ಪ್ಯಾಲೆಸ್ತೀನ್‌ನ ಗಾಜಾ ಪಟ್ಟಿಯಲ್ಲಿರುವ ಹಮಾಸ್ ಉಗ್ರರ ಅಡಗುತಾಣಗಳ ಮೇಲೆ ಇಸ್ರೇಲ್ ಮಾರಣಾಂತಿಕ ದಾಳಿ ನಡೆಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಮತ್ತು ಫೋಟೋಗಳ ಪ್ರಕಾರ, ಇಸ್ರೇಲ್ ಡಿಫೆನ್ಸ್ ಫೋರ್ಸ್(ಐಡಿಎಫ್) ನಿಷೇಧಿತ ಬಿಳಿ ರಂಜಕದ ಬಾಂಬ್‌ಗಳು ಬಳಸಿ, ಜನದಟ್ಟಣೆ ಹೆಚ್ಚಿರುವ ಪ್ರದೇಶಗಳನ್ನು ಧ್ವಂಸಗೊಳಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಏನಿದು ಬಿಳಿ ರಂಜಕ ಬಾಂಬ್‌ಗಳು, ಅದನ್ನು ಏಕೆ ನಿಷೇಧಿಸಲಾಗಿದೆ ಎಂಬ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಬಿಳಿ ರಂಜಕ ಬಾಂಬ್:
ಬಿಳಿ ರಂಜಕವು ಮೇಣದಂಥ, ಹಳದಿ ರಾಸಾಯನಿಕವಾಗಿದ್ದು, ಕಟುವಾದ, ಬೆಳ್ಳುಳ್ಳಿಯಂಥ ವಾಸನೆ ಹೊಂದಿರುತ್ತದೆ. ಇದು ಹೆಚ್ಚು ದಹಿಸುವ ರಾಸಾಯನಿಕವಾಗಿದ್ದು, ಗಾಳಿಗೆ ಒಡ್ಡಿಕೊಂಡಾಗ ತ್ವರಿತವಾಗಿ ಸುಡುತ್ತದೆ. ರಾತ್ರಿ ವೇಳೆ ಗುರಿಗಳನ್ನು ಭೇದಿಸುವುದು ಅಥವಾ ಶತ್ರುಗಳ ಮೇಲೆ ಹಾನಿಯನ್ನುಉಂಟು ಮಾಡುವುದು ಮುಂತಾದ ವಿವಿಧ ಉದ್ದೇಶಗಳಿಗಾಗಿ ಅಮೆರಿಕ ಸೇ ಪ್ರಪಂಚದಾದ್ಯಂತದ ಮಿಲಿಟರಿ ಪಡೆಗಳು ಶಸ್ತ್ರಾಸ್ತ್ರಗಳಲ್ಲಿ ಇದನ್ನು ಬಳಸುತ್ತವೆ.
ಮಾನವರಿಗೆ ತುಂಬ ಅಪಾಯಕಾರಿ:
ಬಿಳಿ ರಂಜಕ ಬಾಂಬ್‌ಗಳ ರಾಸಾಯನಿಕ ಕ್ರಿಯೆಯು ತೀವ್ರವಾದ ಶಾಖವನ್ನು(ಸುಮಾರು 815 ಡಿ.ಸೆ.), ಬೆಂಕಿ ಹಾಗೂ ದಟ್ಟವಾದ ಬಿಳಿ ಹೊಗೆಯನ್ನು ಉತ್ಪಾದಿಸುತ್ತದೆ. ಇವುಗಳನ್ನು ಸೂಕ್ಷ್ಮ ವಲಯಗಳ ಮೇಲೆ ಮಿಲಿಟರಿ ಪಡೆಗಳು ಬಳಸುತ್ತವೆ. ಇದು ಮಾನವರಿಗೆ ತುಂಬ ಅಪಾಯಕಾರಿಯಾಗಿದೆ. ಏಕೆಂದರೆ ಇದು ಅಂಗಾಂಶ ಮತ್ತು ಮೂಳೆಗಳ ಒಳಗೆ ತೂರಿ, ತೀವ್ರವಾದ ಸುಟ್ಟ ಗಾಯಗಳನ್ನು ಮಾಡುತ್ತದೆ. ಚಿಕಿತ್ಸೆ ನೀಡಿದರೂ ಇದು ಪೂರ್ಣವಾಗಿ ಗುಣವಾಗುವುದಿಲ್ಲ.
ಯಾವೆಲ್ಲ ಯುದ್ಧಗಳಲ್ಲಿ ಬಳಸಲಾಗಿದೆ?
ಬಿಳಿ ರಂಜಕ ಬಾಂಬ್‌ಗಳನ್ನು ಮೊಟ್ಟ ಮೊದಲ ಬಾರಿಗೆ 1800ರಲ್ಲಿ ಐರ್ಲೆಂಡ್ ಮಿಲಿಟರಿಯು ಬ್ರಿಟಿಶ್ ಪಡೆಗಳ ಮೇಲೆ ಬಳಸಿತ್ತು. ನಂತರ ಬ್ರಿಟಿಶ್ ಸೇನೆ ಇದನ್ನು ಮೊದಲನೇ ಹಾಗೂ ಎರಡನೇ ವಿಶ್ವ ಯುದ್ಧದಲ್ಲಿ ಬಳಸಿತು. ಇರಾಕ್ ಮೇಲಿನ ದಾಳಿಯಲ್ಲಿ ಇದನ್ನು ಅಮೆರಿಕ ಬಳಸಿತ್ತು.
ವಿಶ್ವಸಂಸ್ಥೆಯಿಂದ ನಿಷೇಧ:
ಮಾನವರಿಗೆ ಅತಿ ಹೆಚ್ಚು ಹಾನಿ ಮಾಡುವ ಶಸ್ತ್ರಾಸ್ತ್ರಗಳು ಹಾಗೂ ಮದ್ದು-ಗುಂಡುಗಳ ನಿಷೇಧದ ನಿಟ್ಟಿನಲ್ಲಿ 1972ರಲ್ಲಿ ವಿಶ್ವಸಂಸ್ಥೆಯು ನಿರ್ಣಯವನ್ನು ಮಂಡಿಸಿತು. ಇದರಲ್ಲಿ ಬಿಳಿ ರಂಜಕ ಬಾಂಬ್‌ಗಳು ಸೇರಿದ್ದವು. ನಂತರ 1980ರಲ್ಲಿ ವಿಶ್ವದ ರಾಷ್ಟ್ರಗಳು ಇವುಗಳ ಮೇಲಿನ ನಿಷೇಧವನ್ನು ಅಂಗೀಕರಿಸಿದವು.