Advertisement

ಕೀಟದಿಂದ ಭತ್ತ ರಕ್ಷಿಸಲು ಕ್ವಿನಾಲ್‌ ಫಾಸ್‌ ಬಳಸಿ

03:00 PM Oct 27, 2020 | Suhan S |

ತಿಪಟೂರು: ನೀರಾವರಿ ಸೌಲಭ್ಯವಿರುವ ತಾಲೂಕಿನ ಹಲವು ಕಡೆಗಳಲ್ಲಿ ಆಹಾರ  ಧಾನ್ಯ ಬೆಳೆಯಾಗಿ ಭತ್ತವನ್ನು ಬೆಳೆದಿದ್ದು ಪ್ರಸ್ತುತ ತೆಂಡೆ ಹಾಗೂ ಹಾಲು ತುಂಬುವ ಹಂತದಲ್ಲಿರುವ ಭತ್ತದ ಬೆಳೆಗೆ ಕೊಳವೆ ಹುಳು ಹಾಗೂ ತೆನೆ ತಿಗಣೆ ಬಾಧೆ ಕಂಡು ಬಂದಿದ್ದು, ಅವುಗಳ ಹತೋಟಿಗೆ ಕ್ವಿನಾಲ್‌ ಫಾಸ್‌ 2.0 ಮಿ.ಲೀ ಪ್ರತಿ ಲೀಟರ್‌ ನೀರಿಗೆ ಬೆರಸಿ ಸಿಂಪಡಣೆ ಮಾಡಬೇಕೆಂದು ಸಹಾಯಕ ಕೃಷಿ ನಿರ್ದೇಶಕ ಡಾ. ಎನ್‌. ಕೆಂಗೇಗೌಡ ಹೇಳಿದರು.

Advertisement

ತಾಲೂಕಿನ ಮದ್ಲೆಹಳ್ಳಿ ಗ್ರಾಮದಲ್ಲಿನ ರೈತರ ತಾಕು ಪರಿಶೀಲಿಸಿ ತಾಂತ್ರಿಕ ಮಾಹಿತಿ ನೀಡಿದ ಅವರು, ಕೊಳವೆಹುಳುವಿನ ಮರಿಹುಳು ಗರಿಗಳ ತುದಿಯನ್ನು ಕತ್ತರಿಸಿ ಕೊಳವೆಗಳನ್ನು ನಿರ್ಮಿಸಿಕೊಳ್ಳುತ್ತವೆ. ಕೊಳವೆಯಲ್ಲಿ ಹಸಿರು ಹುಳು ಕೊಳವೆ ಸಮೇತ ಗರಿಗಳ ತಳಭಾಗಕ್ಕೆ ಅಂಟಿಕೊಂಡು ಗರಿಗಳನ್ನು ಕೆರೆದು ತಿನ್ನುತ್ತವೆ. ಅಂಥ ಗರಿಗಳನ್ನು ವೀಕ್ಷಿಸಿದಾಗ ಏಣಿಯಾಕಾರದ ಗೆರೆಗಳು ಕಂಡುಬಂದಿದ್ದು, ಹುಳುಬಿದ್ದ ಗದ್ದೆಯಲ್ಲಿ ಹಸಿರು ಕೊಳವೆಗಳು ನೀರಿನಲ್ಲಿ ತೇಲಾಡುತ್ತಿರುತ್ತವೆ.

