ಸುರತ್ಕಲ್: ಕೇಂದ್ರ ಸರಕಾರ ಪ್ಲಾಸ್ಟಿಕ್ ನಿಷೇಧಿಸಿ ತಿಂಗಳುಗಳು ನಾಲ್ಕಾದರೂ ವಾರದ ಸಂತೆಗಳಲ್ಲಿ ಕೆಜಿ ಗಟ್ಟಲೆ ಪ್ಲಾಸ್ಟಿಕ್ ಬಳಕೆಯಾಗುತ್ತಿದದ್ದು, ಎಲ್ಲಿಂದ ತರುತ್ತಾರೆ ಹಾಗೂ ಎಲ್ಲಿ ಉತ್ಪಾದನೆಯಾಗುತ್ತಿದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಇದರ ನಿಯಂತ್ರಣಕ್ಕೆ ಪಾಲಿಕೆ ದಂಡನಾತ್ಮಕ ಕ್ರಮ ಕೈಗೊಂಡರೂ ಇದುವರೆಗೂ ನಿಯಂತ್ರಣ ಸಾಧ್ಯವಾಗದೆ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಸುರತ್ಕಲ್‌ನಲ್ಲಿ ಬುಧವಾರ ಸಂತೆಯಿದ್ದರೆ ವಾರದ ಏಳು ದಿನವೂ ವಿವಿಧ ವಾರ್ಡ್ ವ್ಯಾಪ್ತಿಯಲ್ಲಿ ಸಂತೆ ಜರಗುತ್ತದೆ. ಇಲ್ಲಿ ಕೆಜಿ ಗಟ್ಟಲೆ ಪ್ಲಾಸ್ಟಿಕ್‌ನಲ್ಲಿ ತರಕಾರಿ, ತಿಂಡಿ ತಿನಿಸುಗಳನ್ನು ಕಟ್ಟಿಕೊಡಲಾಗುತ್ತದೆ.
ಭಾರೀ ಪ್ರಮಾಣದಲ್ಲಿ ಹೊಟೇಲ್ ಉದ್ಯಮ, ಕ್ಯಾಂಟೀನ್, ಕ್ಯಾಟರಿಂಗ್ ಉದ್ಯಮದ ಮಂದಿ ಚೀಲ, ವಾಹನ ಬಳಕೆಯಾಗುತ್ತದೆ. ಆದರೆ ನಿತ್ಯ ಕೆಲಸ ಬಿಟ್ಟು ಬರುವ ಮಂದಿ, ಬೇರೆ ಕೆಲಸ ನಿಮಿತ್ತ ಬರುವ ಗ್ರಾಹಕರು ಚೀಲ ತರದೆ ಪ್ಲಾಸ್ಟಿಕ್ ಚೀಲವನ್ನೇ ಅವಲಂಭಿಸಿದ್ದಾರೆ. ತರಕಾರಿ, ತಿಂಡಿ ವ್ಯಾಪಾರಿಗಳೂ ಬಟ್ಟೆ ಚೀಲ ಬಳಕೆ ಮಾಡದೆ ಸುಲಭವಾಗಿ, ಕಡಿಮೆ ಖರ್ಚಿನಲ್ಲಿ ಸಿಗುವ ಪ್ಲಾಸ್ಟಿಕ್ ಚೀಲಗಳಲ್ಲೇ ಗ್ರಾಹಕರಿಗೆ ವಸ್ತುಗಳನ್ನು ಕೊಡುತ್ತಿದ್ದಾರೆ. ಒಣ ಸಾಮಾನುಗಳನ್ನು ಚೀಲದಲ್ಲಿ ಕೊಂಡು ಹೋಗಬಹುದು. ಆದರೆ ಮೀನು, ಹಸಿ ವಸ್ತುಗಳನ್ನು ಬಟ್ಟೆ ಚೀಲದಲ್ಲಿ ಹೇಗೆ ಕಟ್ಟಿಕೊಡುವುದು ಎಂಬ ಪ್ರಶ್ನೆಯೂ ಉದ್ಭವವಾಗುತ್ತದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಇನ್ನೂ ಆಗಿಲ್ಲ ಎನ್ನುತ್ತಾರೆ ವ್ಯಾಪಾರಿಗಳು.
