Advertisement

ಮೊಬೈಲ್‌ ಬದಲು ಡಾರ್ಕ್‌ವೆಬ್‌ ಬಳಕೆ! ಉಗ್ರ ಶಾರೀಕ್‌ ವೆಂಟಿಲೇಟರ್‌ನಲ್ಲಿ

11:45 AM Nov 24, 2022 | Team Udayavani |

ಮಂಗಳೂರು: ಕುಖ್ಯಾತ ಭಯೋತ್ಪಾದಕರು ತಮ್ಮ ಸಂಪರ್ಕಕ್ಕಾಗಿ ಹೆಚ್ಚಾಗಿ ಬಳಸುವ “ಡಾರ್ಕ್‌ವೆಬ್‌’ ಅಂತರ್ಜಾಲ ಸಂಪರ್ಕ ಮಾಧ್ಯಮವನ್ನು ಶಾರೀಕ್‌ ಮತ್ತು ಆತನ ಸಹವರ್ತಿಗಳು ಕೂಡ ಬಳಸುತ್ತಿದ್ದರು ಎಂದು ತಿಳಿದು ಬಂದಿದೆ.

Advertisement

ಮೊಬೈಲ್‌ ಅಥವಾ ಸ್ಥಿರ ದೂರವಾಣಿಯಲ್ಲಿ ಸಂಪರ್ಕ ಸಂಖ್ಯೆಗಳು ದಾಖಲಾಗುವಂತೆ ಡಾರ್ಕ್‌ವೆಬ್‌ನಲ್ಲಿ ದಾಖಲಾಗುವುದಿಲ್ಲ. ಅದು ಬೇರೆ ತಂತ್ರಜ್ಞಾನದ ಮೂಲಕ ಸಂಪರ್ಕ ಸಾಧಿಸುತ್ತದೆ. ಕರೆ ಮಾಡುವವರ ಮಾಹಿತಿ ಕೂಡ ಗೊತ್ತಾಗುವುದಿಲ್ಲ. ಅದನ್ನು ಪತ್ತೆಹಚ್ಚುವುದು ಕೂಡ ಕಷ್ಟಸಾಧ್ಯ. ಇದನ್ನೇ ಭಯೋತ್ಪಾದಕರು ಅಥವಾ ಇತರ ಅಕ್ರಮ ಚಟುವಟಿಕೆ ಮಾಡುವವರು ಬಳಸುತ್ತಾರೆ.

ಇದೀಗ ಡಾರ್ಕ್‌ವೆಬ್‌ ಅನ್ನು ಕೂಡ ಭೇದಿಸುವ ತಂತ್ರಜ್ಞಾನಗಳು ಅಭಿವೃದ್ಧಿಗೊಂಡಿದ್ದರೂ ಕ್ಷಿಪ್ರವಾಗಿ ಮಾಹಿತಿ ಹೊರಗೆ ತೆಗೆಯುವುದು ಅಸಾಧ್ಯ. ಇದು ತನಿಖೆಯ ವೇಗಕ್ಕೆ ತೊಡಕಾಗುತ್ತದೆ ಎನ್ನಲಾಗಿದೆ.

ಕ್ರಿಪ್ಟೊ ಕರೆನ್ಸಿಯಲ್ಲೇ ವ್ಯವಹಾರ?: ಶಾರೀಕ್‌ ಕ್ರಿಪ್ಟೊ ಕರೆನ್ಸಿಯಲ್ಲೇ ವ್ಯವಹಾರ ನಡೆಸುತ್ತಿದ್ದ ಎಂಬುದು ತನಿಖೆ ವೇಳೆ ಗೊತ್ತಾಗಿದೆ ಎಂದು ತಿಳಿದುಬಂದಿದೆ. ಆದರೆ ಈ ಬಗ್ಗೆ ಡಿಜಿಪಿಯವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಮಂಗಳೂರಿನಲ್ಲಿ ನಡೆದ ಬಾಂಬ್‌ ಸ್ಫೋಟ ಪ್ರಕರಣಕ್ಕೂ ಗಲ್ಫ್ ರಾಷ್ಟ್ರದ ಸಂಪರ್ಕ ತಳಕು ಹಾಕಿಕೊಂಡಿದೆ. ಆರೋಪಿ ಶಾರೀಕ್‌ನ ಮಾರ್ಗದರ್ಶಕ, ಮಾಸ್ಟರ್‌ ಮೈಂಡ್‌ ಮತೀನ್‌ ತಾಹಾ ಕೂಡ ಗಲ್ಫ್ ರಾಷ್ಟ್ರದಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.

