ಮೈಸೂರು: ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆಯಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಿರುವ ಮಾರ್ಕರ್ ಪೆನ್ ಬಳಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಪಿ.ಎನ್. ಶ್ರೀನಿವಾಸಾಚಾರಿ ಹೇಳಿದರು. ನಗರದಲ್ಲಿರುವ ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್(ಮೈಲ್ಯಾಕ್) ಕಾರ್ಖಾನೆಗೆ ಶುಕ್ರವಾರ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
ದೇಶದಲ್ಲಿ ನಡೆಯುವ ಚುನಾವಣೆಗಳು ಸೇರಿದಂತೆ ವಿಶ್ವದ 28 ರಾಷ್ಟ್ರಗಳ ಚುನಾವಣೆಗಳಿಗೆ ಮೈಲ್ಯಾಕ್ ವತಿಯಿಂದ ಅಳಿಸಲಾಗದ ಶಾಹಿ ಪೂರೈಸಲಾಗುತ್ತಿದೆ. ಇದರ ನಡುವೆಯೇ ಮೈಲ್ಯಾಕ್ ವತಿಯಿಂದ ವಿಶೇಷವಾಗಿ ವಿನ್ಯಾಸಗೊಳಿಸಿರುವ ಮಾರ್ಕರ್ ಪೆನ್‌ಗಳನ್ನು ಚುನಾವಣೆ ಸಂದರ್ಭದಲ್ಲಿ ಮತದಾರರ ಕೈ ಬೆರಳಿಗೆ ಹಾಕಲು ರಾಜ್ಯ ಚುನಾವಣಾ ಆಯೋಗ ಚಿಂತನೆ ನಡೆಸಿದೆ. ಮುಖ್ಯವಾಗಿ ನಗರ ಪಾಲಿಕೆ ಸೇರಿದಂತೆ ಇನ್ನಿತರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮುಂದಿನ ದಿನಗಳಲ್ಲಿ ಈ ಪೆನ್ ಬಳಸಲಾಗುವುದು ಎಂದು ಹೇಳಿದರು.
ಪ್ರಸ್ತುತ ಚುನಾವಣೆಗಳಲ್ಲಿ ಬಳಸಲಾಗುತ್ತಿರುವ ಅಳಿಸಲಾಗದ ಇಂಕ್ ಬಾಟಲ್‌ನಲ್ಲಿ 1 ಸಾವಿರ ಮತದಾರರ ಕೈಬೆರಳಿಗೆ ಇಂಕ್ ಹಾಕಬಹುದಾಗಿದೆ. ಹೀಗಾಗಿ ಮೈಲ್ಯಾಕ್‌ನಿಂದ ವಿಶೇಷವಾಗಿ ವಿನ್ಯಾಸಗೊಳಿಸಿರುವ ಮಾರ್ಕರ್ ಪೆನ್‌ನಿಂದ ಎಷ್ಟು ಮಂದಿ ಮತದಾರರ ಕೈಬೆರಳಿಗೆ ಗುರುತು ಹಾಕಬಹುದು ಹಾಗೂ ಇದರ ಬಳಕೆಯಿಂದಾಗುವ ವೆಚ್ಚದ ಬಗ್ಗೆ ಪರಿಶೀಲನೆ ನಡೆಸಲಾಗುವುದು.
ಒಂದೊಮ್ಮೆ ವಿಶೇಷ ಮಾರ್ಕರ್ ಪೆನ್ನಿನ ಗುಣಮಟ್ಟ ಉತ್ತಮವಾಗಿದ್ದಲ್ಲಿ ದುಬಾರಿಯಾದರೂ ಅದನ್ನೇ ಬಳಸಲು ಚುನಾವಣಾ ಆಯೋಗ ಮುಂದಾಗಲಿದೆ. ಕಳೆದ 3 ತಿಂಗಳ ಹಿಂದೆ ವಿವಿಧ ಕಡೆಗಳಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ ಸಂದರ್ಭದಲ್ಲೇ ಈ ವಿಶೇಷ ಮಾರ್ಕರ್ ಪೆನ್ ಬಳಸಲು ಆಯೋಗ ತೀರ್ಮಾನಿಸಲಾಗಿತ್ತು ಎಂದು ಮಾಹಿತಿ ನೀಡಿದರು.
ಮೈಲ್ಯಾಕ್ ಅಧ್ಯಕ್ಷ ಎಚ್.ಎ.ವೆಂಕಟೇಶ್ ಮಾತನಾಡಿ, ಇತ್ತೀಚೆಗೆ ನಡೆದ ರಾಷ್ಟ್ರಪತಿ ಚುನಾವಣೆ ಸಂದರ್ಭದಲ್ಲಿ ಬಳಕೆಯಾದ ಪ್ರತಿ ಪೆನ್ನಿಗೆ 37.45 ರೂ. ವೆಚ್ಚವಾಗಿದ್ದು, ಹೀಗಾಗಿ ಸಂಸ್ಥೆ ವತಿಯಿಂದ ವಿನ್ಯಾಸಗೊಳಿಸಲಾಗಿರುವ ವಿಶೇಷ ಮಾರ್ಕರ್ ಪೆನ್ನಿಗೆ ದರ ನಿಗದಿಗೊಳಿಸುವ ಕಾರ್ಯದಲ್ಲಿ ಮೈಲ್ಯಾಕ್ ತೊಡಗಿದೆ. ಆದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪ್ರತಿ ಮತಗಟ್ಟೆಗಳಲ್ಲಿ ಅಂದಾಜು 1500 ಮಂದಿ ಮತದಾರರಿರುತ್ತಾರೆ.
ಹೀಗಾಗಿ ಹೊಸ ವಿನ್ಯಾಸದ ಮಾರ್ಕರ್ ಪೆನ್‌ನಿಂದ 750 ಮತದಾರರ ಕೈಬೆರಳಿಗೆ ಗುರುತು ಹಾಕಬಹುದಾಗಿದ್ದು, ಇದು ಈಗಾಗಲೇ ಬಳಸಲಾಗುತ್ತಿರುವ ಅಳಿಸಲಾಗದ ಇಂಕ್ ಬಾಟಲ್ ದರಕ್ಕಿಂತ ಶೇ.50 ಕಡಿಮೆಯಾಗಲಿದೆ. ಅಳಿಸಲಾಗದ ಇಂಕ್‌ನ 10 ಎಂಎಲ್ ಬಾಟಲ್‌ಗೆ 142 ರೂ. ವೆಚ್ಚವಾಗಲಿದ್ದು, ಇದರಿಂದ 1 ಸಾವಿರ ಮತದಾರರ ಕೈಬೆರಳಿಗೆ ಗುರುತು ಹಾಕಬಹುದಾಗಿದೆ ಎಂದರು. ಮೈಲ್ಯಾಕ್ ವ್ಯವಸ್ಥಾಪಕ ನಿರ್ದೇಶಕ ಸಿದ್ದಲಿಂಗಪೂಜಾರಿ, ಪ್ರಧಾನ ವ್ಯವಸ್ಥಾಪಕ ಹರಿಕುಮಾರ್ ಇತರರು ಇದ್ದರು.