Advertisement

ಯಂತ್ರ ಬಿಡಿ ಮಾನವ ಸಂಪನ್ಮ‌ೂಲ ಬಳಸಿ

09:07 AM Jun 07, 2019 | Suhan S |

ಬೆಳಗಾವಿ: ಯಂತ್ರೋಪಕರಣಗಳ ಬದಲು ಮಾನವ ಸಂಪನ್ಮೂಲದ ಬಳಕೆ ಹೆಚ್ಚು ಮಾಡಿ ದೇಶದಲ್ಲಿ ಉತ್ಪಾದನೆ ಪ್ರಮಾಣ ಹೆಚ್ಚಿಸಬೇಕು. ಇದರಿಂದ ನಿರುದ್ಯೋಗ ಸಮಸ್ಯೆ ಜೊತೆಗೆ ದೇಶದ ಆರ್ಥಿಕ ಸ್ಥಿತಿಯನ್ನು ಕೂಡ ಉತ್ತಮಪಡಿಸಬಹುದು ಎಂಬುದು ಪಂಡಿತ ದೀನದಯಾಳ್‌ ಉಪಾಧ್ಯಾಯ ಅವರ ಚಿಂತನೆಯಾಗಿತ್ತು ಎಂದು ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲಾ ಹೇಳಿದರು.

Advertisement

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಗುರುವಾರ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಅಧ್ಯಯನ ಪೀಠ ಉದ್ಘಾಟಿಸಿ ಮಾತನಾಡಿದ ಅವರು, ದೀನದಯಾಳ ಉಪಾಧ್ಯಾಯರ ಅನೇಕ ಚಿಂತನೆಗಳು ದೇಶದ ಅಭಿವೃದ್ಧಿಗೆ ಪೂರಕವಾಗಿದ್ದವು ಎಂದರು.

ಸಮುದ್ರಕ್ಕೆ ವ್ಯರ್ಥವಾಗಿ ಹರಿಯುವ ನದಿಯ ನೀರನ್ನು ರೈತನ ಹೊಲಗಳಿಗೆ ಹರಿಸಲು ನದಿ ಜೋಡಣೆ ಪರಿಕಲ್ಪನೆಯನ್ನು ದೀನದಯಾಳರು ಹೊಂದಿದ್ದರು. ಸ್ವಾಭಿಮಾನಿ ಜೀವನ ರೂಪಿಸುವ ಮೂಲಕ ಸದೃಢ ಭಾರತ ನಿರ್ಮಾಣದ ಕನಸು ಕಂಡಿದ್ದರು. ಅವರ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಬೇಕಿದೆ ಎಂದು ಹೇಳಿದರು.

ಬೃಹತ್‌ ಜಲಾಶಯಗಳನ್ನು ನಿರ್ಮಿಸುವ ಬದಲು ಸಣ್ಣ ಸಣ್ಣ ಜಲಾಶಯಗಳನ್ನು ಸ್ಥಾಪಿಸುವುದು ಸೂಕ್ತ ಎಂದು ದೀನದಯಾಳ ಅವರು ಯಾವಾಗಲೂ ಪ್ರತಿಪಾದಿಸುತ್ತಿದ್ದರು. ಅವರ ಈ ಚಿಂತನೆಯ ಮಾದರಿ ಯನ್ನು ಗುಜರಾತ್‌ನಲ್ಲಿ ಅನುಸರಿಸಲಾಗಿದೆ ಎಂದು ರಾಜ್ಯಪಾಲರು ನೆನಪಿಸಿಕೊಂಡರು.

