ಮೈಸೂರು: ಪರಿಸರ ಸ್ನೇಹಿ ಗೌರಿ ಗಣೇಶ ಹಬ್ಬದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ವಿಷಕಾರಿ ರಾಸಾಯನಿಕ ಬಣ್ಣ ಬಳಸಿ ತಯಾರಿಸಿರುವ ಗಣೇಶ ಮೂರ್ತಿಗಳನ್ನು ಬಳಸಬಾರದೆಂದು ಮಹಾ ನಗರಪಾಲಿಕೆ ಆಯುಕ್ತ ಜಿ.ಜಗದೀಶ್ ಮನವಿ ಮಾಡಿದ್ದಾರೆ.
ವಿಷಕಾರಿ ರಾಸಾಯನಿಕ, ಲೋಹ ಲೇಪದ, ಪ್ಲಾಸ್ಟರ್ ಆಫ್ ಪ್ಯಾರಿಸ್‌ನ ಗಣೇಶನ ಮೂರ್ತಿ ಬಳಸಬಾರದು. ಸಾದಾ ಜೇಡಿ ಮಣ್ಣಿನ ಪುಟ್ಟ ಗಣೇಶ ವಿಗ್ರಹವನ್ನು ಸ್ಥಾಪಿಸಿ, ಎಲೆ, ಹೂವುಗಳಿಂದ ಮಾಡಿದ, ನೈಸರ್ಗಿಕ ಬಣ್ಣ ಹಚ್ಚಿದ ಗಣಪನನ್ನೇ ಪೂಜಿಸಬೇಕೆಂದು ಕೋರಿದ್ದಾರೆ.
ಸಾಮೂಹಿಕವಾಗಿ ನಡೆಸುವ ಗಣೇಶನ ಚಪ್ಪರಕ್ಕೆ ಪರಿಸರ ಸ್ನೇಹಿ ವಸ್ತುಗಳನ್ನೇ ಬಳಸಬೇಕು. ಎಲ್ಲೂ ಪ್ಲಾಸ್ಟಿಕ್ ವಸ್ತುಗಳ ಬಳಸಬಾರದು. ಬಾವಿ, ಕೆರೆ, ಹೊಳೆಗಳಲ್ಲಿ ಗಣಪತಿ ವಿಸರ್ಜನೆ ಮಾಡಬಾರದು. ಹಾಗೆ ಮಾಡಿದರೆ ಅಂತರ್ಜಲ, ಕುಡಿಯುವ ನೀರಿನ ಸೆಲೆ ಎಲ್ಲವೂ ಮಲಿನಗೊಳ್ಳುತ್ತವೆ. ಬದಲಿಗೆ ಬಕೆಟ್‌ನಲ್ಲಿ, ಸಂಚಾರಿ ವಿಸರ್ಜನಾ ವಾಹನದಲ್ಲಿ ವಿಸರ್ಜಿಸಿ, ಸೂಚಿತ ಕೆರೆಗಳಲ್ಲಿ ವಿಸರ್ಜಿಸುವ ಮುನ್ನ ಹೂವು, ವಸ್ತ್ರ, ಪ್ಲಾಸ್ಟಿಕ್ ಹಾರ ಎಲ್ಲವನ್ನೂ ತೆಗೆಯಬೇಕೆಂದು ಮನವಿ ಮಾಡಿದ್ದಾರೆ.
ಪಟಾಕಿ ಬೇಡ: ಗಣಪತಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸಬಾರದು. ಪಟಾಕಿ ಹೊಗೆ ವಿಷಪೂರಿತವಾಗಿರುತ್ತದೆ. ಅಲ್ಲದೆ ರಸ್ತೆ ತುಂಬಾ ಕಸವಾಗುತ್ತದೆ. ಗಣೇಶ ಹಬ್ಬದಲ್ಲಿ ರಸ್ತೆ, ಚರಂಡಿಯಲ್ಲಿ ಹೂವಿನ ಹಾರ, ತಟ್ಟೆ, ಲೋಟ, ಎಲೆ ಎಸೆಯಬಾರದೆಂದು ತಿಳಿಸಿದ್ದಾರೆ.
ತಯಾರಿಕೆ ನಿಷೇಧ: ಗಣೇಶ ಮತ್ತು ಗೌರಿ ಮೂರ್ತಿಗಳನ್ನು ತಯಾರಿಸುವವರು ಹಾಗೂ ಮಾರುವವರು ವಿಷಪೂರಿತ, ರಾಸಾಯನಿಕವುಳ್ಳ ಬಣ್ಣ ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್ ಅನ್ನು ಮೂರ್ತಿಗಳ ತಯಾರಿಕೆಗೆ ಉಪಯೋಗಿಸಬಾರದು. ಒಂದು ವೇಳೆ ಈ ರೀತಿಯ ಮೂರ್ತಿಗಳನ್ನು ತಯಾರಿಸುವುದು ಅಥವಾ ಉಪಯೋಗಿಸುವುದು ಕಂಡುಬಂದರೆ ಅಂತಹ ಮೂರ್ತಿಗಳನ್ನು ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಜಪ್ತಿ ಮಾಡಿ ದಂಡ ವಿಧಿಸಲಾಗುವುದು.
ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದೆಂದು ತಿಳಿಸಿದ್ದಾರೆ. ನಗರ ಹೊಂದಿರುವ ಪರಿಸರ ಸ್ನೇಹಿ ಹಾಗೂ ಸ್ವತ್ಛನಗರ ಎಂಬ ಗರಿಮೆಯನ್ನು ಕಾಪಾಡಬೇಕೆಂದು ಮಹಾ ನಗರಪಾಲಿಕೆ ಆಯುಕ್ತ ಜಿ.ಜಗದೀಶ್ ಸೂಚಿಸಿದ್ದಾರೆ.