Advertisement

ವೈದ್ಯರಲ್ಲಿ ಚರ್ಚಿಸಿಯೇ ಡೆಂಗ್ಯೂ ಔಷಧ ಬಳಸಿ: ಡಾ|ಅಮಿತ್‌

12:34 AM Aug 03, 2019 | mahesh |

ಈಶ್ವರಮಂಗಲ: ಡೆಂಗ್ಯೂ ಜ್ವರ ಎಲ್ಲೆಡೆ ಕಾಣಿಸಿಕೊಳ್ಳುತ್ತಿದ್ದು, ಇದಕ್ಕೆ ಹಲವು ಔಷಧಗಳ ಹೆಸರುಗಳನ್ನು ನಮೂದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚುತ್ತಿದ್ದಾರೆ. ಇದು ಸರಿಯಾದ ಔಷಧವೇ ಎಂದು ಅಮಳ ರಾಮಚಂದ್ರ ವೈದ್ಯರ ಸಲಹೆ ಕೇಳಿದ ಘಟನೆ ಪೆರ್ಲಂಪಾಡಿ ಅಂಬೇಡ್ಕರ್‌ ಸಭಾಭವನದಲ್ಲಿ ಗ್ರಾ.ಪಂ. ಅಧ್ಯಕ್ಷೆ ಗಿರಿಜಾ ಧನಂಜಯ ಪೂಜಾರಿ ಅಧ್ಯಕ್ಷತೆಯಲ್ಲಿ ಜರಗಿದ ಕೊಳ್ತಿಗೆ ಗ್ರಾಮಸಭೆ ನಡೆಯಿತು.

Advertisement

ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಅಮಿತ್‌ ಉತ್ತರಿಸಿ, ಡೆಂಗ್ಯೂಗೆ ನಿಖರವಾದ ಔಷಧವಿಲ್ಲ. ಡೆಂಗ್ಯೂ ಬಾಧಿತರಿಗೆ ವಿಶ್ರಾಂತಿ ಮುಖ್ಯ. ಜಾಲತಾಣಗಳಲ್ಲಿ ನಮೂದಿಸಿರುವ ಔಷಧಗಳ ಬಗ್ಗೆ ಅಧಿಕೃತ ದಾಖಲೆ ಇಲ್ಲ. ಇಂತಹ ಸುದ್ದಿಗಳನ್ನು ನಂಬುವ ಮೊದಲು ವೈದ್ಯರನ್ನು ಭೇಟಿ ಮಾಡುವುದು ಸೂಕ್ತ ಎಂದರು.

ಉತ್ತಮ ಸೇವೆ ಸಲ್ಲಿಸುತ್ತಿರುವ ಡಾ| ಅಮಿತ್‌ಗೆ ಗ್ರಾಮಸ್ಥರ ಪರವಾಗಿ ಪ್ರಮೋದ್‌ ಕೆ.ಎಸ್‌. ಅಭಿ ನಂದನೆ ಸಲ್ಲಿಸಿದರು. ಡಾ| ಅಮಿತ್‌ ಅವರಿಗೆ ತಿಂಗಳಾಡಿ ಆಸ್ಪತ್ರೆಯ ಹೆಚ್ಚುವರಿ ಚಾರ್ಜ್‌ ನೀಡಲಾಗಿದ್ದು, ಕೊಳ್ತಿಗೆ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ವಾರ ಪೂರ್ತಿ ದಿನ ಕೊಳ್ತಿಗೆಯಲ್ಲೇ ಇರುವಂತೆ ಆರೋಗ್ಯ ಇಲಾಖೆಗೆ ಮನವಿ ಮಾಡಿಕೊಳ್ಳುವಂತೆ ನಿರ್ಣಯಿಸಲಾಯಿತು.

ಕಾರ್ಯಕರ್ತೆಯರ ವಿರುದ್ಧ ಆರೋಪ
ಕಾರ್ಯಕರ್ತೆಯರು ಅಂಗನವಾಡಿಗಳಲ್ಲಿ ಇರುವುದೇ ಇಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಸರಕಾರ ಅವರನ್ನು ಬೇರೆ ಕೆಲಸಗಳಿಗೆ ನಿಯೋಜನೆ ಮಾಡುತ್ತಿದೆ. ಕಾರ್ಯಕರ್ತೆಯರು ಇಲ್ಲದಿದ್ದರೆ ಅಂಗನವಾಡಿಗಳು ಏಕೆ ಬೇಕು? ಬೇರೆ ಯಾವುದೇ ಕೆಲಸಗಳನ್ನು ಅವರಿಗೆ ವಹಿಸಬಾರದು. ಅಂಗನವಾಡಿಗಳಲ್ಲಿ ರಿಜಿಸ್ಟ್ರರ್‌ ಇರಿಸಬೇಕು ಎಂದು ಪ್ರಮೋದ್‌ ಕೆ.ಎಸ್‌. ತಿಳಿಸಿದರು.

