Advertisement

‘ಅವಕಾಶಗಳನ್ನು ಬಳಸಿ ಸಾಧನೆ ತೋರಿ’

12:07 PM Jan 10, 2018 | Team Udayavani |

ಸುಳ್ಯ : ಶಾಲಾ ಅವಧಿಯಲ್ಲಿ ದೊರೆಯವ ಅವಕಾಶ, ಪ್ರೋತ್ಸಾಹಗಳನ್ನು ಬಳಸಿಕೊಂಡು, ಸಾಧನೆ ತೋರಬೇಕು
ಎಂದು ತಾಲೂಕು ಪಂಚಾಯತ್‌ ಅಧ್ಯಕ್ಷ ಚನಿಯ ಕಲ್ತಡ್ಕ ಹೇಳಿದರು.

Advertisement

ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ತಾಲೂಕಿನ ಕ್ರೀಡಾಪಟುಗಳಿಗೆ ತಾ.ಪಂ. ಸಭಾಂಗಣದಲ್ಲಿ ಕ್ರೀಡಾ ಸಮವಸ್ತ್ರ ವಿತರಿಸಿದ ಅವರು, ಶಾಲಾ ಮಟ್ಟದಲ್ಲಿ ವಿದ್ಯಾರ್ಥಿಗಳನ್ನು ಉತ್ತೇಜಿಸಬೇಕು. ಎಳವೆಯಿಂದಲೇ ಪ್ರತಿಭೆಗೆ ನೀರೆರೆದು ಪೋಷಿಸಿದರೆ ಪ್ರಯೋಜನ. ಕ್ರೀಡಾ ಸಮವಸ್ತ್ರ ವಿದ್ಯಾರ್ಥಿಯ ಬದುಕಿಗೆ ಸ್ಫೂರ್ತಿ ತುಂಬಲಿ ಎಂದರು.

ತಾ.ಪಂ. ಉಪಾಧ್ಯಕ್ಷೆ ಶುಭದಾ ರೈ ಮಾತನಾಡಿ, ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲೂ ಸ್ಥಾನ ಪಡೆಯಬೇಕು. ಪ್ರತಿಯೊಬ್ಬರು ಪರಿಶ್ರಮ ಪಡಬೇಕು. ಆಗ ಮಾತ್ರ ಗುರಿಯೆಡೆಗೆ ತಲುಪಬಹುದು. ವಿದ್ಯಾರ್ಥಿ ಜೀವನದಲ್ಲಿನ ಆಸಕ್ತಿ, ಶ್ರದ್ಧೆಯೆ ಭವಿಷ್ಯವನ್ನು ರೂಪಿಸಲು ಸಹಕಾರಿ ಎಂದು ನುಡಿದರು.

ಸ್ಥಾಯೀ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಮಾತನಾಡಿ, ಸಮವಸ್ತ್ರ ವಿತರಣೆಯಲ್ಲಿ ವಿಳಂಬ ಉದ್ದೇಶಪೂರ್ವಕ ಅಲ್ಲ. ತಾ.ಪಂ.ಗೆ ಅನುದಾನದ ಕೊರತೆ ಇರುವುದು ಕಾರಣ. ಈ ಮಧ್ಯೆಯೂ ಅನುದಾನವನ್ನು ಕ್ರೋಡೀಕರಿಸಿ ಸಮವಸ್ತ್ರ ವಿತರಣೆಗೆ ತಾ.ಪಂ. ಗರಿಷ್ಠ ಪ್ರಯತ್ನ ಮಾಡಿದೆ. ಬೆರಳೆಣಿಕೆ ಶಾಲೆಗಳು ಅಂಕ ಗಳಿಸಿವೆ. ಬಹುತೇಕ ಶಾಲೆ ಬಹುಮಾನ ಪಡೆದಿಲ್ಲ. ಪ್ರತಿ ಶಾಲೆಯಲ್ಲಿಯೂ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗೂ ಆದ್ಯತೆ ನೀಡುವ ಕೆಲಸ ಆಗಬೇಕು ಎಂದರು.

ತಾ| ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಲಕ್ಷ್ಮೀಶ ರೈ ಮಾತನಾಡಿ, ಜಿಲ್ಲಾ ಮಟ್ಟದಲ್ಲಿ ನಿರೀಕ್ಷಿತ ಸ್ಥಾನಗಳು ಬಂದಿಲ್ಲ. ಇಲ್ಲಿನ ಸಾಧಕ ವಿದ್ಯಾರ್ಥಿಗಳು ಬೇರೆ ತಾಲೂಕಿನ ಶಾಲೆಗೆ ತೆರಳುವುದು ಇದಕ್ಕೆ ಕಾರಣ. ಪ್ರಾಥಮಿಕ ಶಾಲೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಇಲ್ಲ. ಇದರ ನಡುವೆಯೂ ಸಾಧಿಸುವ ಪ್ರಯತ್ನ ನಿರಂತರವಾಗಿ
ಸಾಗಬೇಕಿದೆ ಎಂದು ಹೇಳಿದರು.

Advertisement

ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಮೇಘನಾ ಭಾರದ್ವಾಜ್‌, ಅನ್ವಿತಾ ಪ್ರಾರ್ಥಿಸಿದರು. ತಾ.ಪಂ. ಸಹಾಯಕ ನಿರ್ದೇಶಕ ಭವಾನಿಶಂಕರ ಸ್ವಾಗತಿಸಿದರು. ಕೈಗಾರಿಕಾ ವಿಸ್ತರಣಾಧಿಕಾರಿ ವೀರಪ್ಪ ಗೌಡ ನಿರೂಪಿಸಿದರು. ತಾಲೂಕಿನ ವಿವಿಧ ಶಾಲೆಯ ಕ್ರೀಡಾಪಟುಗಳು ಆಗಮಿಸಿ ಸಮವಸ್ತ್ರ ಪಡೆದುಕೊಂಡಿದ್ದರು.

ಗಮನ ಸೆಳೆದಿದ್ದ ವರದಿ
ತಾಲೂಕು ಮಟ್ಟದಲ್ಲಿ ಆಯ್ಕೆಗೊಂಡು ಜಿಲ್ಲಾಮಟ್ಟಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಸಿಗದಿರುವ ಕುರಿತು ಕೆಲ ತಿಂಗಳ ಹಿಂದೆ ‘ಉದಯವಾಣಿ ಸುದಿನ ವರದಿ’ ಪ್ರಕಟಿಸಿತ್ತು. ತಾ.ಪಂ. ಸಾಮಾನ್ಯ ಸಭೆಯಲ್ಲಿಯೂ ಈ ವಿಷಯ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ತಾ.ಪಂ. ಅನುದಾನ ಕ್ರೋಡೀಕರಿಸಿ ಸಮವಸ್ತ್ರ ವಿತರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next