Advertisement

ಉಷಾ ದಾತಾರ್‌-ನೀಲಾ ರಾಮಗೋಪಾಲ್‌ಗೆ ಪ್ರಶಸ್ತಿ

12:33 PM Jan 16, 2017 | |

ದಾವಣಗೆರೆ: ರೇಣುಕಾ ಮಂದಿರದಲ್ಲಿ ಭಾನುವಾರ ನಡೆದ ನಾಟ್ಯಭಾರತಿ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಕಲಾಕೇಂದ್ರದ 58ನೇ ವಾರ್ಷಿಕೋತ್ಸವದಲ್ಲಿ ದೇವಾಲಯ ನೃತ್ಯವನ್ನು ಜಗದ್ವಿಖ್ಯಾತಗೊಳಿಸಿರುವ 72 ವರ್ಷ ಹರೆಯದ ಉಷಾ ದಾತಾರ್‌ಗೆ ನಾಟ್ಯಾಚಾರ್ಯ ಶ್ರೀನಿವಾಸ ಕುಲಕರ್ಣಿ, ಕರ್ನಾಟಕ ಶಾಸ್ತ್ರಿಯ ಸಂಗೀತ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಸಾಧಕಿ ನೀಲಾ ರಾಮಗೋಪಾಲ್‌ಗೆ ವಿದುಷಿ ಲಕ್ಷ್ಮಿದೇವಮ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು. 

Advertisement

ಪ್ರಶಸ್ತಿ ಸೀಕರಿಸಿದ ಉಷಾ ದಾತಾರ್‌ ಮಾತನಾಡಿ, ತಾವು ನೃತ್ಯ ಕ್ಷೇತ್ರಕ್ಕೆ ಬಂದು ಸಾಧನೆ ಮಾಡಲು ಮೂಲ ಪ್ರೇರಣೆಯಾಗಿರುವಂತಹ ನಾಟ್ಯಾಚಾರ್ಯ ಶ್ರೀನಿವಾಸ ಕುಲಕರ್ಣಿ ಅವರ ಹೆಸರಿನ ಪ್ರಶಸ್ತಿ ಪಡೆಯುತ್ತಿರುವುದು ಜೀವನದ ಅಮೂಲ್ಯ ದಿನ ಹಾಗೂ ಇದಕ್ಕಿಂತಲೂ ಪುಣ್ಯ ಮತ್ತೂಂದು ಇರಲಾರದು. ಹಲವಾರು ಪ್ರಶಸ್ತಿ, ಸನ್ಮಾನ ಪಡೆದಿದ್ದೇನೆ.

ಕನಸು ಮನಸಿಲ್ಲೂ ಎಣಿಸಿರದ ನಾಟ್ಯಾಚಾರ್ಯ ಶ್ರೀನಿವಾಸ ಕುಲಕರ್ಣಿ ಹೆಸರಿನ ಪ್ರಶಸ್ತಿ ಪಡೆದ ನಂತರ ಇನ್ನು ಯಾವುದೇ ಪ್ರಶಸ್ತಿ, ಸನ್ಮಾನ ಬೇಕಾಗಿಯೂ ಇಲ್ಲ. ಈ ಪ್ರಶಸ್ತಿಗೆ ಅಷ್ಟೊಂದು ಮಹತ್ವ ಇದೆ. ಈ ಪ್ರಶಸ್ತಿಗೆ ತಮ್ಮನ್ನು ಆಯ್ಕೆ ಮಾಡಿರುವ ನಾಟ್ಯಭಾರತಿ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಕಲಾಕೇಂದ್ರಕ್ಕೆ ತಾವು ಸದಾ ಋಣಿ ಎಂದು ತಿಳಿಸಿದರು. ನಾಟ್ಯಾಚಾರ್ಯ ಶ್ರೀನಿವಾಸ ಕುಲಕರ್ಣಿ ಅತ್ಯದ್ಭುತ ವ್ಯಕ್ತಿತ್ವ ಹೊಂದಿದವರು.

ನೃತ್ಯ ಕ್ಷೇತ್ರದಲ್ಲಿ ಉತ್ತಮ ಸ್ಥಾನದಲ್ಲಿದ್ದರೂ ಅವರು ಎಂದಿಂಗೂ ತಾವು ನಾಟ್ಯಾಚಾರ್ಯ ಎಂದು ತೋರಿಸಿಕೊಂಡವರಲ್ಲ. ಸರಳ, ಸಜ್ಜನಿಕೆಯ ಪ್ರತೀಕವಾಗಿದ್ದರು. ಮಕ್ಕಳನ್ನು ಇಂಜಿನಿಯರ್‌, ಡಾಕ್ಟರ್‌ ಏನೇ ಓದಿಸಿ, ನೃತ್ಯಗಾರರನ್ನು ಬೆಳೆಸಿ. ನೃತ್ಯ, ಸಂಗೀತದಲ್ಲಿ ತೊಡಗುವುದರಿಂದ ಯಾವುದೇ ದೈಹಿಕ ಸಮಸ್ಯೆ  ಕಾಣಿಸಿಕೊಳ್ಳುವುದೇ ಇಲ್ಲ ಎಂದು ತಿಳಿಸಿದರು. 