ಸರಕಾರಕ್ಕೆ ಮನವಿ
ಅಂಗನವಾಡಿ ಕಾರ್ಯಕರ್ತೆಯರು ಇತರ ಕೆಲಸಗಳಿಗೆ ಹೋಗುವಾಗ ಬಿಳಿ ಹಾಳೆಯಲ್ಲಿ ಬರೆದಿಡುತ್ತಾರೆ ಅಥವಾ ಮೇಲ್ವಿಚಾರಕರಿಗೆ ತಿಳಿಸುತ್ತಾರೆ ಎಂದು ಮೇಲ್ವಿಚಾರಕಿ ಸರೋಜಿನಿ ತಿಳಿಸಿದರು. ಬಿಳಿ ಹಾಳೆಯಲ್ಲಿ ಬರೆದಿಡುವ ಕ್ರಮ ಸರಿಯಲ್ಲ. ರಿಜಿಸ್ಟ್ರರ್‌ ಇಟ್ಟುಕೊಳ್ಳುವುದು ಸೂಕ್ತ ಎಂದು ಪ್ರಮೋದ್‌ ತಿಳಿಸಿದರು. ಅಂಗನವಾಡಿಗಳಿಂದ ಮಕ್ಕಳಿಗೆ ಸೂಕ್ತವಾಗಿ ಆಹಾರ ಧಾನ್ಯ ಸಿಗುತ್ತಿಲ್ಲ ಎಂಬ ಆರೋಪವೂ ಇದೆ ಎಂದ ಪ್ರಮೋದ್‌ ಹೇಳಿದಾಗ ಪ್ರತಿಕ್ರಿಯಿಸಿದ ಸರೋಜಿನಿ, ಆಹಾರ ಸರಿಯಾಗಿ ಕೊಡುತ್ತಿದ್ದಾರೆ. ಮಕ್ಕಳ ಮನೆಯವರು ಆಹಾರ ಒಯ್ದಿರುವ ಬಗ್ಗೆ ಪುಸ್ತಕದಲ್ಲಿ ಸಹಿ ಮಾಡಿರುತ್ತಾರೆ ಎಂದರು. ಅಂಗನವಾಡಿ ಕಾರ್ಯಕರ್ತೆಯರನ್ನು ಇತರ ಕೆಲಸಗಳಿಗೆ ನಿಯೋಜನೆ ಮಾಡುವುದನ್ನು ಕೈಬಿಡಬೇಕೆಂದು ಜಿಲ್ಲಾಧಿಕಾರಿಗೆ ಹಾಗೂ ಸರಕಾರಕ್ಕೆ ಬರೆಯಲು ನಿರ್ಣಯಿಸಲಾಯಿತು.

Advertisement

ಈ ಹಿಂದೆ ಗ್ರಾ.ಪಂ. ಸದಸ್ಯರೇ ಬಾಲವಿಕಾಸ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದರು. ಆದರೆ ಸರಕಾರ ಅದನ್ನು ರದ್ದು ಮಾಡಿ ಮಕ್ಕಳ ಹೆತ್ತವರನ್ನೇ ಅಧ್ಯಕ್ಷರನ್ನಾಗಿ ಮಾಡಿದೆ. ಇದರಿಂದ ಮಕ್ಕಳಿಗೆ ಆಗುವ ಅನ್ಯಾಯವನ್ನು ಹೇಳಿಕೊಳ್ಳಲು ಆಗುವುದಿಲ್ಲ. ಗ್ರಾಪಂ ಸದಸ್ಯರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ಗ್ರಾಮಸ್ಥರ ಬೇಡಿಕೆಯಂತೆ ಸರಕಾರಕ್ಕೆ ಬರೆಯುವುದೆಂದು ತೀರ್ಮಾನಿಸಲಾಯಿತು.

