Advertisement

ನಾಡಿನ ಉಸಿರಾಗಿರುವ ಜಲವನ್ನು ಸಂರಕ್ಷಿಸಿ: ಕೆ.ಎಲ್‌. ಪುಂಡರೀಕಾಕ್ಷ

03:14 PM Feb 21, 2017 | Team Udayavani |

ಕುಂಬಳೆ: ಭೂಮಿ ತಾಯಿಯ ಒಡಲು ದಿನೇ ದಿನೇ ಬತ್ತುತ್ತಿದೆ. ಇದಕ್ಕೆ ಪೂರಕವೆಂಬಂತೆ ನಾಡಿನೆಲ್ಲೆಡೆ ಕೊಳವೆ ಬಾವಿಗಳ ಸಂಖ್ಯೆ ನಿತ್ಯ ಹೆಚ್ಚುತ್ತಿದೆ. ಆದುದರಿಂದ ನಾಡಿನ ಉಸಿರಾಗಿರುವ ಜಲವನ್ನು ಸಂರಕ್ಷಿಸಲು ಜಲಮೂಲಗಳ ರಕ್ಷಣೆಯನ್ನು ಮಾಡಬೇಕಾಗಿದೆ ಎಂದು ಕುಂಬಳೆ ಗ್ರಾಮ ಪಂಚಾಯತ್‌ ಅಧ್ಯಕ್ಷ ಕೆ.ಎಲ್‌. ಪುಂಡರೀಕಾಕ್ಷ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕುಂಬಳೆ-ಕಾಸರಗೋಡು, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕುಂಬಳೆ ವಲಯ ಮತ್ತು ಶ್ರೀ ಮಲ್ಲಿಕಾರ್ಜುನ ಮತ್ತು ಕೋಟೆ ಶ್ರೀ ವೀರಾಂಜನೇಯ ದೇವಸ್ಥಾನ ಆರಿಕ್ಕಾಡಿ ಇವರ ಸಹಭಾಗಿತ್ವದಲ್ಲಿ ಆರಿಕ್ಕಾಡಿ ಮಲ್ಲಿಕಾರ್ಜುನ ಕೋಟೆ ವೀರಾಂಜನೇಯ ದೇವಸ್ಥಾನ ವಠಾರದಲ್ಲಿ ನಡೆದ ಸಾಮೂಹಿಕ ಶನೀಶ್ವರ ಪೂಜೆಯಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

Advertisement

ಸಮಾರಂಭದ ಅಧ್ಯಕ್ಷತೆ ವಹಿಸಿದ ಶ್ರೀ ಶಿವಕೃಪಾ ಧರ್ಮಜಾಗೃತಿ ಅಭಿಮಾನಿ ಬಳಗ ಉಳ್ಳಾಲ ಮತ್ತು ಮಂಜೇಶ್ವರ ವಲಯದ ಅಧ್ಯಕ್ಷ ಧಾರ್ಮಿಕ ಸಮಾಜಿಕ ಮುಂದಾಳು ಶ್ರೀ ಕೃಷ್ಣ ಶಿವಕೃಪಾ ಕುಂಜತ್ತೂರು ಅವರು ಧಾರ್ಮಿಕ ಉಪನ್ಯಾಸ ನೀಡಿ, ಶಾಶ್ವತವಾದ ಆನಂದ ಮತ್ತು ನೆಮ್ಮದಿ ಸತ್ಸಂಗಗಳಿಂದ ಸಾಧ್ಯ. ಅಲ್ಲದೆ ಅನುಷ್ಠಾನ, ಆಚರಣೆಗಳಿಲ್ಲದ ಬದುಕು ಕಸಕ್ಕಿಂತಲೂ ಕೀಳಾಗಿರುತ್ತದೆ. ಅಂತಹ ಮನೆ ವನಗಳಂತಿರುತ್ತದೆ. ಬದಲಾಗಿ ಮನೆಯಗಳನ್ನು ಭಗವಂತನ ನಾಮಸ್ಮರಣೆ ಮಾಡುವ ಭವನಗಳನ್ನಾಗಿಸಬೇಕು. ಹೆತ್ತವರ, ಗುರು ಹಿರಿಯರ ಆದರ್ಶಗಳನ್ನು, ಹಿತವಚನಗಳನ್ನು ಇಂದಿನ ಯುವಜನಾಂಗ ಅನುಸರಿಸಿ ಭಾರತೀಯ ಸಂಸ್ಕೃತಿಗಳನ್ನು ಪರಿಪಾಲಿಸಬೇಕು ಎಂದರು. 