ಸಾಮಾನ್ಯವಾಗಿ ಕೊಕ್ಕರೆಗಳು ಹುಳು  ಬಿದ್ದ ಗದ್ದೆಯಲ್ಲಿರುತ್ತವೆ. ಗದ್ದೆಯ ನೀರಿನ ಮೇಲೆ ಸೀಮೆಎಣ್ಣೆಯನ್ನು ಅಲ್ಲಲ್ಲಿ ಸುರಿದು ಪೈರನ್ನು ಹಗ್ಗದಿಂದ ಅಲ್ಲಾಡಿಸಿದರೆ ಹುಳುಗಳು ನೀರಿಗೆ ಬಿದ್ದು ಸಾಯುತ್ತವೆ. ಕೀಟದ ಹಾವಳಿ ತೀವ್ರವಾಗಿದ್ದಲ್ಲಿ ಕ್ವಿನಾಲ್‌ಫಾಸ್‌ 2.0 ಮಿ.ಲೀ ಪ್ರತಿ ಲೀಟರ್‌ ನೀರಿಗೆ ಬೆರಸಿ ಸಿಂಪಡಿಸಬೇಕು ಎಂದು ಸಲಹೆ ನೀಡಿದರು.

ಹಾಲು ತುಂಬುವ ಹಂತದಲ್ಲಿ ತಿಳಿ ಹಸಿರು-ಕಂದು ಬಣ್ಣದ ದೋಣಿಯಾಕಾರದ ತೆನೆ ತಿಗಣೆಗಳು ಕಾಳಿನಿಂದ ರಸ ಹೀರುತ್ತವೆ. ಇದರಿಂದ ಇಳುವರಿ ಕುಂಠಿತವಾಗಲಿದ್ದು, ಮೆಲಾಥಿಯಾನ್‌ 50 ಇಸಿ ಕೀಟನಾಶಕವನ್ನು ಪ್ರತಿ ಲೀಟರ್‌  ನೀರಿಗೆ 2.0 ಮಿ.ಲೀ ಬೆರೆಸಿ ಸಿಂಪಡಿಸ  ಬೇಕು. ನೊಣವಿನಕೆರೆ ಹೋಬಳಿ ನೆಲ್ಲಿಕೆರೆ ವ್ಯಾಪ್ತಿಯಲ್ಲಿ ಭತ್ತಕ್ಕೆ ಇಲಿಗಳಿಂದ ಹಾನಿಯಾಗಿರುವುದನ್ನು ಗಮನಿಸಿದ್ದು, ಗದ್ದೆ ಸುತ್ತ ಹುಲ್ಲು ಜಾತಿಯ ಕಳೆಗಳನ್ನು ತೆಗೆದು ಸ್ವಚ್ಛವಾಗಿಡಬೇಕು ಜೊತೆಗೆಗದ್ದೆಗಳ ಸುತ್ತಲೂ ಬದುಗಳಿಗೆ ಪೊರೇಟ್‌ ಹಾಕುವುದರಿಂದ ಇಲಿಗಳ ಕಾಟವನ್ನು ತಡೆಗಟ್ಟಬಹುದು ಎಂದರು.

ತಂತ್ರಜ್ಞಾನದಿಂದ ರಾಸುಗಳ ಆರೋಗ್ಯ ರಕ್ಷಣೆ :

Advertisement

ಮಧುಗಿರಿ: ಆಧುನಿಕ ತಂತ್ರಜ್ಞಾನ ಬಳಸಿ ಹಾಲು ಉತ್ಪಾದಿಸುವ ರಾಸುಗಳ ಆರೋಗ್ಯವನ್ನು ಕಾಪಾಡಬಹುದು ಎಂದು ತುಮುಲ್‌ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್‌ ಹೇಳಿದರು. ಪಟ್ಟಣದ ಶೀಥಲೀಕರಣ ಘಟಕದಲ್ಲಿ ಮಾಸಿಕ ಸಭೆಯಲ್ಲಿ ವಿವಿಧ ಸೌಲಭ್ಯಗಳ ಫ‌ಲಾನುಭವಿಗಳಿಗೆ ಪರಿಹಾರದ ಚೆಕ್‌ ವಿತರಿಸಿ ಮಾತನಾಡಿ, ಈಗಾಗಲೇ ಡೇರಿಯಲ್ಲಿನ ತಂತ್ರಜ್ಞಾನದಿಂದ ತೂಕ ಮತ್ತು ಅಳತೆಯನ್ನು ನಿಖರವಾಗಿ ನಿರ್ವಹಣೆ ಮಾಡಲಾಗುತ್ತಿದ್ದು, ಈಗ ಟ್ಯಾಬ್‌ ವಿತರಣೆಯಿಂದ ಡೇರಿ ವ್ಯಾಪ್ತಿಯ ಸಂಪೂರ್ಣ ರಾಸುಗಳ ಮಾಹಿತಿ ಸಂಗ್ರಹಿಸಬಹುದು ಎಂದರು.

