Advertisement

ಬೆಳೆಗೆ ಅಗತ್ಯವಿರುವಷ್ಟೇ ನೀರು ಬಳಸಿ: ನಜೀರ್‌

12:52 PM Mar 17, 2022 | Team Udayavani |

ಸಿರುಗುಪ್ಪ: ರೈತರು ಭತ್ತದ ಬೆಳೆಯಲ್ಲಿ ಹೆಚ್ಚು ನೀರನ್ನು ನಿಲ್ಲಿಸುವುದರಿಂದ ಭೂಮಿ ಫಲವತ್ತತೆ ಕಡಿಮೆಯಾಗುತ್ತದೆ. ಅಲ್ಲದೆ ಭೂಮಿ ಸವಕಳಿಯಾಗುತ್ತದೆ. ಆದ್ದರಿಂದ ಭತ್ತದ ಬೆಳೆಗೆ ಎಷ್ಟು ನೀರು ಬೇಕೋ ಅಷ್ಟು ನೀರನ್ನು ಮಾತ್ರ ಬಳಕೆ ಮಾಡಬೇಕೆಂದು ಸಹಾಯಕ ಕೃಷಿ ನಿರ್ದೇಶಕ ನಜೀರ್‌ ಅಹಮ್ಮದ್‌ ತಿಳಿಸಿದರು.

Advertisement

ತಾಲೂಕಿನ ಇಬ್ರಾಹಿಂಪುರ ಗ್ರಾಮದಲ್ಲಿ ಕ್ರಿಭ್ಕೋ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ರೈತರೊಂದಿಗೆ ಕೃಷಿ ವಿಜ್ಞಾನಿ ಮತ್ತು ಕೃಷಿ ಅಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಭತ್ತದ ಗದ್ದೆಯಲ್ಲಿ ಯಥೇಚ್ಚ ನೀರು ನಿಲ್ಲಿಸುವುದರಿಂದ ಗದ್ದೆಗೆ ಹಾಕಿದ ಗೊಬ್ಬರ ನೀರಿನೊಂದಿಗೆ ಹರಿದು ಹೋಗುತ್ತದೆ. ರೋಗರುಜಿನಗಳ ಕಾಟ ಹೆಚ್ಚಾಗುತ್ತದೆ. ಆದ್ದರಿಂದ ಭತ್ತದ ಗದ್ದೆಯಲ್ಲಿ ಕೂದಲೆಳೆಯ ಅಂತರದ ಬಿರುಕು ಬಿಟ್ಟನಂತರ ನೀರನ್ನು ಹರಿಸುವುದರಿಂದ ಉತ್ತಮ ಬೆಳವಣಿಗೆಯಾಗುತ್ತದೆ. ಅಲ್ಲದೆ ರೋಗ ರುಜಿನಗಳು, ಕ್ರಿಮಿಕೀಟಗಳ ಕಾಟ ಕಡಿಮೆಯಾಗುತ್ತದೆ ಎಂದು ಹೇಳಿದರು.

ಕೃಷಿ ವಿಜ್ಞಾನಿ ಡಾ| ಎಂ.ಎ. ಬಸವಣ್ಣೆಪ್ಪ ಮಾತನಾಡಿ, ಪ್ರತಿಯೊಬ್ಬ ರೈತರು ತಮ್ಮ ಜಮೀನಿನಲ್ಲಿ ಹಸಿರೆಲೆ ಗೊಬ್ಬರವನ್ನು ಬೆಳೆಸಿ ಭೂಮಿಗೆ ಬೆರೆಸುವುದರಿಂದ ಭೂಮಿಯಲ್ಲಿ ಫಲವತ್ತತೆ ಹೆಚ್ಚುತ್ತದೆ. ರೈತರು ತಿಪ್ಪೆ ಗೊಬ್ಬರದೊಂದಿಗೆ ಸಾವಯವ ಗೊಬ್ಬರವನ್ನು ಭೂಮಿಗೆ ನೀಡಿದರೆ ಉತ್ತಮ ಇಳುವರಿ ಬರುತ್ತದೆ. ಮಣ್ಣಿನ ಆರೋಗ್ಯ ಉತ್ತಮವಾಗುತ್ತದೆ. ಉತ್ತಮ ಮಣ್ಣಿನಿಂದ ಹೆಚ್ಚಿನ ಇಳುವರಿಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಕ್ರಿಭ್ಕೋ ಮಾರುಕಟ್ಟೆ ಅಧಿಕಾರಿ ಬಾಬು, ಪ್ರಗತಿಪರ ರೈತರಾದ ಖಾಸಿಂಸಾಬ್‌, ಅಶೋಕ್‌, ಮಲ್ಲನಗೌಡ, ಶಂಭನಗೌಡ, ಗಫೂರ್‌ಸಾಬ್‌, ಎಸ್‌.ನಾಗರಾಜ, ಜಿ. ಬಸವನಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next