಶಗಳ 1400 ಕುಶಲಿಗರ ಪೈಕಿ ಅಡುಗೆ ವಿಭಾಗದಲ್ಲಿ ಭಾರತಕ್ಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಶ್ರೇಷ್ಠತಾ ಪದಕ ಬಂದಿದೆ. ಈ ಸಾಧನೆಗೆ ಕಾರಣವಾದ 21ರ ಯುವಕ ಹರ್ಷವರ್ಧನ್‌ ನೂರಾರು ಬಗೆಯ ಖಾದ್ಯಗಳನ್ನು ಅತ್ಯಂತ ವೇಗವಾಗಿ ಮತ್ತು ಶುಚಿರುಚಿಯೊಂದಿಗೆ ತಯಾರಿಸುವ ಹೆಗ್ಗಳಿಕೆ ಹೊಂದಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಖಾದ್ಯ ತಯಾರಿಸುವ ಈ ಹುಡುಗನಿಗೆ ವೈಯಕ್ತಿಕವಾಗಿ ಜೀರಾ ರೈಸ್‌ ಮತ್ತು ದಾಲ್‌ ಇಷ್ಟವಂತೆ.

52 ಕೌಶಲ ವಿಭಾಗದ ಸ್ಪರ್ಧೆ
ಸೆ.11 ರಿಂದ 15ರ ವರೆಗೆ ನಡೆದ 47ನೇ ವಿಶ್ವ ಕೌಶಲ ಸ್ಪರ್ಧೆಯಲ್ಲಿ ಹೇರ್‌ಕಟ್‌, ಚಾಕಲೇಟ್‌ ತಯಾರಿಕೆ, ಪ್ಲಬಿಂಗ್‌ ಹಾಗೂ ಹೋಟೆಲ್‌ ನಿರ್ವಹಣೆ ಸೇರಿದಂತೆ ಒಟ್ಟು 52 ಕೌಶಲ ವಿಭಾಗಗಳಲ್ಲಿ ಸ್ಪರ್ಧೆ ನಡೆದಿತ್ತು. 70 ದೇಶಗಳಿಂದ 1400 ಸ್ಪರ್ಧಿಗಳು (21 ವಯೋಮಾನ ಒಳಗಿನವರು ಮಾತ್ರ) ಭಾಗವಹಿಸಿದ್ದರು. ಅದರಲ್ಲಿ ಅಡುಗೆ ತಯಾರಿಸುವ ವಿಭಾಗಕ್ಕೆ ಭಾರತದಿಂದ ಏಕೈಕ ಸ್ಪರ್ಧಿಯಾಗಿ ಹರ್ಷವರ್ಧನ್‌ ಸ್ಪರ್ಧಿಸಿದ್ದರು. ಮೂಲತಃ ಮಂಗಳೂರಿನ ಕಾರ್‌ಸ್ಟ್ರೀಟ್‌ ನಿವಾಸಿಯಾಗಿರುವ ಹರ್ಷವರ್ಧನ್‌, ವೆಲ್‌ಕಮ್‌ ಗ್ರೂಪ್‌ ಗ್ರ್ಯಾಜುಯೇಟ್‌ ಆಫ್ ಹೋಟೆಲ್‌ ಅಡ್ಮಿನಿಸ್ಟ್ರೇಷನ್‌ (ವಾಗ್ಶಾ) ಕಾಲೇಜಿ ನಿಂದ ಎರಡು ತಿಂಗಳ ಹಿಂದೆ ಬಿಎ ಪಾಕಶಾಲೆ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿದ್ದರು.