ವಾಕ್ಸಮರ
ಈ ನಡುವೆ ದಂಡ ಹಾಕಲು ಮುಂದಾದ ಅಧಿಕಾರಿಗಳು ಹಾಗೂ ವ್ಯಾಪಾರಿಗಳ ನಡುವೆ ವಾಕ್ಸಮರ ನಡೆಯುವುದು ಸಾಮಾನ್ಯವಾಗಿದೆ. ಕೈಗಾರಿಕೆ ಬಂದ್ ಮಾಡಿ ಎಂದು ಒತ್ತಾಯ ವ್ಯಾಪಾರಿಗಳದ್ದು, ಪರ್ಯಾಯ ವ್ಯವಸ್ಥೆಗೂ ಪಾಲಿಕೆ ಮುಂದಾಗಲಿ ಎಂಬ ಆಗ್ರಹವೂ ಇದೆ. ನಿತ್ಯ ತ್ಯಾಜ್ಯ ವಿಲೇವಾರಿ ಸಂದರ್ಭ ಭಾರೀ ಪ್ರಮಾಣದಲ್ಲಿ ಪ್ಲಾಸ್ಟಿಕ್ ತೊಟ್ಟೆಗಳು ಈಗಲೂ ಪಚ್ಚನಾಡಿಯ ಡಂಪಿಂಗ್ ಯಾರ್ಡ್ ಸೇರುತ್ತವೆ.
ಅಧಿಕಾರಿಗಳಿಂದ ತಪಾಸಣೆ
ಬುಧವಾರ ಸಂತೆಯ ದಿನ ಪಾಲಿಕೆ ಅಧಿಕಾರಿಗಳಿಂದ ದಿಢೀರ್ ಭೇಟಿ ಹಾಗೂ ತಪಾಸಣೆ ನಡೆಯಿತು. ಈ ಸಂದರ್ಭ ಆರೋಗ್ಯ ವಿಭಾಗದ ಅಧಿಕಾರಿಗಳಾದ ಸೀನಿಯರ್ ಹೆಲ್ತ್‌ಇನ್‌ಸ್ಪೆಕ್ಟರ್ ಸಂಜಯ್, ನಟೇಶ್, ಮಲೇರಿಯಾ ವಿಭಾಗದ ಸೂಪರ್‌ವೈಸರ್ ಪ್ರವೀಣ್, ಚೇತನ್, ಆ್ಯಂಟನಿ ವೇಸ್ಟ್ ಸುಭಾಷ್,ಯೋಗೀಶ್, ಸಾಫಿನ್ ಮತ್ತಿತರರು ಪಾಲ್ಗೊಂಡಿದ್ದರು.
ನಿಯಂತ್ರಿಸಲು ಪ್ರಯತ್ನ: ವಾರದ ಸಂತೆಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡದಂತೆ ವ್ಯಾಪಾರಿಗಳಿಗೆ, ಸಾರ್ವಜನಿಕರಿಗೆ ಮೈಕ್ ಮೂಲಕ ಮಾಹಿತಿ ನೀಡುತ್ತಾ ಬರುತ್ತಿದ್ದೇವೆ. ಹೆಚ್ಚಿನ ಮಂದಿ ಕೈಚೀಲ ತರುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಉಳಿದಂತೆ ಇನ್ನೂ ಪ್ಲಾಸ್ಟಿಕ್ ಚೀಲಗಳು ಬಳಕೆಯಾಗುತ್ತಿವೆ. ದಂಡ ಸಹಿತ ಕಾನೂನು ಕ್ರಮ ಜರಗಿಸಿ ನಿಯಂತ್ರಿಲು ಪ್ರಯತ್ನ ನಡೆಸಿದ್ದೇವೆ. ಬೈಕಂಪಾಡಿ ಸಹಿತ ಕೈಗಾರಿಕೆ ಪ್ರದೇಶದಲ್ಲಿ ಇನ್ನೂ ಪ್ಲಾಸ್ಟಿಕ್ ಉತ್ಪಾದನೆಯಾಗುತ್ತಿದೆಯೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿ ಈ ಬಗ್ಗೆ ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿದೆ. –
ಸುಶಾಂತ್, ಹಿರಿಯ ಪರಿಸರ ಅಧಿಕಾರಿ ಮನಪಾ