ಟೈಮರ್‌ ಜೋಡಿಸಿದ್ದೆಲ್ಲಿ?: ಕುಕ್ಕರ್‌ ನಲ್ಲಿ ಟೈಮರ್‌ ಜೋಡಿಸಲಾಗಿತ್ತು ಎನ್ನಲಾಗಿದೆ. ಆದರೆ ಅದನ್ನು ಶಾರೀಕ್‌ ಯಾರಿಗೂ ಅನುಮಾನ ಬರದಂತೆ ಯಾವ ಸ್ಥಳದಲ್ಲಿ ಆ ಕೆಲಸ ಮಾಡಿದ್ದ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಈತ ಮಂಗಳೂರಿಗೆ ಬಂದು ಪಡೀಲ್‌ ನಲ್ಲಿಯೇ ಇಳಿದಿದ್ದನೇ ಅಥವಾ ಬೇರೆ ಕಡೆ ಇಳಿದು ಪಡೀಲ್‌ ಕಡೆಗೆ ಹೋಗಿದ್ದನೇ ಎಂಬುದು ಕೂಡ ವಿಚಾರಣೆಯಿಂದ ತಿಳಿದು ಬರಬೇಕಾಗಿದೆ. ಶಾರೀಕ್‌ ನಗರದ ಕೆಲವು ಧಾರ್ಮಿಕ ಸ್ಥಳ, ಮಾರ್ಕೆಟ್‌ಗಳಿಗೂ ಭೇಟಿ ನೀಡಿದ್ದಾನೆ ಎನ್ನಲಾಗುತ್ತಿದೆ. ಆತ ಮಂಗಳೂರು ನಗರದ ಯಾವ ಸ್ಥಳವನ್ನು ಟಾರ್ಗೆಟ್‌ ಮಾಡಿದ್ದ ಎಂಬ ಪ್ರಶ್ನೆಗೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.

Advertisement

ಉಗ್ರ ಶಾರೀಕ್‌ ವೆಂಟಿಲೇಟರ್‌ನಲ್ಲಿ
ಶೇ. 45ರಷ್ಟು ಸುಟ್ಟ ಗಾಯಗಳೊಂದಿಗೆ ಶಾರೀಕ್‌ ಚಿಕಿತ್ಸೆ ಪಡೆಯುತ್ತಿದ್ದು ಆತನಿಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದರೂ ಚೇತರಿಕೆ ಕಂಡುಬಂದಿಲ್ಲ. ಘಟನೆ ವೇಳೆ ರಾಸಾಯನಿಕ ಉರಿದು ಅದರ ವಿಷಯುಕ್ತ ಹೊಗೆ ಆತನ ಶ್ವಾಸಕೋಶ ಸೇರಿತ್ತು. ಅಲ್ಲದೆ  ಕುಕ್ಕರಿನ ಮುಚ್ಚಳ ಕೂಡ ಶಾರೀಕ್‌ನ ಕೊರಳಿಗೆ ಬಲವಾದ ಹೊಡೆತ ನೀಡಿದೆ. ಅದರಿಂದಲೂ ಆತನಿಗೆ ತೀವ್ರ ಸ್ವರೂಪದ ಗಾಯವಾಗಿದೆ. ಆತ ಮಾತನಾಡುವ ಸ್ಥಿತಿಯಲ್ಲಿ ಕೂಡ ಇಲ್ಲದಿರುವುದರಿಂದ ತನಿಖೆಗೂ ತೀವ್ರ ತೊಡಕಾಗಿದೆ ಎಂದು ತಿಳಿದುಬಂದಿದೆ.

