Advertisement

ಸಕಾಲದಲ್ಲಿ ಅನುದಾನ ಬಳಸಿ

04:19 PM Nov 12, 2019 | Suhan S |

ಶಿವಮೊಗ್ಗ: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಜನಾಂಗಗಳ ವಿಕಾಸಕ್ಕಾಗಿ ವಿವಿಧ ಇಲಾಖೆಗಳ ಮೂಲಕ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಲು ಬಿಡುಗಡೆ ಮಾಡಿರುವ ಅನುದಾನವನ್ನು ನಿಗದಿತ ಉದ್ದೇಶಕ್ಕಾಗಿ ಸಕಾಲದಲ್ಲಿ ಬಳಸಿ, ಪ್ರಗತಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಸೋಮವಾರ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪರಿಶಿಷ್ಟ ಜಾತಿ ಉಪಹಂಚಿಕೆ, ಗಿರಿಜನ ಉಪಹಂಚಿಕೆಗೆ ಸಂಬಂಧಿಸಿದಂತೆ ರಾಜ್ಯ ಮತ್ತು ಜಿಲ್ಲಾ ವಲಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರ್ಥಿಕ ವರ್ಷದ ದ್ವೈಮಾಸಿಕ ಅವಧಿ  ಮುಕ್ತಾಯವಾಗಿದ್ದರೂ ಬಹುತೇಕ ಇಲಾಖೆಗಳಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲದಿರುವುದು ಬೇಸರದ ಸಂಗತಿ. ನಿಗದಿತ ಕಾಲಮಿತಿಯಲ್ಲಿ ಪ್ರಗತಿ ಸಾಧಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪಂಚಾಯತ್‌ ರಾಜ್‌ ಹಾಗೂ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೊಳಪಡುವ ವಿವಿಧ ಇಲಾಖೆಗಳಲ್ಲಿನ ಪರಿಶಿಷ್ಟ ಜಾತಿ ಉಪಹಂಚಿಕೆ ಹಾಗೂ ಗಿರಿಜನ ಉಪಹಂಚಿಕೆ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆಗಿರುವ ಪ್ರಗತಿಯ ಕುರಿತು ಗಮನಹರಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.

ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷ ವಹಿಸುವ ಅಧಿ ಕಾರಿಗಳ ವರ್ತನೆ ಸಹಿಸಲಾಗುವುದಿಲ್ಲ. ಈವರೆಗೆ ಪ್ರಗತಿಯಲ್ಲಿ ಹಿಂದುಳಿದಿರುವ ಇಲಾಖೆಯ ಅಧಿಕಾರಿಗಳು ಮುಂದಿನ ತಿಂಗಳೊಳಗಾಗಿ ನಿಗದಿತ ಪ್ರಗತಿಗೆ ಶ್ರಮಿಸಬೇಕು. ಅಧಿಕಾರಿಗಳು ತಮ್ಮ ಜವಾಬ್ದಾರಿಯರಿತು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದ ಅವರು, ಸಭೆಗೆ ಗೈರು ಹಾಜರಾಗಿರುವ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್‌ ನೀಡುವಂತೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ವಿವಿಧ ಅಭಿವೃದ್ಧಿ ನಿಗಮಗಳ ಮೂಲಕ ಅನುಷ್ಠಾನಗೊಳಿಸಿರುವ ವಿವಿಧ ಫಲಾನುಭವಿಗಳನ್ನು ಆಯಾ ತಾಲೂಕಿನ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಆಯ್ಕೆಯಾದ ಫಲಾನುಭವಿಗಳಿಗೆ ತ್ವರಿತಗತಿಯಲ್ಲಿ ಸೌಲಭ್ಯ ಒದಗಿಸಲು ಕ್ರಮಕೈಗೊಳ್ಳುವಂತೆ ಸೂಚಿಸಿದ ಅವರು, ಈ ಸಂಬಂಧ ಕೂಡಲೆ ತಾಲೂಕು ಮಟ್ಟದಲ್ಲಿ ಸಭೆ ನಡೆಸುವಂತೆ ಸೂಚಿಸಿದರು.

ಜಿಲ್ಲಾಮಟ್ಟದ ಅಧಿಕಾರಿಗಳು ಸಂಬಂಧಿತ ಇಲಾಖೆಗಳ ವರದಿಯನ್ನು ಕ್ರೋಢೀಕರಿಸಿ, ಮಾಸಿಕ ಸಭೆಗೆ ಪ್ರತಿ ತಿಂಗಳ 5ನೇ ತಾರೀಖೀನೊಳಗಾಗಿ ಸಲ್ಲಿಸಬೇಕು. ಈಗಾಗಲೇ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿ ಹಾಗೂ ಬಾಕಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅವರು ಸೂಚಿಸಿದರು.

Advertisement

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅ ಧಿಕಾರಿ ಎಂ.ಎಲ್‌. ವೈಶಾಲಿ, ಜಿಪಂ ಉಪಕಾರ್ಯದರ್ಶಿ ಡಾ| ರಂಗನಾಥ್‌, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಂಜುನಾಥ್‌ ಎಚ್‌.ವಿ. ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next