Advertisement

ಕೋಟಾ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ

07:10 AM Mar 14, 2019 | Team Udayavani |

ಉನ್ನತ ಶಿಕ್ಷಣಕ್ಕೆ ಅವಕಾಶಗಳು ಅಪಾರ ಇದ್ದರೂ ಬಳಸಿಕೊಳ್ಳುವವರು ಕಡಿಮೆ. ಕೋಟಾ ಸೌಲಭ್ಯದಡಿ ಸೀಟು ಪಡೆಯಲು ಅವಕಾಶ ಎಲ್ಲ ವಿದ್ಯಾರ್ಥಿಗಳಿಗೂ ಇರುತ್ತದೆ. ಆದರೆ ಇದರ ಬಗ್ಗೆ ಮಾಹಿತಿಯ ಕೊರತೆಯಿಂದಾಗಿ ಹೆಚ್ಚಿನ ವಿದ್ಯಾರ್ಥಿಗಳು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಪಡೆಯಲಾಗದೆ ಒದ್ದಾಡುತ್ತಿರುತ್ತಾರೆ. ಇನ್ನೇನು ಕೆಲವೇ ದಿನಗಳಲ್ಲಿ ಉನ್ನತ ಶಿಕ್ಷಣಕ್ಕೆ ಪ್ರವೇಶಾತಿ ಪ್ರಕ್ರಿಯೆಗಳು ನಡೆಯಲಿದ್ದು, ಈ ಬಗ್ಗೆ ಈಗಲೇ ಮಾಹಿತಿ ತಿಳಿದು ಸಿದ್ಧರಾಗುವುದು ಬಹುಮುಖ್ಯ.

Advertisement

ವ್ಯಕ್ತಿಯ ಸರ್ವಾಂಗೀಣ ಬೆಳವಣಿಗೆಯಲ್ಲಿ ಶಿಕ್ಷಣದ ಪಾತ್ರ ಮಹತ್ತರವಾದದ್ದು. ಜ್ಞಾನ, ವ್ಯಕ್ತಿತ್ವ ವಿಕಸನದಲ್ಲಿ ಬಹು ಮುಖ್ಯ ಸ್ಥಾನ ಪಡೆದಿರುವ ಶಿಕ್ಷಣದಿಂದ ಯಾವುದೇ ಮಗು ವಂಚಿತವಾಗಬಾರದು ಎಂಬ ಕಾರಣಕ್ಕಾಗಿ ಸರಕಾರ ಕಡ್ಡಾಯ ಶಿಕ್ಷಣ ಕಾಯ್ದೆಗಳನ್ನು ರೂಪಿಸುತ್ತಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಅವಶ್ಯವಿರುವ ಅನೇಕ ಸೌಲಭ್ಯಗಳನ್ನು ಸರಕಾರ ಒದಗಿಸುತ್ತಿದೆ.

ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳ ಹಾವಳಿ ಹಾಗೂ ಹೆತ್ತವರ ವ್ಯಾಮೋಹದಿಂದಾಗಿ ಶಿಕ್ಷಣವೂ ಗಗನ ಕುಸುಮವಾಗುತ್ತಿದೆ. ಆಂಗ್ಲ ಮಾಧ್ಯಮದ ಪ್ರಭಾವದಿಂದಾಗಿ ಎಲ್‌ಕೆಜಿ, ಯುಕೆಜಿ, ಒಂದನೇ ತರಗತಿಗೆ ಸಾವಿರಾರು ರೂ. ವ್ಯಯಿಸಬೇಕಾಗಿದೆ. ಪದವಿ ಶಿಕ್ಷಣ ಮಾಡಬೇಕೆಂದರೆ ಲಕ್ಷಾಂತರ ರೂ. ಕೈಯಲ್ಲಿ ಇರಲೇಬೇಕು ಎಂಬಂತಾಗಿದೆ.

ವೃತ್ತಿ ಶಿಕ್ಷಣಗಳು ಹಣವುಳ್ಳವರ ಪಾಲು ಎಂಬಂತಾಗಿದೆ. ಇದಕ್ಕಾಗಿ ಎಲ್ಲ ವರ್ಗದ ಜನರು ಎಲ್ಲ ವಿಧದ ಶಿಕ್ಷಣಗಳನ್ನು ಪಡೆಯುವಂತಾಗಬೇಕು ಎಂಬ ಕಾರಣಕ್ಕಾಗಿ ಸರಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೋಟಾ ಪದ್ಧತಿಯನ್ನು ಜಾರಿಗೊಳಿಸಲಾಗಿದೆ.

