ರಾಮನಗರ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ (ಪಿಎಂ ಕಿಸಾನ್) ರೈತರು ವಾರ್ಷಿಕ 6 ಸಾವಿರ ರೂ. ಪಡೆಯಬಹುದಾಗಿದೆ. ಕಂದಾಯ ಇಲಾಖೆ ಸಹಯೋಗದೊಂದಿಗೆ ಸಿದ್ಧಪಡಿಸಿರುವ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ. ರಾಜೇಂದ್ರ ತಿಳಿಸಿದ್ದಾರೆ.
ಮೊಬೈಲ್ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಂಡು, ಸ್ವಯಂ ದೃಢೀಕರಣ ಪತ್ರದಲ್ಲಿ ಅಗತ್ಯ ಮಾಹಿತಿ ಭರ್ತಿ ಮಾಡಿ, ಮೊಬೈಲ್ ಮೂಲಕವೇ ಫೋಟೊ ತೆಗೆದು ರೈತರೇ ಅಪ್‌ಲೋಡ್ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.
ಆ್ಯಪ್ ಅನ್ನು ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು ಮತ್ತು ರೈತರು ಬಳಸಬಹುದಾಗಿದೆ. ಈ ತಂತ್ರಾಂಶದಲ್ಲಿ ತಮ್ಮ ಜುಮೀನು ಇರುವ ಜಿಲ್ಲೆ, ತಾಲೂಕು, ಹೋಬಳಿ ಮತ್ತು ಗ್ರಾಮವನ್ನು ಆಯ್ಕೆ ಮಾಡಿ ನಂತರ ತಮ್ಮ ಮೊಬೈಲ್ ನಂಬರ್ ಅನ್ನು ದಾಖಲಿಸಿ ಮುಂದುವರಿಯಬೇಕು. ಮುಂದಿನ ಹಂತದಲ್ಲಿ ನಾಲ್ಕು ಸಂಖ್ಯೆಯ ಪಾಸ್‌ವರ್ಡ್ ನಂಬರ್ ದಾಖಲಿಸಬೇಕು. ನಂತರ ಗ್ರಾಮವನ್ನು ಆಯ್ಕೆ ಮಾಡಿ ಆಪ್‌ಲೋಡ್ ಎಂಬ ಬಟನ್ ಒತ್ತಬೇಕು ಎಂದಿದ್ದಾರೆ.
ಆಧಾರ್ ಮಾಹಿತಿ ದಾಖಲಿಸಿ: ಈ ಹಂತದಲ್ಲಿ ಗ್ರಾಮಕ್ಕೆ ಸಂಬಂಧಿಸಿದ ಭೂ ದಾಖಲೆಗಳ ವಿವರಗಳು ನೇರವಾಗಿ ಭೂಮಿ ದತ್ತಾಂಶದಿಂದ ಮೊಬೈಲ್ಗೆ ಡೌನ್‌ಲೋಡ್ ಆಗುತ್ತದೆ. ಸರ್ವೇ ಸಂಖ್ಯೆ ದಾಖಲಿಸಿ ಸ್ವಾಧೀನದಾರನ ಹೆಸರನ್ನು ಆಯ್ಕೆ ಮಾಡಬೇಕು. ವರ್ಗ, ಸಣ್ಣ, ಅತಿ ಸಣ್ಣ ಹಿಡುವಳಿದಾರ ಮಾಹಿತಿಯನ್ನು ಆಯ್ಕೆ ಮಾಡಿ ದೃಢೀಕರಿಸಿದ ನಂತರ ಆಧಾರ್ ಮಾಹಿತಿಯನ್ನು ದಾಖಲಿಸಬೇಕು ಅಥವಾ ಆಧಾರ್ ಮಾಹಿತಿಯನ್ನು ನೇರವಾಗಿ ಆಧಾರ್ ಕಾರ್ಡ್ ನಲ್ಲಿರುವ ಕ್ಯೂಆರ್ ಕೋಡ್ ಅನ್ನು ಮೊಬೈಲ್ನಿಂದ ಸ್ಕ್ಯಾನ್ ಮಾಡುವ ಮೂಲಕವು ಸ್ವಯಂಚಾಲಿತವಾಗಿ ಆಧಾರ್ ವಿವರ ದಾಖಲಿಸುವ ಸೌಲಭ್ಯವು ಇದೆ ಎಂದು ವಿವರಿಸಿದ್ದಾರೆ.
