Advertisement

ಕರಾವಳಿಯ ಏಕೈಕ ಕಾಂಗ್ರೆಸ್‌ ಶಾಸಕ ಯು.ಟಿ. ಖಾದರ್‌ಗೆ ಮಹತ್ವದ ಹೊಣೆ

12:32 AM Jan 31, 2022 | Team Udayavani |

ಮಂಗಳೂರು: ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಉಪನಾಯಕರಾಗಿ ಮಂಗಳೂರು ಕ್ಷೇತ್ರದ ಶಾಸಕ, ಮಾಜಿ ಸಚಿವ ಯು.ಟಿ. ಖಾದರ್‌ ಅವರನ್ನು ಪಕ್ಷದ ಅಖಿಲ ಭಾರತ ಅಧ್ಯಕ್ಷೆ ಸೋನಿಯಾ ಗಾಂಧಿಯವರು ತತ್‌ಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಿದ್ದಾರೆ.

Advertisement

ಉಳ್ಳಾಲ ಕ್ಷೇತ್ರದಲ್ಲಿ 2007 ರಲ್ಲಿ ಶಾಸಕರಾಗಿದ್ದ ಯು.ಟಿ. ಫರೀದ್‌ ನಿಧನದ ಬಳಿಕ ನಡೆದ ಉಪಚುನಾವಣೆಯಲ್ಲಿ ಅವರ ಪುತ್ರ ಯು.ಟಿ. ಖಾದರ್‌ ಸ್ಪರ್ಧಿಸಿ ಗೆಲ್ಲುವ ಮೂಲಕ ಪ್ರಥಮ ಬಾರಿ ವಿಧಾನ ಸಭೆ ಪ್ರವೇಶಿಸಿದ್ದರು. ಅಂದಿನಿಂದ ಇಂದಿನ ವರೆಗೆ ಖಾದರ್‌ ಈ ಕ್ಷೇತ್ರವನ್ನು ನಾಲ್ಕು ಅವಧಿಗಳಿಂದ ನಿರಂತರವಾಗಿ
ಪ್ರತಿನಿಧಿಸುತ್ತಿದ್ದಾರೆ.

2013ರಲ್ಲಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿ ಹಾಗೂ 2018ರ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರದಲ್ಲಿ ನಗರಾಭಿವೃದ್ಧಿ ಮತ್ತು ವಸತಿ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. ವಿದ್ಯಾರ್ಥಿ ದೆಸೆಯಲ್ಲಿ ಎನ್‌ಎಸ್‌ಯುಐ ಸಂಘಟನೆಯ ಮೂಲಕ ರಾಜಕೀಯ ಪ್ರವೇಶಿಸಿದ್ದ ಖಾದರ್‌, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ, ರಾಜ್ಯ ಉಪಾಧ್ಯಕ್ಷರಾಗಿದ್ದರು. ಉಳ್ಳಾಲ ಬ್ಲಾಕ್‌ ಯುವ ಕಾಂಗ್ರೆಸ್‌ ಅಧ್ಯಕ್ಷ, ಅಖೀಲ ಭಾರತ ಕಾಂಗ್ರೆಸ್‌ ಸೇವಾದಳ ಇನ್‌ಸ್ಟ್ರಕ್ಟರ್‌, ಕೆಪಿಸಿಸಿ ಕಾರ್ಯದರ್ಶಿ, ಕಾಂಗ್ರೆಸ್‌ ಸೇವಾದಳ ರಾಜ್ಯ ಹೆಚ್ಚುವರಿ ಮುಖ್ಯ ಸಂಘಟಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಇದನ್ನೂ ಓದಿ:ಕೇಂದ್ರದ ಯೋಜನೆಗಳು ಗಾಂಧಿ ಚಿಂತನೆಯ ಹೊಸ ಸ್ವರೂಪ

ಕ್ಷೇತ್ರಕ್ಕೆ ಸಂದ ಗೌರವ : ಖಾದರ್‌
ಪಕ್ಷ ವಿಧಾನಸಭೆಯಲ್ಲಿ ನನಗೆ ನೀಡಿರುವ ಶಾಸಕಾಂಗ ಪಕ್ಷದ ಉಪನಾಯಕ ಸ್ಥಾನ ನನ್ನ ಕ್ಷೇತ್ರದ ಜನರಿಗೆ ಸಿಕ್ಕಿರುವ ಗೌರವ ಎಂದು ಭಾವಿಸುತ್ತೇನೆ. ಇದನ್ನು ಜವಾಬ್ದಾರಿ ಎಂಬುದಾಗಿ ಪರಿಗಣಿಸು ತ್ತೇನೆ. ಜವಾಬ್ದಾರಿಗೆ ಚ್ಯುತಿ ಬಾರದ ರೀತಿಯಲ್ಲಿ ಕಾಂಗ್ರೆಸ್‌ ಪಕ್ಷದ ತತ್ವ ಸಿದ್ಧಾಂತಗಳಡಿ ಪ್ರಾಮಾಣಿಕ ಮತ್ತು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ಯು.ಟಿ. ಖಾದರ್‌ ಹೇಳಿದ್ದಾರೆ.

Advertisement

ಶಾಸಕಾಂಗ ಪಕ್ಷದ ಉಪ ನಾಯಕನಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ “ಉದಯವಾಣಿ’ ಯೊಂದಿಗೆ ಮಾತನಾಡಿ, ಎಐಸಿಸಿ ಅಧ್ಯಕ್ಷರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಅವರು ನನ್ನ ಮೇಲೆ ವಿಶ್ವಾಸವಿಟ್ಟು ಈ ಜವಾಬ್ದಾರಿ ನೀಡಿದ್ದಾರೆ. ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್‌, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌, ಬಿ.ಕೆ. ಹರಿ ಪ್ರಸಾದ್‌ ಮತ್ತಿತರ ನಾಯಕರು ನನ್ನ ಹೆಸರನ್ನು ಶಿಫಾರಸು ಮಾಡಿದ್ದಾರೆ. ಇವರೆಲ್ಲರಿಗೂ ಆಭಾರಿಯಾಗಿದ್ದೇನೆ ಎಂದು ಹೇಳಿದರು.

ಕಾಂಗ್ರೆಸ್‌ ಜಾತ್ಯತೀತ ಸಿದ್ಧಾಂತದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಕ್ಷ. ಎಲ್ಲ ವರ್ಗದವರಿಗೂ ಸೂಕ್ತ ಸ್ಥಾನಮಾನ ನೀಡುತ್ತ ಬಂದಿದೆ. ನನ್ನನ್ನು ಕೂಡ ಗುರುತಿಸಿ ಅವಕಾಶಗಳನ್ನು ನೀಡಿದೆ. ಸಿದ್ದರಾಮಯ್ಯ ನಾಯಕತ್ವದ ಸರಕಾರದಲ್ಲಿ 2 ಪ್ರಮುಖ ಇಲಾಖೆಗಳ ಸಚಿವನಾಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಶಾಸಕಾಂಗ ಪಕ್ಷದ ನಾಯಕರಾಗಿರುವ ಅವರ ನಾಯಕತ್ವದಲ್ಲಿ ಉಪನಾಯಕನಾಗಿ ಕೆಲಸ ಮಾಡಲು ಅವಕಾಶ ದೊರಕಿರುವುದು ಖುಷಿ ತಂದಿದೆ ಎಂದವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next