ಮುಂಬಯಿ : ದೀಪಾವಳಿ ಬಂದಾಗ ಇಡಿಯ ದೇಶಕ್ಕೆ ದೇಶವೇ ಬೆಳಕಿನ ಹಬ್ಬದಲ್ಲಿ ಮಿಂದೇಳುತ್ತದೆ. ಆದರೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ದೀಪಾವಳಿಯ ಸಂದರ್ಭದಲ್ಲಿ ಏನು ಮಾಡುತ್ತಾರೆ ಎಂಬುದು ಯಾರಿಗೂ ಗೊತ್ತಿಲ್ಲ.
“ದೀಪಾವಳಿಯ ಐದು ದಿನಗಳಲ್ಲಿ ನಾನು ಕಾಡಿಗೆ ಹೋಗುತ್ತೇನೆ; ಅಲ್ಲಿ ಒಂಟಿಯಾಗಿದ್ದು ಆತ್ಮಾವಲೋಕನ ಮಾಡುತ್ತೇನೆ’ ಎಂದು ಸ್ವತಃ ಪ್ರಧಾನಿ ಮೋದಿ ಅವರೇ ತಮ್ಮ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.
ಪ್ರಧಾನಿ ಮೋದಿ ಅವರು ತಮ್ಮ ಬದುಕಿನಲ್ಲಿ ಒಂಟಿತನಕ್ಕೂ ಪ್ರಾಧಾನ್ಯ ನೀಡುತ್ತಾರೆ. ಒಂಟಿಯಾಗಿರುವಾಗ ಆತ್ಮಾವಲೋಕನ ಅರ್ಥಪೂರ್ಣವಾಗಿರುತ್ತದೆ ಎಂದವರು ಹೇಳುತ್ತಾರೆ.
‘ಹ್ಯೂಮನ್ಸ್ ಆಫ್ ಬಾಂಬೆ’ ತಂಡದ ಮುಂದೆ ಪ್ರಧಾನಿ ಮೋದಿ ಅವರು ತಮ್ಮ ಜೀವನದ ಈ ವರೆಗಿನ ಗಾಥೆಯನ್ನು ಐದು ಭಾಗಗಳಲ್ಲಿ ದಾಖಲೀಕರಿಸುವ ಪ್ರಕ್ರಿಯೆಯಲ್ಲಿ ಇಂಟರ್‌ನೆಟ್‌ನಲ್ಲಿ ಹ್ಯಾಶ್ ಟ್ಯಾಗ್ ಮೋದಿ ಲಿಂಕ್ ಮೂಲಕ ತಮ್ಮ ಗಾಥೆಯನ್ನು ವಿಷದಪಡಿಸಿದ್ದಾರೆ. ಇದರ ಮೂರನೇ ಭಾಗದಲ್ಲಿ ಮೋದಿ ಅವರು ತಾನು ದೀಪಾವಳಿಯ ಐದು ದಿನ ಒಂಟಿಯಾಗಿ ಕಾಡಿಗೆ ಹೋಗಿ ಆತ್ಮಾವಕಲೋಕನ ನಡೆಸುವುದು ವಾಡಿಕೆ ಎಂದಿದ್ದಾರೆ.
17ನೇ ವಯಸ್ಸಿನಲ್ಲೇ ನಾನು ಆಧ್ಯಾತ್ಮಿಕ ಚಿಂತನಶೀಲತೆಯಲ್ಲಿ ಹಿಮಾಲಯಕ್ಕೆ ಹೋಗಿದ್ದೆ ಎಂದಿರುವ ಮೋದಿ ತನ್ನ ಬಾಲ್ಯ ಮತ್ತು ತಾರಣ್ಯದ ದಿನಗಳನ್ನು ವಿವರವಾಗಿ ಹೇಳಿದ್ದಾರೆ. ಮುಂಬಯಿ ಮಹಾನಗರದಲ್ಲಿ ತಾನು ಆರ್‌ಎಸ್‌ಎಸ್ ಕಾರ್ಯಕರ್ತನಾಗಿ ಚಟುವಟಿಕೆಯಿಂದಿದ್ದ ದಿನಗಳನ್ನು ಆಸ್ಥೆಯಿಂದ ಹೇಳಿಕೊಂಡಿದ್ದಾರೆ.