ದೇಶದಲ್ಲಿ ಕೃಷಿ ಭೂಮಿಗೆ ನೀರು ಸಿಗಬೇಕು. ಎಲ್ಲ ಕೈಗಳು ಕೆಲಸ ಮಾಡುವಂತಾಗಬೇಕು ಅಂದರೆ ದೇಶ ಅಭಿವೃದ್ಧಿಯಾಗುತ್ತದೆ. ರೈತರಿಗೆ ಸಬ್ಸಿಡಿ ಮೂಲಕ ಹಣ ನೀಡುವ ಅವಶ್ಯಕತೆಗಿಂತಲೂ ನೀರಿನ ಅವಶ್ಯಕತೆ ಇದೆ. ಅವರಿಗೆ ನೀರಿನ ಸೌಲಭ್ಯ ಒದಗಿಸಬೇಕು. ಅನೇಕ ನದಿಗಳ ನೀರು ಸಮುದ್ರಕ್ಕೆ ಹೋಗಿ ಸೇರುತ್ತಿದೆ. ಅದನ್ನೆ ನಾವು ಸದುಪಯೋಗ ಪಡಿಸಿಕೊಳ್ಳಬೇಕು. ದೀನ ದಯಾಳ ಅವರು ಇದೇ ಉದ್ದೇಶದಿಂದ ಹಲವಾರು ಯೋಜನೆಗಳನ್ನು ರೂಪಿಸಿದ್ದರು. ಈ ಯೋಜನೆಗಳು ಈಗ ಕಾರ್ಯರೂಪಕ್ಕೆ ಬರಬೇಕು ಎಂದರು.

Advertisement

ವಿವಿ ಕಾರ್ಯ ಶ್ಲಾಘನೀಯ: ಭಾರತೀಯ ಜೀವನ ಪದ್ಧತಿಯು ಜಗತ್ತಿನಲ್ಲೇ ಸರ್ವಶ್ರೇಷ್ಠ. ಭಾರತೀಯರ ಚಿಂತನೆಯು ತನಗಾಗಿ ಅಲ್ಲ; ಇಡೀ ವಿಶ್ವದ ಹಿತದೃಷ್ಟಿಯಿಂದ ಕೆಲಸ ಮಾಡುವ ಮನೋಭಾವ ಹೊಂದಿದೆ. ಇದೇ ವಿಚಾರಧಾರೆಯನ್ನು ಪಂ.ದೀನದಯಾಳ್‌ ಅವರು ಹೊಂದಿದ್ದರು. ಅವರ ವಿಚಾರ-ಚಿಂತನೆಗಳನ್ನು ಪ್ರಚಾರಪಡಿಸಲು ಅಧ್ಯಯನ ಪೀಠ ಸ್ಥಾಪಿಸಿರುವ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಈ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡಿದೆ ಎಂದು ಅಭಿನಂದನೆ ಸಲ್ಲಿಸಿದರು.

ಇದು ವ್ಯವಹಾರಿಕ ವಿಷಯಗಳ ಅಧ್ಯಯನವಲ್ಲ; ಒಂದು ವಿಚಾರಧಾರೆ ಯನ್ನು ಪ್ರಚಾರಪಡಿಸುವ ಮೂಲಕ ಸದೃಢ ಸಮಾಜ ನಿರ್ಮಾಣ ಮಾಡಲು ಕೈಜೋಡಿಸುವುದು ಈ ಪೀಠದ ಕೆಲಸವಾಗಿದೆ. ದೀನದಯಾಳ ಅವರ ವಿಚಾರಧಾರೆ, ಅರ್ಥನೀತಿ, ಉದ್ಯೋಗ ನೀತಿಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಅಧ್ಯಯನ ಪೀಠ ಮಾಡಲಿ ಎಂದು ಹೇಳಿದರು.

ಆಶಯ ಭಾಷಣ ಮಾಡಿದ ನವದೆಹಲಿ ಪಂ.ದೀನದಯಾಳ್‌ ಶೋಧ ಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಅತುಲ್ ಜೈನ್‌ ಅತ್ಯಂತ ಶಿಸ್ತಿನ ಜೀವನಶೈಲಿ ರೂಢಿಸಿಕೊಂಡಿದ್ದ ಪಂ.ದೀನದಯಾಳ್‌ ಅವರು ನಿಸರ್ಗದ ಶೋಷಣೆ ಕೈಬಿಟ್ಟು ಧರ್ಮಸಮ್ಮತ ಹಾಗೂ ನೈತಿಕತೆಯ ಮಾರ್ಗದಲ್ಲಿ ನಡೆಯುವ ಚಿಂತನೆಯನ್ನು ನಮ್ಮ ಮುಂದೆ ಇಟ್ಟಿದ್ದರು ಎಂದು ಹೇಳಿದರು.

