Advertisement

ದೇಸಿ ಉತ್ಪನ್ನಗಳ ಬಳಕೆ ಕರ್ತವ್ಯವಾಗಲಿ: ಹಿರೇಮಠ

12:44 PM Aug 21, 2017 | Team Udayavani |

ಹುಬ್ಬಳ್ಳಿ: ಗ್ರಾಮೀಣ ಪ್ರದೇಶದ ಜೀವಾಳವಾಗಿರುವ ಖಾದಿ ಉದ್ಯಮವನ್ನು ಬೆಳಸುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂದು ಸಮಾಜ ಪರಿವರ್ತನ ಸಮುದಾಯದ ಸಂಸ್ಥಾಪಕ ಎಸ್‌.ಆರ್‌. ಹಿರೇಮಠ ಹೇಳಿದರು. ನ್ಯೂ ಕಾಟನ್‌ ಮಾರ್ಕೇಟ್‌ನ ಕೆ.ಕೆ ಕಾಂಪ್ಲೆಕ್ಸ್‌ ನಲ್ಲಿ ದೇಸಿ ಸಂಸ್ಥೆಯ “ದೇಸಿ ಅಂಗಡಿ’ಗೆ ಚಾಲನೆ ನೀಡಿ ಅವರು ಮಾತನಾಡಿದರು.

Advertisement

ಖಾದಿ ಉದ್ಯಮ ಉಳಿಸಿ-ಬೆಳೆಸುವ ಕಾರ್ಯದಲ್ಲಿ ತೊಡಗಿರುವ ದೇಸಿ ಸಂಸ್ಥೆ ಬೆಂಬಲಿಸುವುದು ಅವಶ್ಯ. ದೇಸಿ ಅಂಗಡಿ ಒಂದು ಚಳವಳಿಯಾಗಿದೆ ಎಂದರು. ಮಳೆ ಕೊರತೆಯಿಂದ ತೀವ್ರ ಬರಗಾಲ ಉಂಟಾಗಿದ್ದರಿಂದ ಜನರಲ್ಲಿ ಪರಿಸರ ಕಾಳಜಿ ಮೂಡುತ್ತಿದೆ. ಪರಿಸರಕ್ಕೆ ಪೂರಕವಾಗಿರುವ ದೇಸಿ ಉತ್ಪನ್ನಗಳಿಗೆ ಹೆಚ್ಚು ಒತ್ತು ಕೊಡಬೇಕು. 

ದೇಸಿ ಉತ್ಪನ್ನಗಳ ಬಳಕೆ ಸಾಮಾಜಿಕ ಸೇವೆ ಎಂದು ಭಾವಿಸದೆ ಇದು ನಮ್ಮ ಕರ್ತವ್ಯ ಎಂದು ಆಂದೋಲನದ ರೂಪದಲ್ಲಿ ಬೆಳೆಸಬೇಕು. ದೇಸಿ ವಸ್ತುಗಳ ಬಳಕೆ ಎರಡನೇ ಸ್ವಾತಂತ್ರ್ಯ ಸಂಗ್ರಾಮವಾಗಿ ರೂಪುಗೊಳ್ಳಬೇಕು ಎಂದು ಹೇಳಿದರು. ಉದ್ಯಮಿ ಗುಜ್ಜಾಡಿ ಗೋಪಾಲಕೃಷ್ಣ ನಾಯಕ ಮಾತನಾಡಿ, ಪ್ರಧಾನಿಯವರು ಘೋಷಿಸಿರುವಂತೆ ವಾರಕೊಮ್ಮೆಯಾದರೂ  ಖಾದಿ ಉತ್ಪನ್ನಗಳನ್ನು ಧರಿಸಬೇಕು.

ನಗರದ ಶೇ.10ರಷ್ಟು ಜನ ಖಾದಿ ಉತ್ಪನ್ನ ಹಾಗೂ ದೇಸಿ ಉತ್ಪನ್ನಗಳ ಬಳಕೆಗೆ ಮುಂದಾದರೆ ಎಲ್ಲಾ ರೀತಿಯಿಂದಲೂ ಅನುಕೂಲವಿದೆ. ನಿಸ್ವಾರ್ಥದಿಂದ ಆರಂಭವಾಗಿರುವ ದೇಸಿ ಸಂಸ್ಥೆ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು. ದೇಸಿ ಸಂಸ್ಥೆ ಧರ್ಮದರ್ಶಿ ಹಾಗೂ ಹಿರಿಯ ರಂಗಕರ್ಮಿ ಪ್ರಸನ್ನ ಮಾತನಾಡಿ, ಮುಳುಗುತ್ತಿರುವ ಕ್ಷೇತ್ರವೆಂದು ಹೇಳುತ್ತಿರುವ ಸಂದರ್ಭದಲ್ಲಿ ಖಾದಿ ಉದ್ಯಮವನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆಯುತ್ತಿರುವುದು ಒಂದು ಸಣ್ಣ ಪ್ರಯೋಗವಾಗಿದೆ.

ಇದರಲ್ಲಿ ಉತ್ತರ ಕರ್ನಾಟಕದ ನೇಕಾರರ ಪಾತ್ರ ಬಹುದೊಡ್ಡದಿದೆ. ನೈಸರ್ಗಿಕ ಬಣ್ಣ ಬಳಸಿ ಬಟ್ಟೆ ತಯಾರಿಸಿರುವುದರಿಂದ ಇದು ಕೂಡ ಆಯುರ್ವೇದವೇ ಆಗಿದೆ. ಲಾಭ ದೇಸಿ ಸಂಸ್ಥೆಯ ಮೂಲ ಉದ್ದೇಶವಲ್ಲ. ಗ್ರಾಹಕರಾಗಿ ಬನ್ನಿ ಗ್ರಾಮ ಸೇವಕರಾಗಿ ಹೋಗಿ ಎನ್ನುವ ಧ್ಯೇಯ ಇಟ್ಟುಕೊಂಡಿದೆ.

Advertisement

ಈ ಕ್ಷೇತ್ರಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಜಿಎಸ್‌ಟಿ ತೆರಿಗೆ ಹೇರಿರುವುದರಿಂದ ಇದನ್ನು ವಿರೋಧಿಸುವ ನಿಟ್ಟಿನಲ್ಲಿ ರಾಷ್ಟ್ರವ್ಯಾಪಿ ಆಂದೋಲನ ಆರಂಭಿಸುತ್ತಿದ್ದು, ಈ ಚಳವಳಿಯಲ್ಲಿ ಎಲ್ಲರೂ ಭಾಗವಹಿಸುವಂತೆ ಮನವಿ ಮಾಡಿದರು. ಸುಸ್ಥಿರಾಭಿವೃದ್ಧಿ ತಜ್ಞ ಡಾ| ಪ್ರಕಾಶ ಭಟ್‌ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಲಯ ವ್ಯವಸ್ಥಾಪಕಿ ಸುನಂದಾ ಪ್ರಕಾಶ, ಶಾಖಾ ವ್ಯವಸ್ಥಾಪಕಿ ಮಂಜುಳಾ ಜಾಧವ ಸೇರಿದಂತೆ ಇತರರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next