Advertisement

ಪರಿಹಾರ ಹಣ ಎಚ್ಚರಿಕೆಯಿಂದ ಬಳಸಿ: ಕವಿತಾ

05:20 PM Aug 30, 2020 | Suhan S |

ನಾಯಕನಹಟ್ಟಿ: ದೌರ್ಜನ್ಯ ಪರಿಹಾರದ ಹಣವನ್ನು ಎಚ್ಚರಿಕೆಯಿಂದ ಬಳಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಹೇಳಿದರು.

Advertisement

ದುಷ್ಕರ್ಮಿಗಳಿಂದ ಕೊಲೆಗೀಡಾದವರ ಕುಟುಂಬಗಳಿಗೆ ಶನಿವಾರ 12.37 ಲಕ್ಷ ರೂ.ಗಳ ಚೆಕ್‌ ವಿತರಿಸಿ ಅವರು ಮಾತನಾಡಿದರು. ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಪ್ರತಿ ಕುಟುಂಬಕ್ಕೆ 8.25 ಲಕ್ಷ ರೂ. ನೀಡಲಾಗುವುದು. ಈ ಪ್ರಕರಣದಲ್ಲಿ ಮೂವರು ಹತ್ಯೆಗೀಡಾಗಿದ್ದಾರೆ. ಆದ್ದರಿಂದ ಮೂರು ಕುಟುಂಬಗಳಿಗೆ ಒಟ್ಟು 12,37,500 ರೂ.ಗಳನ್ನು ನೀಡಲಾಗುವುದು. ಪ್ರತಿ ಕುಟುಂಬಕ್ಕೆ ನೀಡಲಾಗುವ 8.25 ಲಕ್ಷ ರೂ.ಗಳಲ್ಲಿ ಠಾಣೆಯಲ್ಲಿ ಎಫ್‌ಐಆರ್‌ ತಕ್ಷಣ ಇದರಲ್ಲಿ ಅರ್ಧ ಹಣವನ್ನು ಮೊದಲ ಕಂತಿನಲ್ಲಿ ನೀಡಲಾಗುವುದು. ನ್ಯಾಯಾಲಯದಲ್ಲಿ ಪ್ರಕರಣ ರುಜುವಾತಾದ ನಂತರ ಉಳಿದ ಹಣವನ್ನು ನೀಡಲಾಗುವುದು. ದೌರ್ಜನ್ಯಕ್ಕೆ ಒಳಗಾದ ಕುಟುಂಬಗಳ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗಲಿದ್ದು, ಈ ಬಗ್ಗೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಒಮ್ಮೆಲೆ ದೊಡ್ಡ ಪ್ರಮಾಣದ ಹಣ ಬಂದ ತಕ್ಷಣ ಅಪಾರ ಪ್ರಮಾಣದ ಬಂಧು ಮಿತ್ರರು ಸೇರುತ್ತಾರೆ. ಹಣವನ್ನು ಬೇರೆಯವರಿಗೆ ನೀಡಿ ಕಳೆದುಕೊಳ್ಳಬಾರದು. ಹಣವನ್ನು ಪೋಲು ಮಾಡದೆ ದುಡಿಮೆಯ ಬಂಡವಾಳವನ್ನಾಗಿ ಮಾಡಿಕೊಳ್ಳಬೇಕು. ಇಲ್ಲವಾದರೆ ಬ್ಯಾಂಕ್‌ನಲ್ಲಿ ಸುರಕ್ಷಿತವಾಗಿಟ್ಟುಕೊಂಡು ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.