ಚಿಕ್ಕ ಶೌಚಾಲಯಗಳು
ಉದ್ಯೋಗ ಖಾತರಿ ಯೋಜನೆಯಡಿ ಮಣಿಕ್ಕರದಲ್ಲಿ ನಿರ್ಮಿಸಿದ 5 ಶೌಚಾಲಯಗಳು ತೀರಾ ಚಿಕ್ಕದಾಗಿದ್ದು, ಬಳಸಲು ಯೋಗ್ಯವಾಗಿಲ್ಲ. ಗ್ರಾ.ಪಂ. ಕಟ್ಟಿಸಿಕೊಟ್ಟಿದೆ. ನಮ್ಮ ಖಾತೆಗೆ ಬಂದ ಹಣವನ್ನೂ ಅವರಿಗೇ ನೀಡಿದ್ದೇವೆ ಎಂದು ಮಣಿಕ್ಕರ ಕಾಲನಿ ನಿವಾಸಿ ಲತಾ ಆರೋಪಿಸಿದರು. ಧ್ವನಿಗೂಡಿಸಿದ ಅಮಳ ರಾಮಚಂದ್ರ, ಉದ್ಯೋಗ ಖಾತರಿ ಯೋಜನೆಯಲ್ಲಿ ಶೌಚಾಲಯವನ್ನು ಗುತ್ತಿಗೆ ಕೊಡುವ ಅಧಿಕಾರ ಇದೆಯೇ ಎಂದು ಪ್ರಶ್ನಿಸಿದರು. ಈ ಬಗ್ಗೆ ಪರಿಶೀಲಿಸಿ, ಸರಿಪಡಿಸುವುದಾಗಿ ಪಿಡಿಒ ಸುನೀಲ್ ಎಚ್.ಟಿ. ಹಾಗೂ ಸದಸ್ಯ ಸುಂದರ ಪೂಜಾರಿ ತಿಳಿಸಿದರು.

ಚರ್ಚೆಗೆ ಗ್ರಾಸವಾದ ‘ಮಂಚ’
ಅಂಗವಿಕಲರಿಗೆ ಗ್ರಾಪಂನಿಂದ ನೀಡಿದ ಮಂಚದ ವಿಷಯದಲ್ಲಿ ಚರ್ಚೆ ನಡೆಯಿತು. ಪ್ರಮೋದ್‌ ಕೆ.ಎಸ್‌. ಮಾತನಾಡಿ, ಒಬ್ಬರಿಗೆ 5,800 ರೂ., ಇನ್ನೊಬ್ಬರಿಗೆ 7,800 ರೂ. ಬೆಲೆಯ ಮಂಚ ನೀಡಲಾಗಿದೆ. ದರದಲ್ಲಿ ವ್ಯತ್ಯಾಸವಿದ್ದರೂ ಒಂದೇ ರೀತಿಯ ಮಂಚ ನೀಡಲಾಗಿದೆ. ಎಂದರು. ಹಣ ದುರುಪಯೋಗ ಆಗಿಲ್ಲ. ಬಿಲ್ ಇದೆ. ಜಮಾಬಂಧಿ ಸಭೆಗೆ ಬನ್ನಿ ಎಂದು ಪಿಡಿಒ ಹೇಳಿದರು. ಎಲ್ಲದ್ದಕ್ಕೂ ಜಮಾಬಂಧಿ ಸಭೆಯಲ್ಲೇ ಉತ್ತರ ನೀಡುವುದಾದರೆ ಗ್ರಾಮಸಭೆ ಏಕೆ ಎಂದು ಗಂಗಾಧರ ಗೌಡ ಕೆಮ್ಮಾರ ಕೇಳಿದರು.

