Advertisement
ಪೂರ್ವವಿಭಾಗದ ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ) ಉಪವಿಭಾಗದ 3 ಠಾಣೆಗಳ ವ್ಯಾಪ್ತಿಯಲ್ಲಿ “ಮಾಹಿತಿ ಪೆಟ್ಟಿಗೆ’ (ಇನ್‌ಫರ್ಮೇಷನ್ ಬಾಕ್ಸ್)ಗಳನ್ನು ಅಳವಡಿಸಲಾಗಿದೆ. ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಮತ್ತು ಗೋವಿಂದಪುರ ಠಾಣೆಗಳ ವ್ಯಾಪ್ತಿಯಲ್ಲಿ ತಲಾ 20 ರಂತೆ 60 ಮಾಹಿತಿ ಪೆಟ್ಟಿಗೆಗಳನ್ನು ಅಳವಡಿಸಲಾಗಿದೆ. ಈ ಮಾಹಿತಿ ಪೆಟ್ಟಿಗೆಗೆ ಸಾರ್ವಜನಿಕರು ತಮ್ಮ ಸುತ್ತ-ಮುತ್ತ ನಡೆಯುವ ಅಕ್ರಮ ಚಟುವಟಿಕೆ, ಅಪರಾಧಗಳ ಬಗ್ಗೆ ಮಾಹಿತಿ ಬರೆದು, ಹೆಸರು ಉಲ್ಲೇಖೀಸದೆ ಬಾಕ್ಸ್‌ಗಳಲ್ಲಿ ಪತ್ರ ಹಾಕಬಹುದು. ಈ ಬಾಕ್ಸ್‌ಗಳ ಮೇಲುಸ್ತುವಾರಿಯನ್ನು ಠಾಣಾಧಿಕಾರಿಗಳಿಗೆ ನೀಡಲಾಗಿದ್ದು, ಪ್ರತಿ ವಾರ ಕೀ ನಿಂದ ಬಾಕ್ಸ್ ತೆರೆದು ದೂರು ಪತ್ರಗಳನ್ನು ಪರಿಶೀಲಿಸುತ್ತಾರೆ. ಅದರಿಂದ ಠಾಣಾ ವ್ಯಾಪ್ತಿಯಲ್ಲಿ ನಡೆಯುವ ಅಕ್ರಮ ಚುಟವಟಿಕೆಗಳ ಸ್ಥಳದ ಮಾಹಿತಿ ಮತ್ತು ಕೆಲವೊಮ್ಮೆ ಅಪರಾಧ ಎಸಗಿದ ಆರೋಪಿಗಳ ಪತ್ತೆಗೂ ಸಹಾಯವಾಗುತ್ತದೆ. ಕಳೆದ ಒಂದೂವರೆ ತಿಂಗಳಿಂದ ಈ ಹೊಸ ಪ್ರಯೋಗ ನಡೆಯುತ್ತಿದ್ದು, ಪೊಲೀಸರಿಗೆ ಸಾಕಷ್ಟು ಅನುಕೂಲವಾಗಿದೆ.
Related Articles
Advertisement
ಈ ಹಿಂದೆ ಪೊಲೀಸ್ ಸಿಬ್ಬಂದಿ ಗಸ್ತು ತಿರುಗುವಾಗ ಸಿಟಿ ಊದುವುದು ಕಡ್ಡಾಯವಾಗಿತ್ತು. ಅದರಿಂದ ಕೆಲ ಆರೋಪಿಗಳಿಗೆ ಎಚ್ಚರಿಕೆ ಗಂಟೆಯಾಗಿತ್ತು. ಜತೆಗೆ ಕೆಲವರು ಅಪರಾಧ ಎಸಗುವಾಗ ಪೊಲೀಸರ ಭಯದಿಂದ ಸ್ಥಳದಿಂದ ಪರಾರಿಯಾಗುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಈ ವ್ಯವಸ್ಥೆ ಕಣ್ಮರೆಯಾಗಿದೆ. ಹೀಗಾಗಿ ಹಳೇ ಪದ್ಧತಿಯನ್ನೇ ಮತ್ತೆ ಜಾರಿಗೆ ತರಲು ಯೋಜನೆ ಸಿದ್ಧಪಡಿಸಲಾಗುತ್ತಿದೆ. ಯಾವ ರೀತಿ? ಹೇಗೆ ಕಾರ್ಯಗತಗೊಳಿಸಬೇಕು ಎಂಬ ಬಗ್ಗೆ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಅಪರಾಧ ನಿಯಂತ್ರಣಕ್ಕೆ ಸಾರ್ವಜನಿಕರಿಂದ ಮಾಹಿತಿ ಬಾಕ್ಸ್‌ಗಳ ಮೂಲಕ ಮಾಹಿತಿ ಪಡೆಯಲಾಗಿದೆ. ಜತೆಗೆ ಕೆಎಸ್‌ಆರ್‌ಪಿ ಸಿಬ್ಬಂದಿ ಜತೆ ಸ್ಥಳೀಯ ಪೊಲೀಸರ ಗಸ್ತು ತಿರುಗುತ್ತಿದ್ದಾರೆ. ಅದರಿಂದ ಅಪರಾಧ ನಿಯಂತ್ರಣ ಸಾಧ್ಯವಾಗುತ್ತಿದೆ.-ರಮಣ್ ಗುಪ್ತಾ, ಪೂರ್ವವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ
-ಮೋಹನ್ ಭದ್ರಾವತಿ