ತಿ.ನರಸೀಪುರ: ಕೃಷಿಯಲ್ಲಿ ಉತ್ಪಾದನಾ ವೆಚ್ಚವನ್ನು ತಗ್ಗಿಸಿ, ಅಧಿಕ ಇಳುವರಿಯನ್ನು ಪಡೆಯಲು ಕೃಷಿ ಅಭಿಯಾನ ಹಾಗೂ ಕೃಷಿ ಯಂತ್ರಧಾರೆ ಕಾರ್ಯಕ್ರಮಗಳು ಪೂರಕವಾಗಿವೆ ಎಂದು ವರುಣಾ ಶಾಸಕ ಡಾ.ಎಸ್.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ತಾಲೂಕಿನ ಗಗೇìಶ್ವರಿ ಗ್ರಾಮದಲ್ಲಿ ಕೃಷಿ ಅಭಿಯಾನದಡಿ ಆರಂಭಿಸಲಾಗಿರುವ ಕೃಷಿ ಯಂತ್ರಧಾರೆ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಗ್ರ ಕೃಷಿಗೆ ಉತ್ತೇಜನ ನೀಡಲು ಹಿಂದಿನ ಕಾಂಗ್ರೆಸ್ ಸರ್ಕಾರ ಆರಂಭಿಸಿದ ಕೃಷಿ ಅಭಿಯಾನ ರೈತರಿಗೆ ಉಪಯುಕ್ತವಾಗಿದೆ ಎಂದರು.
ರಿಯಾಯಿತಿ ದರ: ಆಧುನಿಕತೆಗೆ ತಕ್ಕಂತೆ ಕೃಷಿಯಲ್ಲಿ ಯಂತ್ರಗಳನ್ನು ಬಳಕೆ ಮಾಡುವ ಅಗತ್ಯವಿದ್ದು, ರೈತರು ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಕೃಷಿ ಯಂತ್ರಧಾರೆ ಸೇವಾ ಕೇಂದ್ರ ಸ್ಥಳೀಯವಾಗಿ ರೈತರಿಗೆ ಉಪಯೋಗವಾಗಲಿದೆ. ರಾಜ್ಯ ಸರ್ಕಾರದ ಸಹಾಯಧನದಲ್ಲಿ ತೆರೆದಿರುವ ಸೇವಾಕೇಂದ್ರದಲ್ಲಿ ರೈತರಿಗೆ ರಿಯಾಯಿತಿ ದರದಲ್ಲಿ ಕೃಷಿ ಯಂತ್ರಗಳು ಸಿಗಲಿವೆ. ಇಂತಹ ಸೌಲಭ್ಯವನ್ನು ಬಳಸಿಕೊಂಡು ಅನ್ನದಾತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಅವರು ಸಲಹೆ ನೀಡಿದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಇವುಗಳ ಮಾಹಿತಿ ಪಡೆದು ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು. ಇಲಾಖೆಗಳ ಅಧಿಕಾರಿಗಳು ಫಲಾನುಭವಿಗಳಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಹೋಬಳಿಗಳಲ್ಲಿ ಕೇಂದ್ರ ಸ್ಥಾಪನೆ: ಸಹಾಯಕ ಕೃಷಿ ನಿರ್ದೇಶಕಿ ಸುಂದರಮ್ಮ ಮಾತನಾಡಿ, ಕೃಷಿ ಅಭಿಯಾನ ಯೋಜನೆಯಡಿ ತಾಲೂಕಿನ ಎಲ್ಲಾ ಹೋಬಳಿ ಕೇಂದ್ರಗಳಲ್ಲೂ ಕೃಷಿ ಯಂತ್ರಧಾರೆ ಸೇವಾ ಕೇಂದ್ರಗಳನ್ನು ತೆರೆಯಲಾಗಿದ್ದು, ಯಂತ್ರಗಳ ನಿರ್ವಹಣೆ ಹೊಣೆಯನ್ನು ಖಾಸಗಿ ಸಂಸ್ಥೆಗೆ ನೀಡಲಾಗಿದೆ. ಆಯಾ ಹೋಬಳಿ ಕೇಂದ್ರಗಳ ವ್ಯಾಪ್ತಿಯಲ್ಲಿರುವ ರೈತರು ಕೃಷಿ ಯಂತ್ರಧಾರೆ ಸೇವಾಕೇಂದ್ರದಲ್ಲಿ ಯಂತ್ರಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಎಚ್.ಎನ್. ಉಮೇಶ್, ಸದಸ್ಯರಾದ ಬಿ. ಸಾಜಿದ್ ಅಹಮದ್, ಎಂ. ರಮೇಶ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಗಣೇಶ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಕೆ.ಎಂ. ಮಹದೇವಣ್ಣ, ಕುರುಬರ ಸಂಘದ ಮಾಜಿ ಅಧ್ಯಕ್ಷ ಟಿ. ಎಸ್.ಪ್ರಶಾಂತ್ ಬಾಬು, ವರುಣಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಮುದ್ದೇಗೌಡ, ಮಹಿಳಾ ಅಧ್ಯಕ್ಷೆ ಕುಪ್ಯಾ ಭಾಗ್ಯಮ್ಮ, ಕೃಷಿ ಅಧಿಕಾರಿ ಕೆ.ಕಾವ್ಯ, ಕೇಂದ್ರದ ಮುಖ್ಯಸ್ಥರಾದ ಮಾರುತಿ, ಉಮೇಶ್, ಪಿ.ಶಿವಕುಮಾರ್, ಜನಾರ್ದನ್, ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಮುಖಂಡರಾದ ಜಿ.ಎಂ.ಗೋಪಾಲರಾಜು, ಎಂ.ವೆಂಕಟೇಶ್, ರಮೇಶ್ ಚಾವ್ಲಾ, ಡೇರಿ ನಿಂಗರಾಜು, ಎಚ್.ಸಿ.ಅರುಣಕುಮಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.