ನಿಸರ್ಗದ ರಕ್ಷಣೆಗೆ 50 ವರ್ಷಗಳ ಹಿಂದೆಯೇ ಪಂ.ದೀನದಯಾಳ್‌ ಅವರು ಪ್ರಸ್ತುತಪಡಿಸಿದ ವಿಷಯಗಳನ್ನೇ ಇದೀಗ ವಿಶ್ವಸಂಸ್ಥೆಯು ಧ್ಯೇಯವ‌ನ್ನಾಗಿ ಅಳವಡಿಸಿಕೊಂಡು ಮುನ್ನಡೆದಿದೆ. ಆದರೆ ಎಲ್ಲಿಯೂ ದೀನದಯಾಳ್‌ ಅವರನ್ನು ಸ್ಮರಿಸಿಕೊಂಡಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ದಕ್ಷಿಣ ಭಾರತದಲ್ಲಿಯೇ ಪ್ರಥಮ ಬಾರಿಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಪಂ.ದೀನದಯಾಳ್‌ ಉಪಾಧ್ಯಾಯ ಅಧ್ಯಯನ ಪೀಠ ಆರಂಭ ಮಾಡಿರುವುದು ಸಂತಸದ ವಿಷಯ. ತಂತ್ರಜ್ಞಾನದ ಅಳವಡಿಕೆಯ ಭರದಲ್ಲಿ ನಮ್ಮ ದೇಶದ ಸಾಂಸ್ಕೃತಿಕ ಮೂಲಕ್ಕೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ಜಿಲ್ಲಾಧಿಕಾರಿ ಡಾ| ಎಸ್‌.ಬಿ.ಬೊಮ್ಮನಹಳ್ಳಿ, ಪೊಲೀಸ್‌ ಆಯುಕ್ತ ಬಿ.ಎಸ್‌.ಲೋಕೇಶ್‌ ಕುಮಾರ್‌, ಜಿಪಂ ಸಿಇಒ ಡಾ| ರಾಜೇಂದ್ರ ಕೆ.ವಿ., ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ| ರಂಗರಾಜ ವನದುರ್ಗ ಉಪಸ್ಥಿತರಿದ್ದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಶಿವಾನಂದ ಹೊಸÊಡಿ ‌ುನಿ ಸ್ವಾಗತಿಸಿದರು. ಕುಲಸಚಿವ ಪ್ರೊ| ಸಿದ್ದು ಆಲಗೂರ ಅತಿಥಿಗಳನ್ನು ಪರಿಚಯಿಸಿದರು. ವಿಶ್ವವಿದ್ಯಾಲಯದ ಪಂ.ದೀನದಯಾಳ್‌ ಉಪಾಧ್ಯಾಯ ಅಧ್ಯಯನ ಪೀಠದ ಸಂಯೋಜಕ ಡಾ| ಮಹಾಂತೇಶ ಕುರಿ ವಂದಿಸಿದರು.

ರಾಜ್ಯಪಾಲ ವಾಲಾ ಸಲಹೆ:

ದೇಶದಲ್ಲಿ ಕೃಷಿ ಭೂಮಿಗೆ ನೀರು ಸಿಗಬೇಕು. ಎಲ್ಲ ಕೈಗಳು ಕೆಲಸ ಮಾಡುವಂತಾಗಬೇಕು ಅಂದರೆ ದೇಶ ಅಭಿವೃದ್ಧಿಯಾಗುತ್ತದೆ. ರೈತರಿಗೆ ಸಬ್ಸಿಡಿ ಮೂಲಕ ಹಣ ನೀಡುವ ಅವಶ್ಯಕತೆಗಿಂತಲೂ ನೀರಿನ ಅವಶ್ಯಕತೆ ಇದೆ. •ವಜುಭಾಯಿ ವಾಲಾ, ರಾಜ್ಯಪಾಲ
Advertisement

Udayavani is now on Telegram. Click here to join our channel and stay updated with the latest news.

Next