Advertisement

ಅಕ್ರಮ ಹಣ ಸಂಪಾದನೆಗೆ ವಾಟ್ಸಾಪ್‌ ಗ್ರೂಪ್‌ ಬಳಕೆ; ಲಕ್ಕಿ ಡ್ರಾ ಕೋಳಿ ಬಹುಮಾನ, ಪ್ರಕರಣ ದಾಖಲು

11:01 PM Nov 10, 2024 | Team Udayavani |

ಉಡುಪಿ: ವಾಟ್ಸಾಪ್‌ ಗ್ರೂಪ್‌ ರಚಿಸಿ, ಕೋಳಿ ಬಹುಮಾನವಿರಿಸಿ, ಲಕ್ಕಿ ಡ್ರಾ ನಡೆಸಿ ಅಕ್ರಮ ಹಣ ಮಾಡಲು ಯತ್ನಿಸುತಿದ್ದ ಶಿರ್ವ ಗ್ರಾಮದ ಮನೋಜ್‌ (31) ವಿರುದ್ಧ ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಸೆನ್‌ ಅಪರಾಧ ಪೊಲೀಸ್‌ ಠಾಣೆಗೆ ಬಾತ್ಮಿದಾರರೊಬ್ಬರು ಕರೆ ಮಾಡಿ ಕಾಪು ತಾಲೂಕಿನ ಶಿರ್ವ ಗ್ರಾಮದ ಶಿರ್ವಾ ಪೇಟೆಯ ಅಂಗಡಿಯೊಂದರಲ್ಲಿ ವ್ಯಕ್ತಿಯೋರ್ವ ತನ್ನ ಸ್ವಂತ ಲಾಭಕ್ಕೋಸ್ಕರ ಮೊಬೈಲ್‌ ಫೋನ್‌ನಲ್ಲಿ ವಾಟ್ಸಪ್‌ ಗ್ರೂಪ್‌ ಮಾಡಿಕೊಂಡು ಕೋಳಿಗಳನ್ನು ಬಹುಮಾನವಾಗಿ ಇರಿಸಿ ಲಕ್ಕಿ ಡ್ರಾ ನಡೆಸಿಕೊಂಡು ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದಾನೆ ಎಂದು ಮಾಹಿತಿ ನೀಡಿದ್ದರು.

ಈ ಮಾಹಿತಿ ಆಧರಿಸಿ ಪೊಲೀಸರು ಸ್ಥಳಕ್ಕೆ ತೆರಳಿದ್ಧ ವೇಳೆ ಶಿರ್ವ ಪೇಟೆಯ ಬಳಿಯ ಬಾಲಾಜಿ ಫ್ಯಾಮಿಲಿ ಹೊಟೇಲ್‌ ಸಮೀಪ ಅಂಗಡಿಯೊಂದರಲ್ಲಿ ವ್ಯಕ್ತಿಯೊಬ್ಬ ಮೊಬೈಲ್‌ ಹಿಡಿದುಕೊಂಡಿರುವುದು ಕಂಡುಬಂದಿದೆ. ಈತನೇ ಲಕ್ಕಿ ಡ್ರಾ ಅಕ್ರಮ ದಂಧೆಯಲ್ಲಿ ತೊಡಗಿಕೊಂಡಿರುವ ವ್ಯಕ್ತಿಯೆಂದು ಪೊಲೀಸರು ಖಚಿತ ಖಚಿತಪಡಿಸಿಕೊಂಡು ಆತನ ಬಳಿಗೆ ಹೋದಾಗ ಆತ ಪೊಲೀಸ್‌ ಸಮವಸ್ತ್ರ ಕಂಡು ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದು, ಸುತ್ತುವರಿದು ಆತನನ್ನು ಪರಾರಿಯಾಗಲು ಕಾರಣ ಪ್ರಶ್ನಿಸಿ, ವಿಚಾರಣೆಗೆ ಒಳಪಡಿಸಿದಾಗ ದಂಧೆಯನ್ನು ಒಪ್ಪಿಕೊಂಡಿದ್ದಾನೆ.

340 ಮಂದಿಯಿರುವ ವಾಟ್ಸಾಪ್‌ ಗ್ರೂಫ್ ಮಾಡಿಕೊಂಡು ಆ ಗ್ರೂಪ್‌ನಲ್ಲಿರುವ ಸದಸ್ಯರಿಂದ ತಲಾ 200 ರೂ. ಹಣವನ್ನು ಗೂಗಲ್‌ ಪೇ ಮೂಲಕ ಹಾಕಿಸಿಕೊಂಡು ಟೋಕನ್‌ ಮೂಲಕ ಡ್ರಾ ಮಾಡಿ ವಿಜೇತರಾದವರಿಗೆ ಕೋಳಿಯನ್ನು ಅಥವಾ ಕ್ಯಾಶ್‌ ಬ್ಯಾಕ್‌ ರೂಪದಲ್ಲಿ ಬಹುಮಾನ ನೀಡಿ ಅಕ್ರಮವಾಗಿ ಹಣವನ್ನು ಸಂಪಾದನೆ ಮಾಡುತ್ತಿರುವ ಬಗ್ಗೆ ಆತ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.

ಮನೋಜನ ವಶದಲ್ಲಿ ದೊರೆತ 5,600 ರೂ. ನಗದು, 10 ಸಾವಿರ ರೂ. ಮೌಲ್ಯದ ಮೊಬೈಲ್‌ ಫೋನ್‌ , 5 ಸಾವಿರ ರೂ. ಮೌಲ್ಯದ ಇನ್ನೊಂದು ಮೊಬೈಲ್‌ ಫೋನ್‌, 4 ಲಕ್ಷ ರೂ. ಮೌಲ್ಯದ ಕಾರು, 17 ಟೋಕನ್‌ ಕಾಯಿನ್‌, ಪ್ಲಾಸ್ಟಿಕ್‌ ಜಾರ್‌ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next