ಬೆಂಗಳೂರು: ಬೊಮ್ಮನಹಳ್ಳಿ ವ್ಯಾಪ್ತಿಯ ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ಇಂಡಸ್ಟ್ರೀಯಲ್ ಟೌನ್‌ಷಿಪ್ ಅಥಾರಿಟಿ ವತಿಯಿಂದ ನಿರ್ಮಿಸಿರುವ ಹಸಿಕಸ ಸ್ವಯಂ ಚಾಲಿತ ಕಾಂಪೋಸ್ಟಿಂಗ್ ಘಟಕ ಹಾಗೂ ಕಮಾಂಡ್ ಕಂಟ್ರೋಲ್ ಸೆಂಟರ್‌ಗೆ ಮೇಯರ್ ಎಂ. ಗೌತಮ್‌ಕುಮಾರ್ ಅವರು ಮಂಗಳವಾರ ಅಧಿಕಾರಿಗಳೊಂದಿಗೆ ಭೇಟಿ ಮಾಡಿ ಪರಿಶೀಲನೆ ನಡೆಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ ದ ಮೇಯರ್, ಎಲೆಕ್ಟ್ರಾನಿಕ್ ಸಿಟಿಯ ಇಂಡಸ್ಟ್ರಿಯಲ್ ಟೌನ್‌ಷಿಪ್ ಅಥಾರಿಟಿಯಲ್ಲಿ ಹಸಿಕಸ ಸಂಸ್ಕರಣೆಗೆ ಅಭಿವೃದ್ಧಿಪಡಿಸಲಾಗಿರುವ ಯಂತ್ರಗಳನ್ನು ವಾರ್ಡ್ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸ್ವಯಂಚಾಲಿತ ಕಾಂಪೋಸ್ಟಿಂಗ್ ಘಟಕದಲ್ಲಿ ಹಸಿಕಸ 24 ಗಂಟೆಗಳ ಒಳಗಾಗಿ ಗೊಬ್ಬರವಾಗಿ ಬದಲಾಗುತ್ತದೆ ಎಂದರು.
ಸಾಮಾನ್ಯವಾಗಿ ಹಸಿಕಸ ಗೊಬ್ಬರವಾಗಿ ಬದಲಾಗಬೇಕಾದರೆ ಕನಿಷ್ಠ ಒಂದು ತಿಂಗಳು ಕಾಲಾವಕಾಶ ಬೇಕಾಗುತ್ತದೆ. ಆದರೆ, ಎಲೆಕ್ಟ್ರಾನಿಕ್ ಸಿಟಿಯ ಡಸ್ಟ್ರಿಯಲ್ ಟೌನ್ ಷಿಪ್ ಅಥಾರಿಟಿ ಅಭಿವೃದ್ಧಿ ಪಡಿಸಿರುವ ಶಾಖ ತಂತ್ರಾಂಶದ ಯಂತ್ರದ ಮೂಲಕ 24 ಗಂಟೆಗಳಲ್ಲಿ ಕಸ ಗೊಬ್ಬರವಾಗುತ್ತಿದೆ ಎಂದು ವಿವರಿಸಿದರು. ಹೀಗಾಗಿ, ಈ ತಂತ್ರಾಂಶವನ್ನು ಯಾವೆಲ್ಲಾ ವಾರ್ಡ್‌ನಲ್ಲಿ ಹೆಚ್ಚು ಹಸಿಕಸ ಉತ್ಪಾದನೆಯಾಗುತ್ತಿದೆಯೋ ಅಲ್ಲಿ ಈ ತಂತ್ರಾಂಶ ಬಳಸಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಎಲೆಕ್ಟ್ರಾನಿಕ್ ಸಿಟಿಯ ಇಂಡಸ್ಟ್ರಿಯಲ್ ಟೌನ್‌ಷಿಪ್ ಅಥಾರಿಟಿಯು ಕಮಾಂಡ್ ಕಂಟ್ರೋಲ್ ಸೆಂಟರ್ ಸ್ಥಾಪನೆ ಮಾಡಿದ್ದು, ಇದ ರಿಂದ ಒಂದೇ ಸ್ಥಳದಲ್ಲಿ ಘನತ್ಯಾಜ್ಯ ನಿರ್ವಹಣೆ, ಬೀದಿದೀಪ, ನೀರು, ಸಂಚಾರ ದಟ್ಟಣೆ, ಆಡಳಿತ ಹಾಗೂ ಸ್ಮಾರ್ಟ್ ಪಾರ್ಕಿಂಗ್‌ಗೆ ನೆರವಾಗಲಿದೆ. ಇದೇ ಮಾದರಿಯನ್ನು ಪಾಲಿಕೆ ವ್ಯಾಪ್ತಿಯಲ್ಲೂ ಅಳವಡಿಸಿಕೊಳ್ಳುವ ಚಿಂತನೆ ಇದೆ ಎಂದು ಮಾಹಿತಿ ನೀಡಿದರು. ಈ ವೇಳೆ ಶಾಸಕ ಸತೀಶ್ ರೆಡ್ಡಿ, ಉಪಮೇಯರ್ ರಾಮಮೋಹನ್ ರಾಜು, ಅಧೀಕ್ಷಕ ಎಂಜಿನಿಯರ್ ಬಸವರಾಜು ಕಬಾಡೆ, ಮುಖ್ಯ ಕಾರ್ಯನಿರ್ವಾಹಕ ಅಧಿ ಕಾರಿ ರಮಾ ಎನ್ ಎಸ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.