ಬೆಂಗಳೂರು: ಆಧಾರ್ ಮಾಹಿತಿ ಬಳಕೆ ಕುರಿತಂತೆ ಖಾಸಗಿತನ ಕಾಪಾಡಿಕೊಳ್ಳುವ ಸಂಬಂಧ ಬಳಕೆದಾರ ಸ್ನೇಹಿ ಕಾನೂನು ರೂಪಿಸುವ ಮೂಲಕ ಗೊಂದಲಗಳಿಗೆ ಅಂತ್ಯ ಹೇಳಬೇಕಿದೆ. ಬಳಕೆದಾರ ಸ್ನೇಹಿ ಕಾನೂನು ರಚನೆ ಸಂಬಂಧ ರಾಷ್ಟ್ರೀಯ ಕಾನೂನು ಶಾಲೆಗಳ ತಂಡ ರಚಿಸುವುದು ಸೂಕ್ತ ಎಂದು ಇನ್ಫೋಸಿಸ್ ಸಹ ಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಹೇಳಿದರು.
ಇಂಡಿಯಾ ಎಲೆಕ್ಟ್ರಾನಿಕ್ಸ್ ಆ್ಯಂಡ್ ಸೆಮಿಕಂಡಕ್ಟರ್ ಅಸೋಸಿಯೇಷನ್ (ಐಇಎಸ್‌ಎ) ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸೂಪರ್ ಕಂಪ್ಯೂಟಿಂಗ್ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, “ಈಗಾಗಲೇ ದೇಶದ ಜನತೆಗೆ ಸಂಬಂಧಪಟ್ಟ ಬೃಹತ್ ಮಾಹಿತಿ ಕೋಶ ಸಂಗ್ರಹವಾಗಿದ್ದು, ಅದನ್ನು ಜನರ ಒಳಿತಿಗೆ ಬಳಸಿಕೊಳ್ಳದಿದ್ದರೆ ಈ ಮಾಹಿತಿ ಪ್ರಯೋಜನಕ್ಕೆ ಬಾರದಂತಾಗುತ್ತದೆ.
ಹಾಗಾಗಿ ಖಾಸಗಿತನ ಸಂಬಂಧ ಬಳಕೆದಾರ ಸ್ನೇಹಿ ಕಾನೂನು ರೂಪಿಸಿ ಒಮ್ಮೆಗೆ ಗೊಂದಲ, ಚರ್ಚೆಗೆ ತೆರೆ ಎಳೆಯಬೇಕಿದೆ ಎಂದು ತಿಳಿಸಿದರು. ಹೈದರಾಬಾದ್, ಕೋಲ್ಕತ್ತಾ ಸೇರಿದಂತೆ ಇತರೆಡೆಯ ರಾಷ್ಟ್ರೀಯ ಕಾನೂನು ಶಾಲೆಗಳಿಂದ ತಂಡವೊಂದನ್ನು ರಚಿಸಿ ಈ ಮಹತ್ವದ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಬಗ್ಗೆ ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಸಾರಸ್ವತ್ ಅವರು ಚಿಂತಿಸಬೇಕು.