ಸಹಚರರ ಹುಡುಕಾಟ
ಮೈಸೂರು: ಮಂಗಳೂರು ಘಟನೆ ರೂವಾರಿ ಶಂಕಿತ ಉಗ್ರ ಶಾರೀಕ್‌ ಮೈಸೂರಿನಲ್ಲಿ ಇದ್ದಷ್ಟು ದಿನ ಎಲ್ಲೆಲ್ಲಿ ಓಡಾಡಿದ್ದ ಎಂಬ ಕುರಿತು ಮಾಹಿತಿ ಕಲೆ ಹಾಕುವುದರೊಂದಿಗೆ ಆತನ ಸಹಚರರ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದಾರೆ. ಮೈಸೂರಿನಲ್ಲಿ ಇದ್ದ ಸಂದರ್ಭದಲ್ಲಿ ಆ್ಯಪ್‌ ಮೂಲಕ ಆಟೋ, ಟ್ಯಾಕ್ಸಿ ಬುಕ್‌ ಮಾಡಿಕೊಂಡು ಸಂಚರಿಸುತ್ತಿದ್ದ ಶಾರೀಕ್‌, ಎಲ್ಲೆಲ್ಲಿ ತೆರಳಿದ್ದ ಎಂಬ ಮಾಹಿತಿಯನ್ನು ಆತನನ್ನು ಕರೆದುಕೊಂಡು ಹೋಗಿದ್ದ ಟ್ಯಾಕ್ಸಿ ಮತ್ತು ರಿಕ್ಷಾ ಚಾಲಕರನ್ನು
ಕರೆಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಪೊಲೀಸ್‌ ವಶದಲ್ಲಿ ಮನೆ: ಶಾರೀಕ್‌ ವಾಸವಿದ್ದ ಬಾಡಿಗೆ ಮನೆಯನ್ನು ವಶಕ್ಕೆ ಪಡೆದಿರುವ ಪೊಲೀಸರು, ಮನೆಗೆ ಬೀಗ ಮುದ್ರೆ ಹಾಕಿದ್ದಾರೆ. ಜತೆಗೆ ಮನೆ ಎದುರು ಪೊಲೀಸರನ್ನು ನಿಯೋಜಿಸಲಾಗಿದೆ.

ಸಹಚರರ ಪತ್ತೆ
ಶಾರೀಕ್‌ಗೆ ನಕಲಿ ಆಧಾರ್‌ ಕಾರ್ಡ್‌ ಸೃಷ್ಟಿಸಿ ಕೊಟ್ಟವರು ಹಾಗೂ ಆತನ ಕೃತ್ಯಕ್ಕೆ ಸಹಕರಿಸಿದವರ ಹುಡುಕಾಟ ನಡೆಸಲಾಗುತ್ತಿದೆ. ಈತ ಮೈಸೂರಿಗೆ ಬಂದು ನಕಲಿ ಆಧಾರ್‌ ಕಾರ್ಡ್‌ ಸೃಷ್ಟಿಮಾಡಿಕೊಂಡನೇ ಅಥವಾ ಬರುವ ಮುನ್ನವೇ ಈತನ ಬಳಿ ನಕಲಿ ಆಧಾರ್‌ ಕಾರ್ಡ್‌ ಇತ್ತೇ ಎಂಬ ಮಾಹಿತಿ ಇಲ್ಲ. ಹೀಗಾಗಿ ಆತ ಭೇಟಿ ಮಾಡಿರುವ ಜನರನ್ನು ಪೊಲೀಸರು ಭೇಟಿಯಾಗಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆತನಿಗೆ ನಕಲಿ ಆಧಾರ್‌ ಕಾರ್ಡ್‌ ಸೃಷ್ಟಿ ಮಾಡಿಕೊಟ್ಟ ವರು ಹಾಗೂ ಸಹಕರಿಸಿದವರು ಪತ್ತೆಯಾದರೆ ಕೃತ್ಯದ ಸಾಕಷ್ಟು ಮಾಹಿತಿಗಳು ಹೊರ ಬೀಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next