ಅಂದರೆ ಮೀಸಲಾತಿ ವ್ಯವಸ್ಥೆ. ಈ ವರ್ಗದವರಿಗೆ ಇಷ್ಟು ಶೇಕಡಾ ಮೀಸಲಾತಿ ಎಂಬುದಾಗಿ ಸರಕಾರ ತೀರ್ಮಾನಿಸಿರುತ್ತದೆ. ಆ ಪ್ರಕಾರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಶುಲ್ಕಗಳಲ್ಲಿ ರಿಯಾಯಿತಿ ಪಡೆದುಕೊಳ್ಳಬಹುದು.

Advertisement

ವಿದ್ಯಾರ್ಥಿಗಳಿಗೆ ಲಾಭ
ದುಬಾರಿ ಬೆಲೆ ತೆತ್ತು ಶಿಕ್ಷಣ ಪಡೆಯಲು ಸಾಧ್ಯವಾಗದೇ ಇರುವ ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಸರಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆಯಲು ವಿವಿಧ ಕೋಟಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.

ಕಾಲೇಜಿಗೆ ಪ್ರವೇಶಾತಿ ಪಡೆಯುವ ವೇಳೆಗೆ ಕೋಟಾಗಳ ಬಗ್ಗೆ ಮಾಹಿತಿ ಪಡೆದು ಅರ್ಜಿ ಸಲ್ಲಿಸಿದರೆ ಶುಲ್ಕದಲ್ಲಿ ರಿಯಾಯಿತಿ ಪಡೆಯಬಹುದಾಗಿದೆ.

ವಿವಿಧ ರೀತಿಯ ಕೋಟಾ ಸೌಲಭ್ಯ
ಸರಕಾರಿ ಕಾಲೇಜುಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಶಿಕ್ಷಣದಲ್ಲಿ ವಿವಿಧ ರೀತಿಯ ಕೋಟಾಗಳಿವೆ. ಶೇ. 100ರಲ್ಲಿ ಶೇ. 50ರಷ್ಟು ಸಾಮಾನ್ಯ ವರ್ಗಕ್ಕೆ ಇನ್ನೂ ಶೇ. 50ರಷ್ಟು ವಿವಿಧ ಕೋಟಾಗಳಿಗೆ ಮೀಸಲಿಡಲಾಗಿದೆ. ಶೇ. 50ರಲ್ಲಿ ಸಾಮಾನ್ಯ ವಿದ್ಯಾರ್ಥಿಗಳು ನಿಗದಿತ ಶುಲ್ಕ ಪಾವತಿಸಿ ಪ್ರವೇಶಾತಿ ಪಡೆಯಬಹುದಾಗಿದೆ. ಇನ್ನುಳಿದ ಶೇ.50ರಲ್ಲಿ ಎಸ್‌ಸಿ ಎಸ್ಟಿ , ಮಾಜಿ ಸೈನಿಕರ ಸಂಬಂಧಿಗಳು, ಅಂಗವಿಕಲರು, ಎನ್‌ಸಿಸಿ, ಎನ್ನೆಸ್ಸೆಸ್‌ (ರಾಷ್ಟ್ರಮಟ್ಟದಲ್ಲಿ ಭಾಗವಹಿಸುವಿಕೆ) ಕ್ರೀಡೆ( ವಿವಿ ಮಟ್ಟದಲ್ಲಾದರೂ ಪಾಲ್ಗೊಳ್ಳಬೇಕು) ಸ್ಕೌಟ್ಸ್‌, ಸಾಂಸ್ಕೃತಿಕ ಕಾರ್ಯಕ್ರಮ, ವಿಶ್ವವಿದ್ಯಾನಿಲಯದ ಸಿಬಂದಿ, ನಾರ್ತ್‌- ಈಸ್ಟ್‌ ರಾಜ್ಯದ ವಿದ್ಯಾರ್ಥಿ, ಜಮ್ಮು ಕಾಶ್ಮೀರದ ವಿದ್ಯಾರ್ಥಿಗಳಿಗೆ ಮೀಸಲಾತಿ ಸೌಲಭ್ಯಗಳಿವೆ. ಆ ಸೌಲಭ್ಯಗಳಲ್ಲಿ ಅರ್ಹ ವಿದ್ಯಾರ್ಥಿಗಳು ಕಾಲೇಜುಗಳಲ್ಲಿ ಸೀಟು ಪಡೆದುಕೊಳ್ಳಬಹುದಾಗಿದೆ. ರಾಜ್ಯ ಸರಕಾರ ವೃತ್ತಿ ಶಿಕ್ಷಣ ಕೋರ್ಸ್‌ಗಳಲ್ಲಿಯೂ ಸರಕಾರಿ ಕೋಟಾದ ಸೀಟುಗಳನ್ನು ಕಲ್ಪಿಸಿದೆ. ವಿದ್ಯಾರ್ಥಿಗಳು ಯಾವ ಕೋಟಾಗಳಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು ಎಂದು ತೀರ್ಮಾನಿಸಿ ಅರ್ಜಿ ಸಲ್ಲಿಸಬಹುದು.