ಸೂಪರ್ ಕಂಪ್ಯೂಟಿಂಗ್ ವ್ಯವಸ್ಥೆ ಹೇಗಿರಬೇಕು, ಅದಕ್ಕೆ ಸಾಫ್ಟ್ವೇರ್ ವ್ಯವಸ್ಥೆ ಹೇಗಿರಬೇಕು, ಯಾವ ಅಪ್ಲಿಕೇಷನ್ ಬಳಸಬೇಕು ಎಂಬ ಬಗ್ಗೆ ತಜ್ಞರು, ವಿಜ್ಞಾನಿಗಳು ನಿರ್ಧರಿಸುತ್ತಾರೆ. ಅದೇ ಮಾದರಿಯಲ್ಲಿ ಕಾನೂನು ಕ್ಷೇತ್ರದ ತಜ್ಞರು ಖಾಸಗಿತನ ಸಂಬಂಧಿ ಕಾನೂನು, ಸೈಬರ್ ಸುರಕ್ಷತೆ ಕುರಿತಂತೆ ಹೆಚ್ಚಿನ ಅಧ್ಯಯನ ನಡೆಸುವತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಎಕ್ಸಾಸ್ಕೇಲ್ ಕಂಪ್ಯೂಟಿಂಗ್: ಚೀನಾ, ಅಮೆರಿಕ, ಜಪಾನ್ ಹಾಗೂ ಯುರೋಪಿಯನ್ ರಾಷ್ಟ್ರಗಳು 2021ರ ವೇಳೆಗೆ ಎಕ್ಸಾಸ್ಕೇಲ್ ಕಂಪ್ಯೂಟಿಂಗ್ ವ್ಯವಸ್ಥೆ ಅಳವಡಿಸುವ ಚಿಂತನೆಯಲ್ಲಿವೆ. ಕೇಂದ್ರ ಸರ್ಕಾರವು 2022ರ ವೇಳೆಗೆ ಈ ಸಮೂಹವನ್ನು ಸೇರಿಕೊಳ್ಳಲು 15,000 ಕೋಟಿ ರೂ. ಹೂಡಿಕೆ ಮಾಡಿರುತ್ತಿರುವುದು ಸಂತಸದ ಸಂಗತಿ. ದೇಶೀಯವಾಗಿಯೇ ಸೂಪರ್ ಕಂಪ್ಯೂಟರ್‌ಗಳ ನಿರ್ಮಾಣಕ್ಕೆ ನಿರ್ಧರಿಸಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಸಾರಸ್ವತ್ ಮಾತನಾಡಿ, ದೇಶದ ವೈಜ್ಞಾನಿಕ ಮತ್ತು ಶೈಕ್ಷಣಿಕ ವಲಯದಿಂದ ಸೂಪರ್ ಕಂಪ್ಯೂಟಿಂಗ್‌ಗೆ ತೀವ್ರ ಬೇಡಿಕೆ ಸೃಷ್ಟಿಯಾದ ಹಿನ್ನೆಲೆಯಲ್ಲಿ 2015ರಲ್ಲೇ ನ್ಯಾಷನಲ್ ಸೂಪರ್‌ಕಂಪ್ಯೂಟಿಂಗ್ ಮಿಷನ್ ಜಾರಿಗೊಳಿಸಲಾಯಿತು. ಶೈಕ್ಷಣಿಕ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು, ರಾಷ್ಟ್ರೀಯ ಪ್ರಯೋಗಾಲಯಗಳಲ್ಲಿ ಅಂತಾರಾಷ್ಟ್ರೀಯ ದರ್ಜೆಯ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ನೀಡುವುದು
ಹಾಗೂ ಸೂಪರ್ ಕಂಪ್ಯೂಟರ್‌ಗಳ ವಿನ್ಯಾಸ, ಅಭಿವೃದ್ಧಿ, ತಯಾರಿಕೆ, ಬಳಕೆಗೆ ಪೂರಕ ವಾತಾವರಣ ನಿರ್ಮಿಸಲು ಈ ಮಿಷನ್ ರೂಪುಗೊಂಡಿತು. ಅದೇ ಕಾರ್ಯದಲ್ಲಿ ಸಕ್ರಿಯವಾಗಿ ಮುಂದುವರಿದಿದೆ ಎಂದು ತಿಳಿಸಿದರು. ಇಸ್ರೊ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್, ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ.ಎನ್.ಬಾಲಕೃಷ್ಣನ್, ಡಿಆರ್‌ಡಿಒ ಮಾಜಿ ಪ್ರಧಾನ ನಿರ್ದೇಶಕ ಡಾ.ಕೆ.ಡಿ.ನಾಯಕ್, ನಳಂದ ವಿವಿಯ ಕುಲಪತಿ ಡಾ.ವಿಜಯ್ ಭಾಟ್ಕರ್ ಇತರರು ಉಪಸ್ಥಿತರಿದ್ದರು.