ಅಲ್ಲದೆ ರಾಸುಗಳಿಗೆ ಕಾಡುವ ರೋಗದ ಬಗ್ಗೆ ಮಾಹಿತಿ ಪಡೆದು ಶೀಘ್ರವಾಗಿ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ. ಇದರೊಂದಿಗೆ ರಾಸುಗಳಿಗೆ ನೀಡುವ ಪೌಷ್ಟಿಕಾಂಶಯುಕ್ತ ಆಹಾರದ ಬಗ್ಗೆಯೂ ಸಂವಹನ ನಡೆಸಬಹುದು. ಹಿಂದೆ ಎಲ್ಲರೂ ರೈತಕಲ್ಯಾಣ ಟ್ರಸ್ಟ್‌ನ್ನು ವಿರೋಧಿಸುತ್ತಿದ್ದರು. ಆದರೆ ರೈತರನ್ನೇ ಸಭೆಯಲ್ಲಿ ಕರೆದು ಚರ್ಚಿಸಿ ಜಾರಿಗೊಳಿಸಿದ ನಂತರ ಈಗ ಸಾವಿರಾರೂ ಹೈನುಗಾರ ಕುಟುಂಬಗಳು ಈ ಟ್ರಸ್ಟಿನ ಲಾಭ ಪಡೆಯುತ್ತಿದ್ದಾರೆ. ಇದರಲ್ಲಿ ವಿದ್ಯಾಭ್ಯಾಸ, ಆರೋಗ್ಯ ಶೇ.75ರಷ್ಟು ಸಹಾಯಧನ ನೀಡಿದ್ದೇವೆ. ಪ್ರಸ್ತುತ ಡೇರಿಯಲ್ಲಿ ಪಡೆಯುವ ಹಾಲಿನ ಗುಣಮಟ್ಟ ತಿಳಿಯಲು 75 ರೂ. ಸಬ್ಸಿಡಿ ದರದಲ್ಲಿ ಮಿನರಲ್‌ ಮಿಶ್ರಣ ನೀಡಲಾಗುತ್ತಿದೆ ಎಂದರು.

ಮೊದಲ ಹಂತವಾಗಿ ತಾಲೂಕಿನ 25 ಡೇರಿ ಕಾರ್ಯದರ್ಶಿಗಳಿಗೆ ಟ್ಯಾಬ್‌ ವಿತರಿಸಲಾಯಿತು. 18 ಮೃತ ರಾಸುಗಳ ಸಹಾಯ ಧನವನ್ನು ಮಾಲೀಕರಿಗೆ ನೀಡಿದ್ದು, ತಿಪ್ಪಗೊಂಡನ ಹಳ್ಳಿ ಡೇರಿ ಕಟ್ಟಡಕ್ಕಾಗಿ 6.5 ಲಕ್ಷ ರೂ. ಪರಿಹಾರದ ಚೆಕ್‌ ವಿತರಿಸಿದರು. ತಾ. ವಿಸ್ತರಣಾಧಿಕಾರಿಗಳಾದ ಶಂಕರ್‌ನಾಗ್‌, ಗಿರೀಶ್‌, ಶಿಲ್ಪಶ್ರೀ, ಮಹಾಲಕ್ಷ್ಮೀ, ಪಶು ವೈದ್ಯ ಡಾ.ದೀಕ್ಷಿತ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next