ಸರಕಾರಿ ಶಾಲೆಗೆ ಬಿಇಒ ಬರುತ್ತಿಲ್ಲ
ಕ್ಷೇತ್ರ ಶಿಕ್ಷಣಾಧಿಕಾರಿ ಸರಕಾರಿ ಶಾಲೆಗಳಿಗೆ ಭೇಟಿ ಕೊಡುತ್ತಿಲ್ಲ. ಖಾಸಗಿ ಶಾಲೆಗಳಿಗೆ ಹೋಗುತ್ತಾರೆ ಎಂದು ಪ್ರಮೋದ್‌ ಆರೋಪಿಸಿದರು. ಅಧಿಕಾರಿಗಳೇ ಹೀಗೆ ಮಾಡಿದರೆ ಹೇಗೆ? ಶಿಕ್ಷಕರು ಸಕಾಲದಲ್ಲಿ ಶಾಲೆಗೆ ಬರುತ್ತಿಲ್ಲ. ಶಿಕ್ಷಣ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಪೆರ್ಲಂಪಾಡಿ ಶಾಲೆಯನ್ನು ಪಬ್ಲಿಕ್‌ ಸ್ಕೂಲ್ ಆಗಿ ಪರಿವರ್ತಿಸುವಲ್ಲಿ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವಿದ್ಯುತ್‌ ಸಮಸ್ಯೆ ಕುರಿತು ಮೆಸ್ಕಾಂ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಕಾವು ಮತ್ತು ಮಾಡಾವಿನಲ್ಲಿ ಸಬ್‌ಸ್ಟೇಷನ್‌ ನಿರ್ಮಾಣವಾದರೆ ಸಮಸ್ಯೆ ಕಡಿಮೆಯಾಗುತ್ತದೆ ಎಂದು ಹೇಳುತ್ತಿದ್ದಾರೆ. ಶೀಘ್ರ ಸಬ್‌ಸ್ಟೇಷನ್‌ ಕಾಮಗಾರಿ ಮುಗಿಸುವಂತೆ ಮೆಸ್ಕಾಂ ಮೇಲಧಿಕಾರಿಗಳಿಗೆ ಬರೆಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ದೀನ ದಯಾಳ್‌ ಯೋಜನೆಯಡಿ ವಿದ್ಯುತ್‌ ಸಂಪರ್ಕ ಪಡೆದವರಿಗೆ ಬಿಲ್ ಬರುತ್ತಿರುವ ಬಗ್ಗೆ ಅಮಳ ರಾಮಚಂದ್ರ ಪ್ರಶ್ನಿಸಿದರು. ಬಿಪಿಎಲ್ ಕಾರ್ಡ್‌ದಾರರಿಗೆ ಬಿಲ್ನಲ್ಲಿ ವಿನಾಯಿತಿ ನೀಡಬೇಕು ಎಂದರು. ಗ್ರಾಮೀಣ ಪ್ರದೇಶದಲ್ಲೂ ತ್ರಿಫೇಸ್‌ ವಿದ್ಯುತ್‌ ವಿದ್ಯುತ್‌ ಪೂರೈಕೆ ಮತ್ತು ವಿದ್ಯುತ್‌ ನಿಲುಗಡೆ ಬಗ್ಗೆ ಗ್ರಾಹಕರಿಗೆ ಎಸ್‌ಎಂಎಸ್‌ ಕಳುಹಿಸುವ ವ್ಯವಸ್ಥೆ ಮಾಡಬೇಕು ಎಂದು ಮೆಸ್ಕಾಂ ಜೆಇ ನಿತ್ಯಾನಂದ ತೆಂಡೂಲ್ಕರ್‌ ಅವರನ್ನು ಆಗ್ರಹಿಸಿದರು.

ಇತರ ನಿರ್ಣಯಗಳು
ಮೊಗಪ್ಪೆ ಬಸ್ಸು ತಂಗುದಾಣದಲ್ಲಿ ಪ್ರಯಾಣಿಕರಿಗೆ ನಿಲ್ಲಲು ಸಾಧ್ಯವಾಗುತ್ತಿಲ್ಲ. ಶೀಘ್ರ ಸರಿಪಡಿಸಿ ಎಂದು ಗಿರಿಧರ್‌ ಪಾಂಬಾರು ಹೇಳಿದರು. ಗ್ರಾಮಸಭೆಯ ವರದಿಯನ್ನು ಮುಂದಿನ ಬಾರಿ ಎಲ್ಲರಿಗೂ ಕೊಡುವುದೆಂದು ನಿರ್ಣಯಿಸಲಾಯಿತು.