ನನಗೆ ಹೆಸರನ್ನು ತಂದುಕೊಟ್ಟಿರುವ ದೇವಾಲಯ ನೃತ್ಯವನ್ನು ದಾವಣಗೆರೆ, ಹರಿಹರದಲ್ಲಿ ನಡೆಸಿಕೊಡಲುಯ ಸದಾ ಸಿದ್ಧ. ಒಂದು ವಾರದಲ್ಲೇ ದೇವಾಲಯ ನೃತ್ಯ ಕಾರ್ಯಕ್ರಮ ಆಯೋಜಿಸಿದರೆ ಖಂಡಿತವಾಗಿ ಪ್ರದರ್ಶನ ನಡೆಸಿಕೊಡುವುದಾಗಿ ತಿಳಿಸಿದರು.  ಗಾಯಕಿ ನೀಲಾ ರಾಮಗೋಪಾಲ್‌ ಮಾತನಾಡಿ, ವಯಸ್ಸಿಗೂ ಮತ್ತು ಸಂಗೀತಕ್ಕೆ ಸಂಬಂಧವೇ ಇಲ್ಲ. 

Advertisement

ನನ್ನಂತೆ 82 ವರ್ಷ ವಯಸ್ಸಿನವರೂ, 14 ವರ್ಷದವರೂ ಹಾಡಬಹುದು. ಸಂಗೀತ, ನೃತ್ಯದ ಆಸಕ್ತಿ ಇದ್ದಲ್ಲಿ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಸತತ ಅಭ್ಯಾಸದ ಮೂಲಕ ಸಂಗೀತ, ನೃತ್ಯವನ್ನು ಒಲಿಸಿಕೊಳ್ಳಬಹುದು. ಶಿಕ್ಷಣ, ಕೈಗಾರಿಕೆಯಲ್ಲಿ ಉತ್ತಮ ಹೆಸರುಗಳಿಸಿರುವ ದಾವಣಗೆರೆ ನೃತ್ಯ, ಸಂಗೀತ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಕೀರ್ತಿ ಪತಾಕೆ ಹಾರಿಸುವಂತಾಗಲಿ ಎಂದು ಹಾರೈಸಿದರು. 

ಕಾರ್ಯಕ್ರಮ ಉದ್ಘಾಟಿಸಿದ ಜಾನಪದ ತಜ್ಞ ಡಾ| ಎಂ.ಜಿ. ಈಶ್ವರಪ್ಪ ಮಾತನಾಡಿ, ಸಂಗೀತ, ನೃತ್ಯದಿಂದ ಆತ್ಮವಿಶ್ವಾಸ, ಆತ್ಮಸೌಂದರ್ಯ ವೃದ್ಧಿಸುತ್ತದೆ. ಸಂಗೀತ ಹಾಗೂ ನೃತ್ಯವನ್ನು ಕಲಿಯುವುದು ಅಷ್ಟೊಂದು ಸುಲಭ ಅಲ್ಲ, ಹಾಗಾಗಿ ಶಾಲಾ-ಕಾಲೇಜುಗಳ ಪಠ್ಯಕ್ರಮವಾಗಿ ಕಲಿಸುವುದು ಸುಲಭ ಅಲ್ಲ.

ಭಾರತೀಯ ಆತ್ಮಸೌಂದರ್ಯವನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿಸಿದಂತಹ ಇಬ್ಬರು ಅತ್ಯಮೂಲ್ಯ ಕಲಾವಿದರಿಗೆ ಪ್ರಶಸ್ತಿ ನೀಡಿ, ಗೌರವಿಸುತ್ತಿರುವುದು ದಾವಣಗೆರೆಯನ್ನೇ ಸನ್ಮಾನಿಸಿದಂತೆ ಎಂದರು. ಅಧ್ಯಕ್ಷತೆ ವಹಿಸಿದ್ದ ನಾಟ್ಯಭಾರತಿ ಶಾಸ್ತ್ರೀಯ ನೃತ್ಯಮತ್ತು ಸಂಗೀತ ಕಲಾಕೇಂದ್ರದ ಗೌರವ ಅಧ್ಯಕ್ಷ ಎಚ್‌.ಬಿ.  ಮಂಜುನಾಥ್‌, ಗೀತ, ನೃತ್ಯ ಮತ್ತು ಯೋಗವನ್ನು ಕಡ್ಡಾಯವಾಗಿ ಪಠ್ಯಕ್ರಮದಲ್ಲಿ ಅಳವಡಿಸಬೇಕು ಎಂದು ಒತ್ತಾಯಿಸಿದರು.

ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೀರಶೈವ ಸದೊದನಾ ಸಂಸ್ಥೆ ಅಧ್ಯಕ್ಷ ದೇವರಮನಿ ಶಿವಕುಮಾರ್‌, ರಜನಿ ಕುಲಕರ್ಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್‌ ಬೆಕ್ಕೇರಿ, ಕೆ.ಜಿ. ಕುಲಕರ್ಣಿ ಇತರರು ಇದ್ದರು. ಬಿ.ವಿ. ರಾಜಶೇಖರ್‌ ಸ್ವಾಗತಿಸಿದರು. ಪಿ. ನಾಗಭೂಷಣ್‌ ತೌಡೂರ್‌ ನಿರೂಪಿಸಿದರು. ಕೇಂದ್ರದ ವಿದ್ಯಾರ್ಥಿಗಳು ಮನಮೋಹಕವಾಗಿ ಹರಿದಾಸರು ಕಂಡ ಕೃಷ್ಣನ ಲೀಲೆಗಳು, ಗಿರಿಜಾ ಕಲ್ಯಾಣ ನೃತ್ಯ ಪ್ರದರ್ಶನ ನೀಡಿದರು.    

Advertisement

Udayavani is now on Telegram. Click here to join our channel and stay updated with the latest news.

Next