ಸರ್ಕಾರದಿಂದ ದೊರೆಯುವ ಇತರೆ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು. ಇದೀಗ ಕಂದಾಯ ಇಲಾಖೆಯಿಂದ ಅಂತ್ಯಸಂಸ್ಕಾರಕ್ಕೆ ನೀಡುವ ತಲಾ 5 ಸಾವಿರ ರೂ. ಚೆಕ್‌ ನೀಡಲಾಗಿದೆ. ಕುಟುಂಬದಲ್ಲಿನ ಸದಸ್ಯರ ಸಾವಿನ ನೋವನ್ನು ಭರಿಸಲು ಸಾಧ್ಯವಿಲ್ಲ. ಇದು ಕುಟುಂಬದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಇದಕ್ಕೆ ಪರ್ಯಾಯವಾಗಿ ಯಾವುದನ್ನು ನೀಡಲು ಸಾಧ್ಯವಿಲ್ಲ. ಆದರೆ ಮಾನವೀಯ ದೃಷ್ಟಿಯಿಂದ ಸರ್ಕಾರ ನೆರವು ನೀಡುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಂಜುಳಾ ಮಾತನಾಡಿ, ಎಸ್ಸಿ-ಎಸ್ಟಿ ದೌರ್ಜನ್ಯ ಪ್ರಕರಣದಡಿಯಲ್ಲಿ ಕುಟುಂಬಕ್ಕೆ ಪರಿಹಾರ ನೀಡಲಾಗುತ್ತಿದ್ದು, ವಿದ್ಯಾವಂತರಿದ್ದಲ್ಲಿ ಸರ್ಕಾರಿ ನೌಕರಿ ನೀಡಲಾಗುವುದು. ಅವಿದ್ಯಾವಂತರಾಗಿದ್ದರೆ ಮನೆ ಹಾಗೂ ಜಮೀನು ಎರಡನ್ನೂ ಒದಗಿಸಲು ಅವಕಾಶವಿದೆ. ಇದೀಗ ಎರಡು ಕುಟುಂಬಗಳ ಬ್ಯಾಂಕ್‌ ಖಾತೆಗೆ ಪರಿಹಾರದ ಹಣವನ್ನು ವರ್ಗಾವಣೆ ಮಾಡಲಾಗುವುದು. ಕುಟುಂಬದ ಜನರು ಅವಿದ್ಯಾವಂತರಾಗಿದ್ದರೆ ನಾಲ್ಕು ಎಕರೆ ಸರ್ಕಾರಿ ಜಮೀನು ನೀಡಲಾಗುವುದು. ಸರ್ಕಾರಿ ಜಮೀನು ಲಭ್ಯವಿಲ್ಲವಾದರೆ ಖಾಸಗಿಯಿಂದ ಎರಡು ಎಕರೆ ಖರೀದಿಸಿ ಕೊಡಲಾಗುವುದು. ಮೂರು ಕುಟುಂಬಗಳಿಗೆ 4,700 ರೂ. ಪಿಂಚಣಿಯನ್ನೂ ನೀಡಲಾಗುವುದು.ಈ ಎಲ್ಲಾ ಸೌಲಭ್ಯ ಪಡೆಯಲು ಈ ಪ್ರಕರಣ ನ್ಯಾಯಾಲಯದಲ್ಲಿ ರುಜುವಾತಾಗಬೇಕು. ಮೃತಪಟ್ಟ ಇಬ್ಬರ ಕುಟುಂಬದವರು ಈಗಾಗಲೇ ಖಾತೆಯ ಸಂಖ್ಯೆಯನ್ನು ನೀಡಿದ್ದಾರೆ. ಉಳಿದ ಒಬ್ಬರು ಬ್ಯಾಂಕ್‌ ಖಾತೆ ನೀಡಬೇಕಾಗಿದೆ ಎಂದರು.

Advertisement

ತಹಶೀಲ್ದಾರ್‌ ಎಂ. ಮಲ್ಲಿಕಾರ್ಜುನ, ಪಪಂ ಸದಸ್ಯ ಎನ್‌. ಮಹಾಂತಣ್ಣ, ಬಸಣ್ಣ, ರಾಜಸ್ವ ನಿರೀಕ್ಷಕ ಚೇತನ್‌, ಗ್ರಾಮಲೆಕ್ಕಾಧಿಕಾರಿ ಉಮಾ, ಪಿ. ಶಿವಣ್ಣ, ಎಂ.ವೈ.ಟಿ. ಸ್ವಾಮಿ, ಕೌಸರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next