ಕೋಟಾ ಸೌಲಭ್ಯ ಪಡೆಯಬೇಕಾದರೆ
ವಿಶ್ವವಿದ್ಯಾನಿಲಯಗಳಲ್ಲಿ ಇರುವ ಕೋಟಾಗಳನ್ನು ಪಡೆಯಲು ಎಲ್ಲರಿಗೂ ಹಕ್ಕು ಇರುತ್ತದೆ. ಆದರೆ ಬಹುತೇಕ ಮಂದಿಗೆ ಅದರ ಅರಿವಿರುವುದಿಲ್ಲ. ಆ ಕಾರಣಕ್ಕೆ ಕೆಲವು ಮೀಸಲಾತಿ ಸೀಟುಗಳು ಹಾಗೆಯೇ ಉಳಿಯುತ್ತವೆ. ಈ ಎಲ್ಲ ಕೋಟಾಗಳನ್ನು ಪಡೆಯಲು ಅರ್ಹರಿರುವ ವಿದ್ಯಾರ್ಥಿಗಳು ಸೂಕ್ತ ದಾಖಲೆಗಳನ್ನು ಸಲ್ಲಿಸಬೇಕು.

ಎಸ್ಸಿ, ಎಸ್ಟಿ ಮೀಸಲಾತಿಗಾಗಿ ಜಾತಿ ದೃಢಪತ್ರವನ್ನು ಶಾಲಾ ಪ್ರವೇಶಾತಿ ಅರ್ಜಿಯೊಂದಿಗೆ ಸಲ್ಲಿಸಬೇಕು. ಇನ್ನುಳಿದಂತೆ ಎಲ್ಲ ಮೀಸಲಾತಿಗೂ ಅದಕ್ಕೆ ಸಂಬಂಧಿಸಿದ ಸರಕಾರಿ ದಾಖಲೆಯೊಂದಿಗೆ ಸಲ್ಲಿಸಬೇಕು. ಕೋಟಾ ಸೌಲಭ್ಯದಲ್ಲಿ ಸೀಮಿತ ಸೀಟುಗಳು ಇರುತ್ತವೆ. ಆದ್ದರಿಂದ ಆದಷ್ಟು ಬೇಗನೇ ಅರ್ಜಿಗಳನ್ನು ಸಲ್ಲಿಸಿದರೆ ಕಾಲೇಜಿಗೆ ಪ್ರವೇಶಾತಿ ಸಿಗುತ್ತದೆ. ಕೋಟಾದಲ್ಲಿ ಕಾಲೇಜಿಗೆ ಪ್ರವೇಶಾತಿ ದೊರೆತರೆ ಶುಲ್ಕದಲ್ಲಿ ರಿಯಾಯಿತಿ ಇರುತ್ತದೆ. 

ಕೋಟಾ ಸೌಲಭ್ಯದ ಮಾಹಿತಿ ಪಡೆಯಿರಿ
ಎಲ್ಲ ಕಾಲೇಜುಗಳಲ್ಲೂ ವಿವಿಧ ಬಗೆಯ ಮೀಸಲಾತಿ ಸೀಟುಗಳು ಇರುತ್ತವೆ. ಆದರೆ ವಿದ್ಯಾರ್ಥಿಗಳು ಅದನ್ನು ಗಮನಿಸದೆ ಕಾಲೇಜು ಸೇರುತ್ತಾರೆ. ಇದರಿಂದ ಸುಮ್ಮನೆ ಕಾಲೇಜು ಶುಲ್ಕ ವ್ಯಯಿಸಬೇಕಾಗುತ್ತದೆ. ಕಾಲೇಜು ಸೇರುವ ಮುನ್ನ ಮೀಸಲಾತಿ ಬಗ್ಗೆ ಮಾಹಿತಿ ಪಡೆದುಕೊಳ್ಳಿ. 
– ಡಾ| ಉದಯ್‌ ಕುಮಾರ್‌,
ಪ್ರಾಂಶುಪಾಲ, ಮಂಗಳೂರು ವಿವಿ ಕಾಲೇಜು

ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next