ಉನ್ನತ ಹುದ್ದೆಗೇರುವ ಆಸೆ
ಈ ಸ್ಪರ್ಧೆಗಳಲ್ಲಿ ವೇಗ, ಶುಚಿತ್ವ ಎರಡೂ ಮುಖ್ಯ. ಸಲಕರಣೆಗಳ ಕೊರತೆ ಇರುತ್ತದೆ. ಭಾರತದಲ್ಲಿ ಯುವ ಪೀಳಿಗೆಗೆ ಇಂಥ ಸ್ಪರ್ಧೆಯ ಮಾಹಿತಿ ಕೊರತೆಯಿದೆ. ಶಾಲಾ ಕಾಲೇಜುಗಳಲ್ಲಿ ತಿಳಿಸಿಕೊಡಬೇಕು. ನಾನು ಹೋಟೆಲ್‌ ಮ್ಯಾನೇಜ್‌ಮೆಂಟ್‌ ಕ್ಷೇತ್ರದಲ್ಲಿ ಉನ್ನತ ಹುದ್ದೆಗೇರುವ ಆಸೆ ಹೊಂದಿದ್ದೇನೆ.
-ಹರ್ಷವರ್ಧನ್‌ ವಿಜಯ್‌ ಖಂಡಾರೆ, ಶ್ರೇಷ್ಠತಾ ಪದಕ ವಿಜೇತ

Advertisement

ವಿಶ್ವ ಸ್ಪರ್ಧೆಗೆ ಆಯ್ಕೆಯಾಗಿದ್ದು ಹೇಗೆ?
ಹರ್ಷವರ್ಧನ್‌ ಅವರು ಅಡುಗೆ ತಯಾರಿಕೆಯಲ್ಲಿ ವಲಯ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಅನಂತರ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದರು. ಒಟ್ಟು 24 ರಾಜ್ಯಗಳಿಂದ 24 ಸ್ಪರ್ಧಾರ್ಥಿಗಳನ್ನು ಮೀರಿಸಿ ಚಿನ್ನದ ಪದಕ ಗಳಿಸಿದ್ದರು. ಚಿನ್ನದ ಪದಕ ಪಡೆದವರಿಗೆ ಮಾತ್ರ ವಿಶ್ವ ಕೌಶಲ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಎಂಬ ನಿಯಮದ ಪ್ರಕಾರ ಈ ಬಾರಿಯ ಭಾರತವನ್ನು ಪ್ರತಿನಿಧಿಸಿದ್ದರು.

ಭಾರತವನ್ನು ಪ್ರತಿನಿಧಿಸಲು ಖಚಿತವಾದ ಅನಂತರ ವಾಗ್ಶಾ ಪ್ರಾಂಶುಪಾಲ ಚೆಫ್ ಡಾ| ತಿರುಜ್ಞಾನಸಂಬಾಂತಮ್‌ ಅವರ ಮಾರ್ಗದರ್ಶನದಲ್ಲಿ ಸತತ ಮೂರು ತಿಂಗಳವರೆಗೆ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8ರ ವರೆಗೂ ವಾಗ್ಶಾದ ವ್ಯವಸ್ಥಿತ ಅಡುಗೆಕೋಣೆಯಲ್ಲಿ ತರಬೇತಿ ನಡೆಸುತ್ತಿದ್ದರು. ಸ್ಫರ್ಧೆಯ ಒಂದು ತಿಂಗಳ ಮೊದಲೇ 15 ಬಗೆಯ ಆಹಾರ ಪದಾರ್ಥಗಳ ಪಟ್ಟಿ ನೀಡಲಾಗಿತ್ತು. ಅದರ ಅನ್ವಯ ಹರ್ಷವರ್ಧನ್‌ ತಯಾರಿ ನಡೆಸಿದ್ದರು.

ವಿಶ್ವ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆ ಹರ್ಷವರ್ಧನ್‌ ಅವರಿಗೆ ಕೇವಲ ಅಡುಗೆ ತಯಾರಿಕೆ ಮಾತ್ರವಲ್ಲದೆ, ಮಾನಸಿಕ ಹಾಗೂ ದೈಹಿಕ ತರಬೇತಿ ಮಾರ್ಗದರ್ಶನದ ತರಬೇತಿಯನ್ನೂ ನೀಡಲಾಗಿತ್ತು.