ಉಮೇಶ್‌ ಮಿತ್ತಡ್ಕ ಮಳೆನೀರು ಕೊಯ್ಲು ಮಾಹಿತಿ ನೀಡಿದರು. ಪಂಚಾಯತ್‌ರಾಜ್‌ ಸಹಾಯಕ ಕಾ.ನಿ. ಅಭಿಯಂತರರು ನೋಡಲ್ ಅಧಿಕಾರಿಯಾಗಿದ್ದರು. ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಅನಿತಾ ಹೇಮನಾಥ ಶೆಟ್ಟಿ, ಉಪಾಧ್ಯಕ್ಷೆ ಮಲ್ಲಿಕಾ, ಸದಸ್ಯರಾದ ತೀರ್ಥಾನಂದ ದುಗ್ಗಳ, ಹರೀಶ್‌ ನಾಯ್ಕ, ಸುಂದರ ಪೂಜಾರಿ ಎಂ., ಪವನ್‌ ಡಿ.ಜಿ. ದೊಡ್ಡಮನೆ, ದೇವಾನಂದ ರೈ, ಯಶೋದಾ ಕೆ., ಭರತ್‌ ಕುಮಾರ್‌ ಕೆ.ಎಂ., ಪ್ರೇಮಾವತಿ ಎ.ಪಿ., ಶಿವರಾಮ ಭಟ್, ಷಣ್ಮುಖಲಿಂಗಂ, ಚಂದ್ರಾವತಿ, ಲಲಿತಾ, ವೀಣಾ, ವಾರಿಜಾ ಉಪಸ್ಥಿತರಿದ್ದರು. ಕಾರ್ಯದರ್ಶಿ ಲಕ್ಷ್ಮೀ ವಂದಿಸಿದರು. ಗುಮಾಸ್ತೆ ಶಶಿಕಲಾ ವರದಿ ವಾಚಿಸಿದರು. ಸಿಬಂದಿ ಜಯ ಎಸ್‌., ನಾಗೇಶ ಬಿ. ಸಹಕರಿಸಿದರು.

ಕಾಮಗಾರಿಗಳ ಲೆಕ್ಕಚಾರದಂತೆ ಉಳಿಕೆ ಕಾಮಗಾರಿ 26 ಲಕ್ಷ ರೂ. ಎಂದು ನಮೂದಿಸಿದ್ದೀರಿ. ಈ ಉಳಿಕೆ ಹಣದ ಕಾಮಗಾರಿ ಯಾವುದು ತಿಳಿಸಿ ಎಂದು ಅಮಳ ರಾಮಚಂದ್ರ, ಮುರಳೀಧರ ಎಸ್‌.ಪಿ., ಪ್ರಮೋದ್‌ ಕೆ.ಎಸ್‌. ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸುನೀಲ್, 5 ವರ್ಷಗಳಿಂದ ಕೆಲವು ಕಾಮಗಾರಿಗಳು ಅರ್ಧದಲ್ಲಿ ಬಾಕಿಯಾಗಿವೆ. ಅವುಗಳಿಗೆ ಇನ್ನಷ್ಟೇ ಬಿಲ್ ಆಗಬೇಕು ಎಂದರು. ಕಾಮಗಾರಿಗಳು ಯಾವುವು ತಿಳಿಸಿ ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ಸದಸ್ಯ ತೀರ್ಥಾನಂದ ದುಗ್ಗಳ ಮಧ್ಯಪ್ರವೇಶಿಸಿ, ಈ ಎಲ್ಲ ಲೆಕ್ಕಾಚಾರಗಳನ್ನು ಗ್ರಾಪಂ ಸೂಚನ ಫ‌ಲಕದಲ್ಲಿ ಹಾಕಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದರು.

ಕಾಮಗಾರಿ ಯಾವುದು ತಿಳಿಸಿ
ಕಾಮಗಾರಿಗಳ ಲೆಕ್ಕಚಾರದಂತೆ ಉಳಿಕೆ ಕಾಮಗಾರಿ 26 ಲಕ್ಷ ರೂ. ಎಂದು ನಮೂದಿಸಿದ್ದೀರಿ. ಈ ಉಳಿಕೆ ಹಣದ ಕಾಮಗಾರಿ ಯಾವುದು ತಿಳಿಸಿ ಎಂದು ಅಮಳ ರಾಮಚಂದ್ರ, ಮುರಳೀಧರ ಎಸ್‌.ಪಿ., ಪ್ರಮೋದ್‌ ಕೆ.ಎಸ್‌. ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸುನೀಲ್, 5 ವರ್ಷಗಳಿಂದ ಕೆಲವು ಕಾಮಗಾರಿಗಳು ಅರ್ಧದಲ್ಲಿ ಬಾಕಿಯಾಗಿವೆ. ಅವುಗಳಿಗೆ ಇನ್ನಷ್ಟೇ ಬಿಲ್ ಆಗಬೇಕು ಎಂದರು. ಕಾಮಗಾರಿಗಳು ಯಾವುವು ತಿಳಿಸಿ ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ಸದಸ್ಯ ತೀರ್ಥಾನಂದ ದುಗ್ಗಳ ಮಧ್ಯಪ್ರವೇಶಿಸಿ, ಈ ಎಲ್ಲ ಲೆಕ್ಕಾಚಾರಗಳನ್ನು ಗ್ರಾಪಂ ಸೂಚನ ಫ‌ಲಕದಲ್ಲಿ ಹಾಕಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next