Advertisement
ಕೇರಳ, ಬೆಂಗಳೂರು, ಮೈಸೂರು ಸಹಿತ ಬಹು ತೇಕ ಭಾಗಗಳಲ್ಲಿ ಬಳಕೆಯಲ್ಲಿದ್ದ “ಇ-ಟಾಯ್ಲೆಟ್’ ಪರಿಕಲ್ಪನೆಯನ್ನು ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಮೊದಲ ಬಾರಿಗೆ 4 ವರ್ಷಗಳ ಹಿಂದೆ ಅನುಷ್ಠಾನಗೊಳಿಸಲಾಗಿತ್ತು. ಆದರೆ ಕೊಂಚ ಸಮಯ ಬಳಕೆಯಾದ ಇವು ಸದ್ಯ ನಿರ್ವಹಣೆ ಯಿಲ್ಲದೆ ಉಪಯೋಗಕ್ಕಿಲ್ಲವಾಗಿದೆ.
Related Articles
Advertisement
ನಗರದಲ್ಲಿ “ಶೌಚಾಲಯ’ ಎಂಬುದು ಬಹುದೊಡ್ಡ ಸಮಸ್ಯೆಯ ವಿಚಾರ. ಇಲ್ಲಿ ಬೇಕಾದಲ್ಲಿ ಶೌಚಾಲಯವಿಲ್ಲ; ಇರುವಲ್ಲಿ ಅದು ಸರಿಯಿಲ್ಲ ಅನ್ನುವ ಪರಿಸ್ಥಿತಿ. ಹೀಗಾಗಿ ಜನರಿಗೆ ಒಂದಲ್ಲ ಒಂದು ಸಮಸ್ಯೆ. ನಂತೂರು, ಮಾರ್ಕೆಟ್ ರಸ್ತೆ, ಕೆಪಿಟಿ ಜಂಕ್ಷನ್, ಕೊಟ್ಟಾರ ಚೌಕಿ, ಕದ್ರಿ ಮಲ್ಲಿಕಟ್ಟೆ, ಹಂಪನಕಟ್ಟೆ, ಅತ್ತಾವರ, ಕಂಕನಾಡಿ ಹೀಗೆ ಹಲವು ಜಾಗದಲ್ಲಿ ಶೌಚಾಲಯ ಬಹುಮುಖ್ಯ. ಆದರೆ ಇಲ್ಲಿ ಎಲ್ಲೂ ಕೂಡ ಸುಸಜ್ಜಿತ ರೀತಿಯ ಶೌಚಾಲಯ ಇಲ್ಲವೇ ಇಲ್ಲ. ಸ್ಟೇಟ್‌ಬ್ಯಾಂಕ್ ಬಸ್ ನಿಲ್ದಾಣ ವ್ಯಾಪ್ತಿಯಲ್ಲಿ ಒಂದೆರಡು ಶೌಚಾಲಯಗಳು ಇವೆಯಾದರೂ ಇದರ ನಿರ್ವಹಣೆ ಕೈ ತಪ್ಪಿಹೋಗಿದೆ.
ಇ-ಟಾಯ್ಲೆಟ್ ಎಂಬ ಅಪರಿಚಿತ ಶೌಚಾಲಯ ! :
ಇ-ಟಾಯ್ಲೆಟ್ ಎಂಬ ಪರಿಕಲ್ಪನೆ ನಗರಕ್ಕೆ ಹೊಸದಾಗಿ ಪರಿಚಿತವಾದ್ದರಿಂದ ಕೆಲವರು ಇದರ ಬಳಕೆಗೆ ವಿಶೇಷ ಆದ್ಯತೆ ನೀಡಿದಂತಿಲ್ಲ. ಯಾಕೆಂದರೆ ಸ್ಥಳೀಯವಾಗಿ ಲಭ್ಯವಿರುವ ಶೌಚಾಲಯವನ್ನು ಬಳಕೆ ಮಾಡಿದ ಮಂದಿ ಇ-ಟಾಯ್ಲೆಟ್ ಎಂಬ ಪರಿಕಲ್ಪನೆಗೆ ಒಗ್ಗಿಕೊಂಡಿಲ್ಲ. “ಮಂಗಳೂರಿಗೆ ಇದು ಸೂಕ್ತ ಅಲ್ಲ’ ಎಂದೇ ಹೇಳುವವರು ಅಧಿಕ. ಜನನಿಬಿಡ ಲಾಲ್‌ಬಾಗ್ ಬಸ್ ನಿಲ್ದಾಣ ಸಮೀಪದಲ್ಲಿಯೇ ಇ-ಟಾಯ್ಲೆಟ್ ಇರುವುದರಿಂದ ಅದರೊಳಗೆ ಹೋಗಲು ಕೆಲವರು ಮುಜುಗರಪಡುತ್ತಿದ್ದಾರೆ. ಹೀಗಾಗಿ ಹೆಚ್ಚಿನವರಿಗೆ ಇ-ಟಾಯ್ಲೆಟ್ ಎಂಬುದು ಅಪರಿಚಿತ ಶೌಚಾಲಯವಾಗಿದೆ. ಈ ಮಧ್ಯೆ ಕದ್ರಿ ಪಾರ್ಕ್ ಸಹಿತ ಕೆಲವು ಇ-ಟಾಯ್ಲೆಟ್‌ನಲ್ಲಿ ನೀರಿನ ಕೊರತೆಯೂ ಎದುರಾಗಿತ್ತು.
ಚರ್ಚಿಸಿ ತೀರ್ಮಾನ:
ನಗರದ ಕೆಲವು ಇ-ಟಾಯ್ಲೆಟ್‌ಗಳು ಸದ್ಯ ಬಳಕೆಯಾಗದಿರುವ ಹಾಗೂ ನಿರ್ವಹಣೆ ಸಮಸ್ಯೆ ಬಗ್ಗೆ ದೂರುಗಳು ಬಂದಿವೆ. ಜತೆಗೆ ಜನರು ಕೂಡ ಇದನ್ನು ಬಳಸಲು ಹಿಂಜರಿಯುತ್ತಿರುವ ಬಗ್ಗೆಯೂ ಮಾಹಿತಿಯಿದೆ. ಹೀಗಾಗಿ ಈ ಕುರಿತಂತೆ ಅಧಿಕಾರಿಗಳ ಜತೆಗೆ ಚರ್ಚಿಸಿ ಮುಂದೇನು ಮಾಡಬಹುದು ಎಂಬ ಬಗ್ಗೆ ತೀರ್ಮಾನಿಸಲಾಗುವುದು. –ಪ್ರೇಮಾನಂದ ಶೆಟ್ಟಿ, ಮೇಯರ್, ಮಂಗಳೂರು ಪಾಲಿಕೆ
– ದಿನೇಶ್ ಇರಾ