ಸೀನಿಯರ್‌ ಸಾಧನೆಯೇ ಪ್ರೇರಣೆ!:
ಎರಡು ವರ್ಷಗಳಿಗೊಮ್ಮೆ ನಡೆಯುವ ವಿಶ್ವ ಕೌಶಲ ಸ್ಪರ್ಧೆಯಲ್ಲಿ, ಇದೇ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ತನ್ಮಯಿ ನಲಮತ್ತು ಅವರು ಈ ಹಿಂದೆ ಎರಡು ಬಾರಿ ಸ್ಪರ್ಧಿಸಿದ್ದರು. ಅವರು ಉತ್ತಮ ಸಾಧನೆ ಮಾಡಿದ್ದರೂ ಕೆಲವು ಅಂಕಗಳಿಂದ ಪದಕ ವಂಚಿತರಾಗಿದ್ದರು. ತನ್ಮಯಿ ಅವರಿಂದ ಪ್ರೇರಣೆಗೊಂಡ ಹರ್ಷವರ್ಧನ್‌ ಕಳೆದ ಒಂದು ವರ್ಷದಿಂದ ವಿಶ್ವ ಕೌಶಲ ಸ್ಪರ್ಧೆಯಲ್ಲಿ ಭಾಗವಹಿಸಲು ತಯಾರಿ ನಡೆಸುತ್ತಿದ್ದರು. ಮೊದಲ ಪ್ರಯತ್ನದಲ್ಲೇ ಶ್ರೇಷ್ಠತಾ ಪದಕ ಪಡೆದರು.

ಹರ್ಷವರ್ಧನ್‌ಗೆ ಸಿಕ್ಕ ಅಂಕಗಳೆಷ್ಟು?
ಅಡುಗೆ ಸ್ಪರ್ಧೆಯಲ್ಲಿ 43 ದೇಶಗಳ ಸ್ಪರ್ಧಾಳುಗಳಿದ್ದರು. ಚೀನಾ, ಕೊರಿಯಾ ಮತ್ತು ತೈಪೆ ಮೊದಲ ಮೂರು ಪ್ರಶಸ್ತಿ ಪಡೆದಿವೆ. 800 ಅಂಕಗಳಲ್ಲಿ 700 ಮೇಲ್ಪಟ್ಟ ಅಂಕ ಗಳಿಸಿದ 18 ಮಂದಿಗೆ ಶ್ರೇಷ್ಠತಾ ಪದಕ ನೀಡಲಾಗಿದೆ. ಹರ್ಷವರ್ಧನ್‌ಗೆ ಸಿಕ್ಕಿದ್ದು 709 ಅಂಕ.

ಅಡುಗೆ ತಯಾರಿಕೆ ಸ್ಪರ್ಧೆ ಹೇಗಿತ್ತು?
ಅಡುಗೆ ಸ್ಪರ್ಧೆ ನಾಲ್ಕು ಹಂತಗಳಲ್ಲಿ ನಡೆಯುತ್ತದೆ ಎಂದು ಹರ್ಷವರ್ಧನ್‌ ವಿವರಿಸುತ್ತಾರೆ.
ಹಂತ 1: ಕೌಶಲ ಪರೀಕ್ಷೆ ಅಂದರೆ ಸಾಮಾನ್ಯಕ್ಕಿಂತಲೂ ಕಡಿಮೆ ಸಮಯದಲ್ಲಿ ಆಹಾರ ತಯಾರಿ.
ಹಂತ 2: ಹಾಟ್‌ ಕಿಚನ್‌ ವಿಭಾಗದಲ್ಲಿ ನಾಲ್ಕುವರೆ ಗಂಟೆಯಲ್ಲಿ 4 ಬಗೆಯ ಆಹಾರ ತಯಾರಿ
ಹಂತ3: ಕೋಲ್ಡ್‌ ಕಿಚನ್‌ ವಿಭಾಗದಲ್ಲಿ 10 ರಿಂದ 16 ಡಿಗ್ರಿ ಉಷ್ಣಾಂಶದಲ್ಲಿ ಆಹಾರ ತಯಾರಿ
ಹಂತ4: ಬಿಸ್ಟ್ರೋ ಬಿಟ್ಚಸ್‌ ವಿಭಾಗದಲ್ಲಿ ಮೆನುವಿನಲ್ಲಿರುವ ಆಹಾರ ಖಾದ್ಯಗಳನ್ನು ಗ್ರಾಹಕರು ಹೇಳಿದ 10 ನಿಮಿಷದ ಒಳಗೆ ತಯಾರಿಸಿ ಬಡಿಸುವುದು.

-ವಿಜಯಕುಮಾರ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next