Advertisement
ಕಾರ್ಕಳ, ಮಾಳ ಸಮೀಪ ಪಶ್ಚಿಮಘಟ್ಟದ ತಪ್ಪಲಿನ ಅರಣ್ಯದಲ್ಲಿ ಕಪ್ಪೆ ಸಂಶೋಧಕ ಡಾ| ಕೆ. ವಿ. ಗುರುರಾಜ್ ಸಹಿತ ಹಲವರು ಅಧ್ಯಯನ ಕೈಗೊಂಡಿದ್ದಾರೆ. ಇತ್ತೀಚೆಗೆ ಗುರುರಾಜ್ ಮಾರ್ಗದರ್ಶನದಲ್ಲಿ ಸಂಶೋಧನ ವಿದ್ಯಾರ್ಥಿಗಳ ತಂಡವು ರಾತ್ರಿ ಪಶ್ಚಿಮಘಟ್ಟದ ಕಾಡಿನಲ್ಲಿ ಸಂಚರಿಸಿ ಕಪ್ಪೆಗಳ ವಿಶಿಷ್ಟತೆ ಬಗ್ಗೆ ಅಧ್ಯಯನ ನಡೆಸಿದೆ.
ಅಧ್ಯಯನದ ಪ್ರಾಥಮಿಕ ಭಾಗವಾಗಿ ಪಶ್ಚಿಮಘಟ್ಟದ ಅರಣ್ಯಗಳಲ್ಲಿ 15ರಿಂದ 20 ಕಡೆಗಳಲ್ಲಿ ಎಐ ತಂತ್ರಜ್ಞಾನದ ಸೌಂಡ್ ಟ್ರ್ಯಾಕಿಂಗ್ ಡಿವೈಸ್ ಅಳವಡಿಸಲಾಗುತ್ತದೆ. ಒಂದೊಂದು ಪ್ರಭೇದದ ಕಪ್ಪೆಯೂ ಭಿನ್ನ ರೀತಿಯಲ್ಲಿ ಕೂಗುತ್ತದೆ. ಕಪ್ಪೆ ಕೂಗುವ ಪ್ರಕ್ರಿಯೆ ಸಂಗಾತಿಯನ್ನು ಕೂಡುವ ಸಂಕೇತವಾಗಿರುತ್ತದೆ. ರಾತ್ರಿಯಿಂದ ಬೆಳಗ್ಗಿನವರೆಗೂ ಕಪ್ಪೆ ಕೂಗುವ ಶಬ್ದವನ್ನು ಈ ಉಪಕರಣ ದಾಖಲಿಸಿಕೊಳ್ಳುತ್ತದೆ. ಅನಂತರ ಇದರ ಮುಂದಿನ ಅಧ್ಯಯನ ಕೈಗೊಳ್ಳಲಾಗುವುದು. ಇಲ್ಲಿಯವರೆಗೆ ನಾವೇ ಸ್ವತಃ ಅರಣ್ಯದಲ್ಲಿದ್ದು, ಆಲಿಸಿಕೊಂಡು ಗುರುತಿಸುವ ಕೆಲಸವಾಗುತ್ತಿತ್ತು ಎಂದು ಡಾ| ಗುರುರಾಜ್ ತಿಳಿಸಿದ್ದಾರೆ.
Related Articles
ಅಪಾಯದಂಚಿನಲ್ಲಿರುವ ಜೀವಿಗಳನ್ನು ವನ್ಯಜೀವಿ ಸಂರಕ್ಷಣೆ ಕಾಯ್ದೆ 1972ರ ಶೆಡ್ನೂಲ್ 2ಕ್ಕೆ ಇತ್ತೀಚೆಗೆ ಸೇರಿಸಲಾಗಿದೆ. ಇತ್ತೀಚೆಗೆ ಕಪ್ಪೆಗಳ ಸಂತತಿ ಅಳಿವಿನಂಚಿಗೆ ಸಾಗುತ್ತಿರುವ ಬಗ್ಗೆ ಕಪ್ಪೆ ಸಂಶೋಧಕರ ವರದಿಗಳನ್ನು ಆಧರಿಸಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯವು ಕಪ್ಪೆಗಳನ್ನೂ ಶೆಡ್ನೂಲ್2 ಪಟ್ಟಿಗೆ ಸೇರಿಸಿದೆ. ಕಪ್ಪೆಗಳ ಬೇಟೆ, ಅಕ್ರಮ ಸಾಗಾಟ, ಕಪ್ಪೆಗಳ ಸಂತತಿಗೆ ಹಾನಿ ಮಾಡುವಂಥ ಚಟುವಟಿಕೆಗಳನ್ನು ಈ ಕಾನೂನಿನಡಿ ಶಿಕ್ಷೆಗೆ ಒಳಪಡಿಸಲಾಗುತ್ತಿದೆ. ಇತ್ತೀಚೆಗೆ ಗೋವಾಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಕಪ್ಪೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಾರವಾರದಲ್ಲಿ ಆರೋಪಿಗಳ ಸಹಿತ ವಶಕ್ಕೆ ಪಡೆದು ಈ ಕಾನೂನಿನಡಿ ಪ್ರಕರಣ ದಾಖಲಿಸಿದ್ದಾರೆ.