ವಿಜ್ಞಾನ ಪ್ರಭಾವ ಹೆಚ್ಚಿದಂತೆ ಬದುಕು ಅಜ್ಞಾನ ಗೂಡಾಗುತ್ತಿದೆ. ಶ್ರದ್ಧೆಯಿಂದ ಮಾತ್ರ ಜ್ಞಾನ ಸಂಪಾದನೆ ಸಾಧ್ಯವಾಗುತ್ತದೆ. ಜೀವನದಲ್ಲಿ ಜ್ಞಾನವೆಂಬ ಸಂಪತ್ತು ಉಳಿದೆಲ್ಲಾ ಸಂಪತ್ತಿಗಿಂತಲೂ ಶ್ರೇಷ್ಠ. ಅದನ್ನು ಸಂಪಾದಿಸಿಕೊಂಡು ಧರ್ಮದ ಜೀವನವನ್ನು ಅನುಷ್ಠಾನ ಆಚರಣೆಗಳಿಂದ ನಡೆಸಬೇಕೆಂದರು. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕುಂಬಳೆ ಕಾಸರಗೋಡು ಇದರ ಯೋಜನಾಧಿ ಕಾರಿ ಚೇತನಾ ಎಂ., ಶ್ರೀ ಮಲ್ಲಿಕಾರ್ಜುನ ಮತ್ತು ಕೋಟೆ ಶ್ರೀ ವೀರಾಂಜನೇಯ ದೇವಸ್ಥಾನ ಆರಿಕ್ಕಾಡಿ ಇದರ ಅಧ್ಯಕ್ಷ ಬಾಲಚಂದ್ರ ರಾವ್‌, ಶ್ರೀ ಮಹಾಮಾಯಾ ದೇವಸ್ಥಾನ ಆರಿಕ್ಕಾಡಿ ಇದರ ಖಜಾಂಚಿ ಕೃಷ್ಣಮೂರ್ತಿ, ಕುಂಬಳೆ ಗ್ರಾಮ ಪಂಚಾಯತ್‌ ಸದಸ್ಯೆ ಝೈನಬಾ ಅಬ್ದುಲ್‌ ರೆಹಮಾನ್‌ ಭಾಗವಹಿಸಿದರು.

ಪುಷ್ಪಾ, ಮಾಲಿನಿ ಹಾಗೂ ಸರಸ್ವತಿ ಪ್ರಾರ್ಥಿನೆ ಹಾಡಿದರು. ಸೇವಾ ಪ್ರತಿನಿಧಿಗಳಾದ ಅರುಣಾ ಸ್ವಾಗತಿಸಿ, ಉಷಾ ವಂದಿಸಿದರು. ಕುಂಬಳೆ ವಲಯದ ಮೇಲ್ವಿಚಾರಕಿ ಶೋಭಾ ಐ. ಕಾರ್ಯಕ್ರಮ ನಿರ್ವಹಿಸಿದರು. ಶ್ರೀನಾಥ ಭಟ್ಟರ ನೇತೃತ್ವದಲ್ಲಿ ಸಾಮೂಹಿಕ ಶನೀಶ್ವರ ಪೂಜೆ ಜರಗಿತು.

Advertisement

Udayavani is now on Telegram. Click here to join our channel and stay updated with the latest news.

Next