ಕೇಂದ್ರ ಸರ್ವರ್‌ಗೆ ರವಾನೆ: ಮೊಬೈಲ್ ಸಂಖ್ಯೆ, ಬ್ಯಾಂಕ್ ವಿವರ, ಐಎಫ್ಎಸ್ಸಿ ಸಂಖ್ಯೆ ನಮೂದಿಸುವ ಮೂಲಕ ಸ್ವಯಂ ಚಾಲಿತವಾಗಿ ಬ್ಯಾಂಕ್ ಮತ್ತು ಬ್ರಾಂಚ್ ಹೆಸರು ಆಯ್ಕೆಯಾಗುವಂತೆ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಎಲ್ಲ ಪ್ರಕ್ರಿಯೆಯು ಮುಗಿದ ನಂತರ ದತ್ತಾಂಶವನ್ನು ಉಳಿಸಿ ಸರ್ವೇ ನಂಬರ್‌ನ್ನು ದಾಖಲಿಸಬಹುದು. ಅಂತಿಮ ಹಂತದಲ್ಲಿ ಎಲ್ಲ ದತ್ತಾಂಶವನ್ನು ಅಪ್‌ಲೋಡ್ ಬಟನ್ ಒತ್ತುವ ಮೂಲಕ ಸಂಗ್ರಸಿದ ಮಾಹಿತಿ ಮತ್ತು ಛಾಯಾಚಿತ್ರಗಳನ್ನು ಕೇಂದ್ರ ಸರ್ವರ್‌ಗೆ ರವಾನೆಯಾಗಲಿದೆ ಎಂದು ತಿಳಿಸಿದ್ದಾರೆ.
ಪ್ರತ್ಯೇಕ ಮಾಹಿತಿ ಸಲ್ಲಿಸಿ: ಪಹಣಿಯಲ್ಲಿರುವ ಜಂಟಿ ಸ್ವಾಧೀನದಾರರು ಪ್ರತ್ಯೇಕವಾಗಿ ಮಾಹಿತಿಯನ್ನು ಸಲ್ಲಿಸಬೇಕು. ರೈತರು ರಾಜ್ಯದಲ್ಲಿ ಯಾವುದೇ ಭಾಗದಲ್ಲಿ ಹೊಂದಿರುವ ಜಮೀನಿನ ವಿವರಗಳನ್ನು ಸಲ್ಲಿಸಬಹುದಾಗಿದೆ. ಆಪ್ ಅಲ್ಲದೆ ಈಗಾಗಲೆ ರೈತರು ರೈತ ಸಂಪರ್ಕ ಕೇಂದ್ರ, ಬಾಪೂಜಿ ಸೇವಾ ಕೇಂದ್ರ, ನಾಡ ಕಚೇರಿ, ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಗೆ ತೆರಳಿ ಅರ್ಜಿ ನಮೂನೆ ಪಡೆದು ವಿವರಗಳನ್ನು ನಮೂಧಿಸಿ, ಸ್ವಯಂ ಘೋಷಣೆಯೊಂದಿಗೆ ಸಲ್ಲಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಸುಮಾರು 2 ಲಕ್ಷದ 69 ಸಾವಿರ ಭೂ ಒಡೆತನ ಹೊಂದಿರುವ ರೈತರಿದ್ದು, ಈ ಕೆಳಗಂಡವರನ್ನು ಹೊರತು ಪಡಿಸಿ ಉಳಿದವರು ಅರ್ಹರಿದ್ದಾರೆ. ಗ್ರೂಪ್ ಡಿ. ಹೊರತುಪಡಿಸಿ ನಿವೃತ್ತಿ ಹಾಗೂ ಹಾಲಿ ಸೇವೆಯಲ್ಲಿರುವ ಸರ್ಕಾರಿ ಅಧಿಕಾರಿ, ಸಿಬ್ಬಂದಿ, ಹತ್ತು ಸಾರಕ್ಕಿಂತ ಹೆಚ್ಚು ಮೊತ್ತ ಪಡೆಯುತ್ತಿರುವ ಪಿಂಚಣಿದಾರರು, ಆದಾಯ ತೆರಿಗೆ ಪಾವತಿದಾರರ ಕುಟುಂಬ, ಸಾಂವಿಧಾನಿಕ ಹುದ್ದೆ ಹೊಂದಿದ ಮಾಜಿ ಅಥವಾ ಹಾಲಿ ಕುಟುಂಬ, ಸಾಂಸ್ಥಿಕ ಭೂಮಾಲಿಕರ ಕುಟುಂಬ ಹಾಗೂ ವೈದ್ಯರು, ವಕೀಲರರು, ಅಭಿಯಂತರರು ಸೇರಿದಂತೆ ಇತರೆ ವೃತ್ತಿಪರರು ಈ ಯೋಜನೆ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿಸಿದ್ದಾರೆ.