ಬೆಂಗಳೂರು: ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಸರಳ ಆಚರಣೆಗೆ ಸರ್ಕಾರದ ನಿರ್ಧಾರಿಸಿದ್ದು, ಅದಕ್ಕೆ ಸಮಾಜದ ಸಹಮತವಿದೆ. ಅಲ್ಲದೆ ಜಯಂತಿಗೆ ಮೀಸಲಿಟ್ಟಿರುವ 65 ಲಕ್ಷ ರೂ. ಅನುದಾನವನ್ನು ನೆರೆ ಸಂತ್ರಸ್ತರ ನೆರವಿಗೆ ವಿನಿಯೋಗಿಸಬೇಕು ಎಂದು ಅಖೀಲ ಭಾರತ ಲಿಂಗಾ ಯತ ಪಂಚಮಸಾಲಿ ಸಮಾಜ ಮನವಿ ಮಾಡಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೂಡಲ ಸಂಗಮ ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ, ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಜಲಪ್ರಳಯ ಉಂಟಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಇಂತಹ ಸಂದರ್ಭದಲ್ಲಿ ಸರಳ ಆಚರಣೆಗೆ ಸರ್ಕಾರ ನಿರ್ಧರಿಸಿದೆ. ಇದಕ್ಕೆ ಸಮಾಜದ ಸಹಮತವಿದ್ದು, ಚೆನ್ನಮ್ಮ ಜಯಂತಿಗೆ ಮೀಸಲಿಟ್ಟ ಹಣವನ್ನು ನೆರೆ ಸಂತ್ರಸ್ತರ ನಿಧಿಗೆ ಬಳಸಿಕೊಳ್ಳಬೇಕು.
ಇದೇ ರೀತಿ, ಇತರ ಮಹನೀಯರ ಜಯಂತಿಗಳನ್ನೂ ಸರಳವಾಗಿ ಆಚರಿಸಿ, ನೆರೆ ಸಂತ್ರಸ್ತರ ನಿಧಿಗೆ ಆ ಮೀಸಲಿಟ್ಟ ಹಣ ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಪ್ರತ್ಯೇಕ ಧರ್ಮಕ್ಕೆ ಹೋರಾಟ ನಿರಂತರ: ಪ್ರತ್ಯೇಕ ಧರ್ಮದ ಹೋರಾಟ ನಿಂತಿಲ್ಲ. ಅದು ಮುಂದು ವರಿದಿದ್ದು, ಹೋರಾಟದ ಭಾಗವಾಗಿ 2020ರ ಮಾರ್ಚ್ 8ರಂದು ತೆಲಂಗಾಣದಲ್ಲಿ ಬೃಹತ್ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಜಾಮದಾರ್ ನೇತೃತ್ವದ ಸಮಿತಿಯಿಂದ ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು. ಈ ಮಧ್ಯೆ ಸಮುದಾಯದ ಸಂಘಟನೆಗೆ ತೆಲಂಗಾಣದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಂಬಂಧಿಸಿದಂತೆ ಬೃಹತ್ ಸಮಾವೇಶ ನಡೆಸಲಾಗುತ್ತಿದೆ. ಹೋರಾಟ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಭಾರತ ರತ್ನಕ್ಕೆ ಒತ್ತಾಯ: ಅ.23ಕ್ಕೆ ನಗರದ ಪುರಭವನದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಿಸಲಾಗುವುದು. ಜಿಲ್ಲಾ ಮತ್ತು ತಾಲ್ಲೂಕು ಆಡಳಿತದಿಂದ ಉಪನ್ಯಾಸ ಗೋಷ್ಠಿ ಗಳ ಮೂಲಕ ಯಾವುದೇ ಆಡಂಬರ ಬೇಡ. ಸರಳ ಹಾಗೂ ಅರ್ಥಪೂರ್ಣ ರಾಣಿ ಚೆನ್ನಮ್ಮ ಜಯಂತಿ ಆಚರಿಸಬೇಕು.
ದೇಶದ ಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ ರಾಣಿ ಚೆನ್ನಮ್ಮ ಹಾಗೂ ಪ್ರಥಮ ಹುತಾತ್ಮ ಸಂಗೊಳ್ಳಿ ರಾಯಣ್ಣಗೆ ಕೇಂದ್ರ ಮರಣೋತ್ತರ “ಭಾರತ ರತ್ನ ಪ್ರಶಸ್ತಿ’ ಪ್ರದಾನ ಮಾಡಬೇಕು. ಈ ಸಂಬಂಧ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.