Advertisement

“ದೇಗುಲ ಹಣ ಪಾವತಿಗೆ ಇ-ಗವರ್ನೆನ್ಸ್‌ ಬಳಕೆ’

12:56 AM Aug 30, 2019 | Sriram |

ಉಡುಪಿ: ಮುಜರಾಯಿ ದೇವಸ್ಥಾನಗಳ ಹಣ ದುರ್ಬಳಕೆ ತಡೆಯುವ ಉದ್ದೇಶದಿಂದ ರಾಜ್ಯದಲ್ಲಿರುವ 27 ಸಾವಿರ ದೇವಸ್ಥಾನಗಳಿಗೆ ನೀಡಲಾಗುವ ತಲಾ 48 ಸಾವಿರ ರೂ. ವಾರ್ಷಿಕ ತಸ್ತೀಕ್‌ ಅನ್ನು ದೇವಸ್ಥಾನಗಳ ಖಾತೆಗೆ ನೇರ ಜಮೆ ಮಾಡಲು ಸೂಚನೆ ನೀಡಿದ್ದೇನೆ. ತಸ್ತೀಕ್‌ ಹಣ ತಡೆಹಿಡಿಯುತ್ತಾರೆ, ಬೇರೆ ಉದ್ದೇಶಕ್ಕೆ ಬಳಸುತ್ತಾರೆ ಎಂಬ ಆರೋಪವಿದ್ದು, ಇದಕ್ಕಾಗಿ ಇ ಗವರ್ನೆನ್ಸ್‌ ಮೂಲಕ ಹಣ ಪಾವತಿಗೆ ನಿರ್ಧರಿಸಲಾಗಿದೆ ಎಂದು ಮುಜರಾಯಿ ಮತ್ತು ಬಂದರು, ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಉಡುಪಿಯ ಜೀವನದಿ ಸ್ವರ್ಣೆಗೆ ಗುರುವಾರ ಬೆಳಗ್ಗೆ ಶೀಂಬ್ರ ಸಿದ್ಧಿವಿನಾಯಕ ದೇವಸ್ಥಾನದ ಕೃಷ್ಣಾಂಗಾರಕ ಸ್ನಾನಘಟ್ಟದಲ್ಲಿ ಹಾಲು ಅಭಿಷೇಕ ಸಹಿತ ಬಾಗಿನ ಸಲ್ಲಿಸಿ, ಮಂಗಳಾರತಿ ಬೆಳಗಿ, ಬಳಿಕ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

ಡಾ. ವಿ.ಎಸ್‌. ಆಚಾರ್ಯ ಅವರು ಸ್ವರ್ಣಾ ನದಿಗೆ ಬಾಗಿನ ಅರ್ಪಿಸುವ ಸಂಪ್ರದಾಯವನ್ನು ಪ್ರಾರಂಭಿಸಿದ್ದರು. ನಾವು ಅದನ್ನು ಮುಂದುವರಿಸುತ್ತಿದ್ದೇವೆ. ಧಾರ್ಮಿಕ ದತ್ತಿ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಗಳ ಮೂಲಕ ಸ್ನಾನಘಟ್ಟ, ದೇವಸ್ಥಾನವನ್ನು ಅಭಿವೃದ್ಧಿಪಡಿಸುವ ಚಿಂತನೆ ಇದೆ ಎಂದರು.

ಮರಳುಗಾರಿಕೆ ಶೀಘ್ರ ಪ್ರಾರಂಭ
ಜಿಲ್ಲೆಯಲ್ಲಿ ಮರಳುಗಾರಿಕೆ ಪ್ರಾರಂಭಿಸಲು ಜಿಲ್ಲಾಡಳಿತದ ಮಟ್ಟದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಆಡಳಿತಾತ್ಮಕ ಸಮಸ್ಯೆ ನಿವಾರಣೆ ಮಾಡಿ ಶೀಘ್ರದಲ್ಲಿ ಮರಳು ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಕರಾವಳಿ ತೀರ ಸಂರಕ್ಷಣೆ
ಮೀನುಗಾರಿಕೆ ಇಲಾಖೆ ಮತ್ತು ಬಂದರು ಇಲಾಖೆ ಒಟ್ಟಾಗಿ ಇರಬೇಕು ಎಂಬ ಬೇಡಿಕೆ ಈಡೇರಿದೆ. ಕಡಲ ತೀರ ಸಂರಕ್ಷಣೆಗೆ ಆದ್ಯತೆ ನೀಡಲಾಗುವುದು. ಅಸಂಘಟಿತ ವಲಯ ಕಾರ್ಮಿಕರಲ್ಲಿ ಮೀನುಗಾರರನ್ನು ಸೇರಿಸಲು ಸಭೆ ನಡೆಸಲಾಗಿದೆ ಎಂದರು.

