ಮಹಾರಾಷ್ಟ್ರ: ಮಸೀದಿಗಳಲ್ಲಿ ಇರುವ ಧ್ವನಿವರ್ಧಕ(ಲೌಡ್ ಸ್ಪೀಕರ್)ಗಳನ್ನು ಮೇ 3ರೊಳಗೆ ತೆಗೆದುಹಾಕಬೇಕೆಂದು ಮಹಾರಾಷ್ಟ್ರ ಸರ್ಕಾರಕ್ಕೆ ಎಂಎನ್ ಎನ್ (ಮಹಾರಾಷ್ಟ್ರ ನವನಿರ್ಮಾಣ್ ಸೇನೆ)ಯ ಮುಖ್ಯಸ್ಥ ರಾಜ್ ಠಾಕ್ರೆ ಅಂತಿಮ ಗಡುವು ನೀಡಿರುವುದಕ್ಕೆ ಸಚಿವ ಆದಿತ್ಯ ಠಾಕ್ರೆ ತೀವ್ರ ವಾಗ್ದಾಳಿ ನಡೆಸಿ ತರಾಟೆಗೆ ತೆಗೆದುಕೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ: 3000 ಸೈನಿಕರ ಸಾವು, 10,000ಕ್ಕೂ ಹೆಚ್ಚು ಮಂದಿಗೆ ಗಾಯ; ನಷ್ಟದ ಲೆಕ್ಕ ಮುಂದಿಟ್ಟ ಝೆಲೆನ್ಸ್ಕಿ
“ನಿಮ್ಮ (ರಾಜ್ ಠಾಕ್ರೆ) ವಾದ ಉತ್ತಮವಾಗಿದೆ. ಆದರೆ ಮಸೀದಿಗಳಲ್ಲಿನ ಲೌಡ್ ಸ್ಪೀಕರ್ ತೆಗೆದುಹಾಕುವ ಮೊದಲು ದೇಶದಲ್ಲಿನ ಬೆಲೆ ಏರಿಕೆ ಬಗ್ಗೆ ಅದೇ ರೀತಿ ಧ್ವನಿ ಎತ್ತಿ. ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಪೆಟ್ರೋಲ್, ಡೀಸೆಲ್, ಸಿಎನ್ ಜಿ ಬೆಲೆ ಏರಿಕೆ ಬಗ್ಗೆಯೂ ಮಾತನಾಡಿ. ಅಷ್ಟೇ ಅಲ್ಲ ಕಳೆದ 60 ವರ್ಷಗಳ ವಿಚಾರಕ್ಕಿಂತ ಇತ್ತೀಚೆಗಿನ ಎರಡು-ಮೂರು ವರ್ಷಗಳಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಮಾತನಾಡಿ” ಎಂದು ಆದಿತ್ಯ ಠಾಕ್ರೆ ಸುದ್ದಿಗಾರರ ಜತೆ ಮಾತನಾಡುತ್ತ ಪ್ರಶ್ನಿಸಿರುವುದಾಗಿ ವರದಿ ಹೇಳಿದೆ.
ಭಾರತೀಯ ಜನತಾ ಪಕ್ಷ ಮತ್ತು ಎಂಎನ್ ಎಸ್ ಮಹಾರಾಷ್ಟ್ರದಲ್ಲಿ ಲೌಡ್ ಸ್ಪೀಕರ್ ವಿತರಣೆ ಮಾಡುವ ಕುರಿತು ಕೇಳಿದ ಪ್ರಶ್ನೆಗೆ ಆದಿತ್ಯ ಠಾಕ್ರೆ ಈ ಪ್ರತಿಕ್ರಿಯೆ ನೀಡಿದ್ದಾರೆ.
ಮಹಾರಾಷ್ಟ್ರ ಸರ್ಕಾರ ಮೇ 3ರೊಳಗೆ ಮಸೀದಿಗಳಲ್ಲಿರುವ ಲೌಡ್ ಸ್ಪೀಕರ್ ಗಳನ್ನು ತೆರವುಗೊಳಿಸಬೇಕು ಎಂದು ರಾಜ್ ಠಾಕ್ರೆ ಎಚ್ಚರಿಕೆ ನೀಡಿದ್ದು, ಒಂದು ವೇಳೆ ಮಸೀದಿಯಲ್ಲಿರುವ ಲೌಡ್ ಸ್ಪೀಕರ್ ತೆಗೆದುಹಾಕದಿದ್ದಲ್ಲಿ ಮಸೀದಿಯ ಹೊರಭಾಗದಲ್ಲಿ ಎಂಎನ್ ಎಸ್ ಕಾರ್ಯಕರ್ತರು ಲೌಡ್ ಸ್ಪೀಕರ್ ಅಳವಡಿಸಿ ಹನುಮಾನ್ ಚಾಲೀಸಾ ಹಾಕುತ್ತೇವೆ ಎಂದು ಸವಾಲು ಹಾಕಿರುವುದಾಗಿ ವರದಿ ತಿಳಿಸಿದೆ.
ಇದೊಂದು ಸಾಮಾಜಿಕ ವಿಷಯವಾಗಿದ್ದು, ಈ ವಿಚಾರದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಮಹಾರಾಷ್ಟ್ರದ ಶಿವಸೇನಾ ನೇತೃತ್ವದ ಮೈತ್ರಿ ಸರ್ಕಾರ ಏನು ಬೇಕಾದರು ಮಾಡಲಿ ಎಂದು ರಾಜ್ ಠಾಕ್ರೆ ಸವಾಲೊಡ್ಡಿದ್ದಾರೆ.
ಮುಂಬಯಿಯ ಮುಸ್ಲಿಂ ಪ್ರದೇಶಗಳಲ್ಲಿರುವ ಮಸೀದಿಯಲ್ಲಿ ಶೋಧ ಕಾರ್ಯ ನಡೆಸುವಂತೆ ರಾಜ್ ಠಾಕ್ರೆ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿಕೊಂಡಿದ್ದು, ಈ ಮಸೀದಿಗಳಲ್ಲಿ ಪಾಕಿಸ್ತಾನಿ ಬೆಂಬಲಿಗರು ವಾಸಿಸುತ್ತಿರುವುದಾಗಿ ಆರೋಪಿಸಿದ್ದಾರೆ.