ತಿರುವನಂತಪುರಂ: ನೀವು ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಶಬರಿಮಲೆಗೆ ಹೊರಡುತ್ತಿದ್ದೀರಾ ಹಾಗಾದರೆ ಈ ಸುದ್ದಿಯನ್ನು ಓದಲೇಬೇಕು. ಶಬರಿಮಲೆಯ ಮೇಲೆ ನೆಲೆಯಾಗಿರುವ ಅಯ್ಯಪ್ಪ ಸನ್ನಿಧಾನದ ಅವರಣದಲ್ಲಿ ಇನ್ನು ಭಕ್ತಾದಿಗಳಿಗೆ ಮೊಬೈಲ್ ಫೋನುಗಳನ್ನು ಬಳಸಲು ಅನುಮತಿ ಇರುವುದಿಲ್ಲ.
ಬುಧವಾರ ತಿರುವಾಂಕೂರಿನಲ್ಲಿ ನಡೆದ ತಿರುವಾಂಕೂರು ದೇವಸ್ವಂ ಮಂಡಳಿಯ ಮಹತ್ವದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಕಟನೆ ತಿಳಿಸಿದೆ. ಸುರಕ್ಷತೆಯ ದೃಷ್ಟಿಯಿಂದ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವ ಉದ್ದೇಶ ನಮ್ಮದಾಗಿದೆ ಎಂದು ದೇವಾಲಯದ ಆಡಳಿತನ್ನು ನಿರ್ವಹಿಸುವ ದೇವಸ್ವಂ ಬೋರ್ಡ್ (ಟಿಡಿಬಿ) ತನ್ನ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.
ಅಯ್ಯಪ್ಪ ಸನ್ನಿಧಾನದಲ್ಲಿ ಅತೀ ಪವಿತ್ರ ಸ್ಥಳವೆಂದು ಭಕ್ತಾದಿಗಳು ಶತಶತಮಾನಗಳಿಂದ ನಂಬಿಕೊಂಡು ಬರುತ್ತಿರುವ ದೇವಸ್ಥಾನದ ಗರ್ಭಗುಡಿಯ ಕೆಲವು ಚಿತ್ರಗಳು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ದೇವಸ್ವಂ ಮಂಡಳಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಅಯ್ಯಪ್ಪ ದೇವಸ್ಥಾನದ ಪವಿತ್ರ ಹದಿನೆಂಟು ಮೆಟ್ಟಿಲಿನಿಂದ ಹಿಡಿದು ಗರ್ಭಗುಡಿಯ ಮುಂಭಾಗದಲ್ಲಿರುವ ‘ತಿರುಮುಟ್ಟಂ’ವರೆಗೆ ಮೊಬೈಲ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಇರುಮುಡಿಧಾರಿಗಳಾಗಿ ಬರುವ ವ್ರತಧಾರಿಗಳು ‘ವಲ್ಲಿಯ ನಡಪಾಂಡಲ್’ (ಹದಿನೆಂಟು ಮೆಟ್ಟಿಲಿರುವ ಜಾಗಕ್ಕೆ ನಡೆದುಕೊಂಡು ಹೋಗುವ ದಾರಿ) ಕಡೆಯಲ್ಲೇ ತಮ್ಮ ಮೊಬೈಲ್ ಫೋನ್ ಗಳನ್ನು ಸ್ವಿಚ್ಡ್ ಆಫ್ ಮಾಡಬೇಕಾಗಿರುತ್ತದೆ.
ಈ ನಿಯಮವನ್ನು ಪ್ರಥಮ ಬಾರಿಗೆ ಉಲ್ಲಂಘಿಸುವವರಿಗೆ ಎಚ್ಚರಿಕೆಯನ್ನು ನೀಡಲಾಗುತ್ತದೆ ಮತ್ತು ಪದೇ ಪದೇ ಈ ನಿಯಮವನ್ನು ಉಲ್ಲಂಘಿಸಿ ನಿಷೇಧಿತ ಸ್ಥಳದಲ್ಲಿ ಮೊಬೈಲ್ ಬಳಸುವ ವ್ಯಕ್ತಿಗಳ ಫೋನನ್ನು ವಶಪಡಿಸಿಕೊಂಡು ಅದರಲ್ಲಿರಬಹುದಾದ ಚಿತ್ರಗಳನ್ನು ಮತ್ತು ವಿಡಿಯೋ ಫೂಟೇಜ್ ಗಳನ್ನು ಡಿಲೀಟ್ ಮಾಡಲಾಗುವುದು ಎಂಬ ಎಚ್ಚರಿಕೆಯನ್ನೂ ಸಹ ದೇವಸ್ವಂ ಮಂಡಳಿ ಈ ಮೂಲಕ ನೀಡಿದೆ.
ನವಂಬರ್ 16ರಿಂದ ಮಂಡಲ – ಮಕರ ಬೆಳಕು ಯಾತ್ರೆ ಪ್ರಾರಂಭಗೊಂಡಿರುವ ಹಿನ್ನಲೆಯಲ್ಲಿ ಕಳೆದ ಕೆಲವು ದಿನಗಳಿಂದ ಶಬರಿಮಲೆಯಲ್ಲಿ ಭಕ್ತರ ಸಂದಣಿ ಹೆಚ್ಚಾಗಿದೆ. ದೇವಸ್ಥಾನದ ಬಾಗಿಲು ತೆರೆದ ದಿನದಿಂದ ಡಿಸೆಂಬರ್ ಮಂಗಳವಾರದವರೆಗೆ ಸುಮಾರು ಏಳು ಲಕ್ಷ ಭಕ್ತರು ಅಯ್ಯಪ್ಪ ಸ್ವಾಮಿಯ ದರ್ಶನವನ್ನು ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.