Advertisement

ಪಕ್ಷ ಸೂಚನೆ ಕಾಂಗ್ರೆಸ್‌ಗೂ ಅನ್ವಯ!
ಯಡಿಯೂರಪ್ಪ ದಿಲ್ಲಿ ಸಿಎಂ ಎಂಬ ಸಿದ್ದರಾಮಯ್ಯ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಹೈಕಮಾಂಡ್‌ ಮತ್ತು ರಾಷ್ಟ್ರೀಯ ಅಧ್ಯಕ್ಷರು ಸರಕಾರ  ಪಕ್ಷಕ್ಕೆ ಕೆಲವು ಸಲಹೆ ಸೂಚನೆ ನೀಡುತ್ತಾರೆ. ಇದನ್ನು ಪಾಲಿಸಲಾಗುತ್ತದೆ. ಸಿದ್ದರಾಮಯ್ಯ ರಾಹುಲ್‌ ಗಾಂಧಿ ಮಾತು ಕೇಳಿಲ್ಲವೇ ಎಂದು ಪ್ರಶ್ನಿಸಿದರು.

ಉಸ್ತುವಾರಿ ಸಚಿವರ ನೇಮಕದಲ್ಲಿ ಗೊಂದಲಗಳಿಲ್ಲ. ಆಡಳಿತಾತ್ಮಕ ಅನುಕೂಲಕ್ಕಾಗಿ ಮೂರು ಡಿಸಿಎಂ ಹುದ್ದೆ ಸೃಷ್ಟಿಸಲಾಗಿದೆ. ಜೆಡಿಎಸ್‌ ಮತ್ತು ಕಾಂಗ್ರೆಸ್‌ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ದೂರ ಇಡುವುದಕ್ಕಾಗಿ ಸರಕಾರ ರಚಿಸಿದ್ದವು ಎಂದರು.

ಶಾಸಕ ರಘುಪತಿ ಭಟ್‌, ಸಚಿವರ ಪತ್ನಿ ಶಾಂತಾ, ಅರ್ಚಕ ನವೀನ್‌ ಶಿವತ್ತಾಯ, ಆಡಳಿತ ಮಂಡಳಿ ಸದಸ್ಯ ಕೃಷ್ಣಮೂರ್ತಿ ಶಿವತ್ತಾಯ, ಎಂಜಿನಿಯರ್‌ ರಮೇಶ್‌ ರಾವ್‌, ನಗರ ಸಭಾ ಸದಸ್ಯರಾದ ಸುಮಿತ್ರಾ ನಾಯಕ್‌, ಮಂಜುನಾಥ ಶೆಟ್ಟಿಗಾರ್‌, ಬಾಲಕೃಷ್ಣ ಶೆಟ್ಟಿ, ಚಂದ್ರಶೇಖರ್‌, ಜಯಂತಿ ಪೂಜಾರಿ, ಗಿರೀಶ್‌ ಅಂಚನ್‌, ಗಿರಿಧರ್‌ ಕರಂಬಳ್ಳಿ, ಮಾಜಿ ನಗರಸಭಾಧ್ಯಕ್ಷ ಹೆರ್ಗ ದಿನಕರ ಶೆಟ್ಟಿ, ಹರಿಕೃಷ್ಣ ಶಿವತ್ತಾಯ, ಸತೀಶ್‌ ಕುಮಾರ್‌, ಶ್ರೀನಿವಾಸ ಬಲ್ಲಾಳ್‌, ಗಿರಿಧರ ಆಚಾರ್ಯ, ವಾಸುದೇವ ಭಟ್‌, ಶಾಂತಾ, ದಾವೂದ್‌ ಅಬೂಬಕ್ಕರ್‌, ಮೆಲ್ವಿನ್‌ ಡಿ’ಸೋಜಾ ಉಪಸ್ಥಿತರಿದ್ದರು.

ಸುವರ್ಣ ತ್ರಿಭುಜ ಅವಘಡ: ಕೇಂದ್ರಕ್ಕೆ ಪತ್ರ
ಸುವರ್ಣ ತ್ರಿಭುಜ ಬೋಟ್‌ ಅವಘಡ ಪ್ರಕರಣಕ್ಕೆ ಸಂಬಂಧಿಸಿ ಸಾಲ ಮರುಪಾವತಿಗೆ ವಿಮೆ ಮೊತ್ತ ಕಡಿತದ ಬಳಿಕವೂ ಸುಮಾರು 25 ಲಕ್ಷ ರೂ. ಅವಶ್ಯವಿದೆ. ಈ ಮೊತ್ತವನ್ನು ಸರಕಾರದಿಂದ ಪಾವತಿಸಲು ಸಿಎಂ ಆದೇಶ ನೀಡಿದ್ದಾರೆ. ನಾಪತ್ತೆಯಾದ ಮೀನುಗಾರರಿಗೆ ಕೇಂದ್ರ ಸರಕಾರದಿಂದ ಗರಿಷ್ಠ ಮೊತ್ತದ ಪರಿಹಾರ ನೀಡಲು ರಾಜ್ಯ ಸರಕಾರದಿಂದ ಪತ್ರ ಕಳುಹಿಸಲಾಗಿದೆ. ಮುಂದೆ ಇಂಥ ಘಟನೆ ಆಗದಂತೆ ಇಸ್ರೋ ನೆರವಿನಿಂದ ಸಂಪರ್ಕ ಸಾಧನ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next