ಮೈಸೂರು: ಸಾರ್ವಜನಿಕರ ಸಮಸ್ಯೆಗಳನ್ನು ಅರಿತುಕೊಳ್ಳಲು ಪೊಲೀಸ್ ಇಲಾಖೆ ಆಯೋಜಿಸುವ ಅದಾಲತ್‌ಗಳನ್ನು ಬಳಸಿಕೊಳ್ಳಿ ಎಂದು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ಕೋರಿದರು. ಮೈಸೂರು ನಗರ ಸಂಚಾರ ಪೊಲೀಸ್ ವತಿಯಿಂದ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಸಂಚಾರ ಅದಾಲತ್ ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕರಿಗೆ ತೊಂದರೆ: ಪೊಲೀಸ್ ಆಯುಕ್ತರಿಗೆ ಸಮಸ್ಯೆ ಹೇಳಿಕೊಂಡ ಸಾರ್ವಜನಿಕರು, ನಗರದ ಇಟ್ಟಿಗೆಗೂಡು ಬಳಿ ಹಂಪ್ಸ್ ಹಾಕಲಾಗಿದೆ. ಯುವಕರು ವೇಗವಾಗಿ ಬೈಕ್ ಓಡಿಸುತ್ತಾರೆ. ಅವರಿಗೆ ಅಲ್ಲಿ ಹಂಪ್ಸ್ ಇರುವುದು ತಿಳಿದಿರುವುದಿಲ್ಲ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ಸಂಭವಿಸುತ್ತಿದ್ದು, ಅನೇಕ ಯುವಕರು ಮೃತಪಟ್ಟ ಪ್ರಕರಣಗಳು ನಮ್ಮ ಮುಂದಿವೆ.
ಆದ್ದರಿಂದ ಹಂಪ್ಸ್ ಗೆ ಬಿಳಿ ಬಣ್ಣ ಬಳಿಸಬೇಕು ಎಂದರು. ನಗರದ ರಸ್ತೆಗಳ ಅಭಿವೃದ್ಧಿ ಹಿನ್ನೆಲೆಯಲ್ಲಿ ಫುಟ್‌ಪಾತ್ ಜಾಗಗಳಲ್ಲಿನ ಮಣ್ಣನ್ನು ತೆಗೆದು ರಸ್ತೆಯಲ್ಲಿ ಹಾಕಲಾಗುತ್ತದೆ. ಮತ್ತೆ ಅದನ್ನು ತೆರವುಗೊಳಿಸದೇ ಇರುವುದರಿಂದ ಪಾದಚಾರಿಗಳು ಮತ್ತು ವಾಹನ ಚಾಲಕರಿಗೆ ತೊಂದರೆ ಉಂಟಾಗುತ್ತಿದೆ ಎಂದು ತಿಳಿಸಿದರು. ಈ ಎಲ್ಲ ಸಮಸ್ಯೆಗಳನ್ನು ಆದಷ್ಟು ಶೀಘ್ರವಾಗಿ ಪರಿಹರಿಸುವುದಾಗಿ ನಗರ ಪೊಲೀಸ್ ಆಯುಕ್ತರು ಭರವಸೆ ನೀಡಿದರು.
ಕ್ರಮಕ್ಕೆ ಒತ್ತಾಯ: ಈ ಸಂದರ್ಭದಲ್ಲಿ ಆಯುಕ್ತರ ಗಮನ ಸೆಳೆದ ಸಾರ್ವಜನಿಕರು, ಆಟೋದವರು ಸಿಕ್ಕಲ್ಲೆಲ್ಲಾ ಆಟೋ ನಿಲ್ಲಿಸಿಕೊಂಡು ತೊಂದರೆ ನೀಡುತ್ತಾರೆ. ನಿಗದಿತ ಸ್ಥಳದಲ್ಲಿ ಆಟೋ ನಿಲ್ಲಿಸುವಂತೆ ತಾಕೀತು ಮಾಡಿ, ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಕರ್ಕಶ ಸೈಲೆನ್ಸರ್ ಹಾಕಿ ಬೈಕ್ ಓಡಿಸುತ್ತಾರೆ. ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಒತ್ತಾಯಿಸಿದರು.
ಕೆಲ ವಿದ್ಯಾರ್ಥಿಗಳು ಜೋಶ್ ನಲ್ಲಿ ಬೈಕ್ ಓಡಿಸುತ್ತಾರೆ. ಹೀಗಾಗಿ ವೃದ್ಧರು ರಸ್ತೆಗೆ ಇಳಿಯುವುದೇ ದುಸ್ತರವಾಗಿದೆ. ಅವರುಗಳಿಗೂ ಕಡಿವಾಣ ಹಾಕಿ. ವಾಹನ ಚಾಲನಾ ಪರವಾನಗಿ ಪತ್ರ ಹೊಂದಿರುವ ವಿದ್ಯಾರ್ಥಿಗಳಿಗೆ ಮಾತ್ರ ಅನುಮತಿ ನೀಡಬೇಕೆಂದು ತಮ್ಮ ಅಳಲು ತೋಡಿಕೊಂಡರು. ಅದಾಲತ್‌ನಲ್ಲಿ ಡಿಸಿಪಿ ವಿಕ್ರಂ ಆಮ್ಟೆ, ಮಾದಯ್ಯ, ಟ್ರಾಫಿಕ್ ಇನ್ಸ್‌ಪೆಕ್ಟರ್ ಗಳು, ನಗರ ಯೋಜನೆ, ಲೋಕೋಪಯೋಗಿ, ನಗರಪಾಲಿಕೆ , ಮುಡಾ ಅಧಿಕಾರಿಗಳು ಭಾಗವಹಿಸಿದ್ದರು.