Advertisement
ಕಪ್ಪೆಗಳಿಗೆ ಯಾಕಿಷ್ಟು ಪ್ರಾಮುಖ್ಯ?ಇತ್ತೀಚೆಗೆ ಜಗತ್ತಿನಲ್ಲಿ 8 ಸಾವಿರ ಕಪ್ಪೆ ಪ್ರಭೇದಗಳ ಬಗ್ಗೆ ಅಧ್ಯಯನ ಮಾಡಲಾಗಿದ್ದು, ಶೇ.41 ಕಪ್ಪೆ ಅಳವಿನಂಚಿನ ಸ್ಥಿತಿಯಲ್ಲಿದೆ. ನಮ್ಮ ದೇಶದಲ್ಲಿ 426 ಪ್ರಭೇದಗಳ ಅಧ್ಯಯನ ಮಾಡಿದ್ದು, 136 ಪ್ರಭೇದಗಳು ವಿನಾಶದಂಚಿನಲ್ಲಿವೆ. ಇದರಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ಪರಿಸರ ವ್ಯವಸ್ಥೆಯ ಆಹಾರ ಸರಪಳಿಯಲ್ಲಿ ಕಪ್ಪೆಗಳದ್ದು ಬಹುದೊಡ್ಡ ಪಾತ್ರ. ಕಪ್ಪೆಗಳು ಪರಿಸರದ ಆರೋಗ್ಯ ಸೂಚಕ ಜೀವಿಗಳಾಗಿವೆ. ಕೀಟ ಸಾಂದ್ರತೆಯನ್ನು ನಿಯಂತ್ರಣದಲ್ಲಿಡುವ ಶಕ್ತಿ ಇವುಗಳಿಗಿದೆ. ಕಪ್ಪೆ ಸಂತತಿಯೇ ಇಲ್ಲದಾದರೆ ಕೀಟ ಸಂತತಿಗಳು ಏರಿಕೆಯಾಗಿ ದೊಡ್ಡ ಗಂಡಾಂತರ ಎದುರಾಗಬಹುದು. ರೈತ ಸ್ನೇಹಿಯಾಗಿಯೂ ಕಪ್ಪೆಗಳು ಕೆಲಸ ಮಾಡುತ್ತವೆ ಎನ್ನುತ್ತಾರೆ ಕಪ್ಪೆ ಸಂಶೋಧಕರು. ಮಾಹೆ ವಿ.ವಿ.ಯ ಡಾ| ಟಿ. ಎಂ. ಪೈ ಎಂಡೋಮೆಂಟ್ ಚೆಯರ್ ವತಿಯಿಂದ ಕಪ್ಪೆಗಳ ಅಧ್ಯಯನ ಮತ್ತು ಪ್ರಸ್ತುತ ಹವಾಮಾನ ಸ್ಥಿತಿಗತಿ ಕಪ್ಪೆಗಳ ಮೇಲಾಗುತ್ತಿರುವ ಪರಿಣಾಮದ ಬಗ್ಗೆ ಸಂಶೋಧನೆಗಾಗಿ 10 ಲಕ್ಷ ರೂ. ಅನುದಾನ ನೀಡಿದೆ. ಈ ನಿಟ್ಟಿನಲ್ಲಿ ಕೆಲಸಗಳು ಸಾಗುತ್ತಿದ್ದು, ಆಧುನಿಕ ತಂತ್ರಜ್ಞಾನದ ನೆರವು ಪಡೆದು ಕಪ್ಪೆಗಳ ಅಧ್ಯಯನ ಪ್ರಕ್ರಿಯೆ ಹಂತಹಂತವಾಗಿ ನಡೆಯುತ್ತಿದೆ.
– ಡಾ| ಕೆ. ವಿ. ಗುರುರಾಜ್, ಕಪ್ಪೆ ಸಂಶೋಧಕರು, ಸಹ ಪ್ರಾಧ್ಯಾಪಕ, ಸೃಷ್ಟಿ ಮಣಿಪಾಲ್, ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ ಆ್ಯಂಡ್ ಟೆಕ್ನಾಲಜಿ, ಮಾಹೆ, ಬೆಂಗಳೂರು. – ಅವಿನ್ ಶೆಟ್ಟಿ